Advertisement
ನಗರದ 14, 15ನೇ ವಾರ್ಡ್‌ನ ಮಂಗಳವಾರ ಪೇಟೆಯಲ್ಲಿ ಕಳೆದ 6-7 ತಿಂಗಳ ಹಿಂದೆ ರಸ್ತೆ ಅಗಲೀಕರಣಕ್ಕೆಂದು ನಗರಸಭೆ ಸಾಕಷ್ಟು ಕಟ್ಟಡಗಳನ್ನು ತೆರವುಗೊಳಿಸಿದೆ. ಆದರೆ, ಈವರೆಗೂ ಅಲ್ಲಿ ರಸ್ತೆ ಕಾಮಗಾರಿಯನ್ನೇ ಆರಂಭಿಸಿಲ್ಲ. ಇದರಿಂದ ನಿವಾಸಿಗಳು, ವಾಹನ ಸವಾರರು, ಪ್ರಯಾಣಿಕರು ನಿತ್ಯ ಯಾತನೆ ಅನುಭವಿಸುತ್ತಿದ್ದು, ಈ ಕೂಪದಿಂದ ಎಂದು ಮುಕ್ತಿ ಸಿಗುವುದೋ ಎಂದು ನಗರಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
Related Articles
Advertisement
ನೀತಿ ಸಂಹಿತೆ ಅಡ್ಡಿ: ಹಿಂದೆ ಮೂರ್‍ನಾಲ್ಕು ತಿಂಗಳು ಅನಗತ್ಯ ನೆಪವೊಡ್ಡಿ ಕಾಮಗಾರಿ ಮುಂದೂಡಿದ್ದ ಅಧಿಕಾರಿಗಳು, ಬಳಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಕಾಮಗಾರಿ ಮುಂದೂಡಿದ್ದಾರೆ. ಇದರಿಂದ ಕಳೆದ 5-6 ತಿಂಗಳಿಂದ ಇಲ್ಲಿನ ಜನರಿಗೆ ನೆಮ್ಮದಿ ಇಲ್ಲದಾಗಿದೆ. ಆದರೆ, ಈಗ ನೀತಿ ಸಂಹಿತೆ ತೆರವಾಗಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಿಸಲಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ನಮಗೆ ಅಧಿಕಾರ ಸಿಕ್ಕಿಲ್ಲ: ಈ ಕುರಿತು ಚುನಾಯಿತ ಪ್ರತಿನಿಧಿಗಳನ್ನು ಸ್ಥಳೀಯರು ಪ್ರಶ್ನಿಸಿದರೆ, ಅವರು ಮಾತ್ರ ನಾವೇನು ಮಾಡುವುದು ನಮಗೆ ಅಧಿಕಾರವೇ ಇಲ್ಲ. ಇನ್ನೂ ಹೊಸ ಆಡಳಿತ ಮಂಡಲಿ ರಚನೆ ಆಗಿಲ್ಲ. ಕನಿಷ್ಠ ಪಕ್ಷ ಸಭೆಗಳಲ್ಲಿ ಪಾಲ್ಗೊಂಡರೆ ನಮ್ಮ ವಾರ್ಡ್ ಸಮಸ್ಯೆಗಳ ಧ್ವನಿ ಎತ್ತಬಹುದು ಎಂದು ಜಾರಿಕೊಳ್ಳುತ್ತಿದ್ದಾರೆ.
ಪದೇಪದೆ ಟ್ರಾಫಿಕ್ ಜಾಮ್: ಕಟ್ಟಡಗಳ ತೆರವು ಮಾಡಿದ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಚರಂಡಿ ನೀರು ರಸ್ತೆಯಲ್ಲೆಲ್ಲ ಹರಿಯುತ್ತಿದ್ದು, ಅಲ್ಲಲ್ಲಿ ರಸ್ತೆ ಕೆಸರುಮಯವಾಗಿದೆ. ಇದರಿಂದ ಯಾವುದಾದರೂ ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಬಂದರೆ ಸಾಕು ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಸ್ಥಳೀಯರು, ವ್ಯಾಪಾರಿಗಳಿಗೆ ಇದರಿಂದ ಗೋಳಾಟ ತಪ್ಪುತ್ತಿಲ್ಲ.
ಒಟ್ಟಿನಲ್ಲಿ ಒಂದಲ್ಲ ನೆಪ ಹೇಳುತ್ತಾ ಅಧಿಕಾರಿಗಳು ಕಾಮಗಾರಿ ನಿರ್ವಹಿಸದೆ ಮುಂದೂಡುತ್ತಿದ್ದು, ಜನ ಮಾತ್ರ ನಾನಾ ಸಂಕಷ್ಟಕ್ಕೆ ತುತ್ತಾಗುವಂತಾಗಿದೆ. ಇನ್ನಾದರೂ ನಗರಸಭೆ ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಿಸಲು ಕ್ರಮ ಕೈಗೊಳ್ಳಲಿ ಎಂಬುದು ಸ್ಥಳೀಯರ ಒತ್ತಾಯ.
ನಮಗಂತೂ ಸಾಕಾಗಿ ಹೋಗಿದೆ. ತರಾತುರಿಯಲ್ಲಿ ಕಟ್ಟಡಗಳನ್ನು ತೆರವು ಮಾಡಿದರು. ಪರಿಹಾರ ನೀಡುವುದಾಗಿ ತಿಳಿಸಿದ್ದರು. ಆದರೆ, ಈವರೆಗೆ ಬಿಡಿಗಾಸು ನೀಡಿಲ್ಲ. ಈಗ ನೋಡಿದರೆ ಕಾಮಗಾರಿಯನ್ನೂ ಶುರು ಮಾಡಿಲ್ಲ. ತ್ಯಾಜ್ಯವೆಲ್ಲ ರಸ್ತೆಯಲ್ಲಿ ಸಂಗ್ರಹಗೊಂಡಿದ್ದು, ಧೂಳಿನ ಕಾಟಕ್ಕೆ ಬೇಸತ್ತಿದ್ದೇವೆ.•ನರಸಿಂಹ,
ಸ್ಥಳೀಯ ನಿವಾಸಿ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಪಕ್ಕಕ್ಕೆ ನೆಡಲು ಈಗಾಗಲೇ ಟೆಂಡರ್ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಶುರು ಮಾಡುವುದಾಗಿ ತಿಳಿಸಿದ್ದಾರೆ. ಯಾವುದೇ ಅನುದಾನದ ಕೊರತೆಯಾಗಲಿ, ತಾಂತ್ರಿಕ ತೊಂದರೆಗಳಾಲಿ ಇಲ್ಲ. ಕಂಬಗಳನ್ನು ಸ್ಥಳಾಂತರಿಸುತ್ತಿದ್ದಂತೆಯೇ ರಸ್ತೆ ಕಾಮಗಾರಿ ನಿರ್ವಹಿಸಲಾಗುವುದು. ಆದಷ್ಟು ಬೇಗ ಕಾಮಗಾರಿ ಶುರುವಾಗಲಿದೆ.
•ರಮೇಶ ನಾಯಕ,
ನಗರಸಭೆ ಪೌರಾಯುಕ್ತ