Advertisement

ಮಾನ್ವಿಯಲ್ಲಿ ಕೈ-ಕಮಲ ಸಮಬಲ ಸೆಣಸಾಟ

12:40 PM May 02, 2019 | Naveen |

ರಾಯಚೂರು: ಕಳೆದ ಎರಡು ದಶಕದಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷವನ್ನು ಧಿಕ್ಕರಿಸಿ ಜೆಡಿಎಸ್‌ ಗೆಲ್ಲಿಸಿದ ಕ್ಷೇತ್ರ ಮಾನ್ವಿ. ಲೋಕಸಭೆ ಚುನಾವಣೆಯಲ್ಲಿ ಅದೇ ಜೆಡಿಎಸ್‌ ನೆರವಿನೊಂದಿಗೆ ಚುನಾವಣೆ ಎದುರಿಸಿದ್ದು ವಿಶೇಷ. ಆದರೂ ಬಿಜೆಪಿ ಮೈತ್ರಿ ಪಕ್ಷಗಳಿಗೆ ಸಮಬಲದ ಸೆಣಸಾಟ ನಡೆಸಿದ್ದು, ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮುನ್ಸೂಚನೆ ನೀಡಿದೆ.

Advertisement

ಈಗ ಕ್ಷೇತ್ರದಲ್ಲಿ ಜೆಡಿಎಸ್‌ ಅಧಿಕಾರದಲ್ಲಿದ್ದು, ಶಾಸಕ ರಾಜಾ ವೆಂಕಟಪ್ಪ ನಾಯಕ ಗೆಲುವು ಸಾಧಿಸಿದ್ದಾರೆ. ಆದರೆ, ಇಷ್ಟು ದಿನ ಬದ್ಧ ವೈರಿಗಳಂತೆ ಸೆಣಸಾಟ ಮಾಡಿದ್ದ ಉಭಯ ಪಕ್ಷಗಳು ಜಂಟಿಯಾಗಿ ಚುನಾವಣೆ ಎದುರಿಸಿರುವುದೇ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ, ಕೇವಲ ಶಾಸಕರು ಮತ್ತು ಅವರ ಆಪ್ತರನ್ನು ಮಾತ್ರ ಕಾಂಗ್ರೆಸ್‌ ಗಣನೆಗೆ ತೆಗೆದುಕೊಂಡಿದ್ದು, ಸ್ಥಳೀಯ ಮುಖಂಡರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಇದು ಕಾರ್ಯಕರ್ತರ ಮನದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದೇ ಆದಲ್ಲಿ ಮೈತ್ರಿ ಯಶಸ್ಸು ಕಂಡಿರುವುದು ಕಷ್ಟವೇ ಸರಿ.

ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ 2,41,617 ಮತದಾರರಿದ್ದು, 1,36,126 ಮತಗಳು ಚಲಾವಣೆಗೊಂಡಿವೆ. ಕಳೆದ ಚುನಾವಣೆಗೆ ಹೋಲಿಸಿದರೆ ಕೊಂಚ ಮಟ್ಟಿಗೆ ಮತದಾನ ಪ್ರಮಾಣ ಹೆಚ್ಚಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಮೋದಿ ಅಲೆ ಹೆಚ್ಚಾಗಿದ್ದು, ಕೆಲ ಜಿಪಂ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿರುವ ಸಾಧ್ಯತೆ ಇದೆ. ಬಾಗಲವಾಡ, ಕವಿತಾಳ, ಸಿರವಾರ ಭಾಗದಲ್ಲಿ ಮತದಾರ ಕಮಲದತ್ತ ಒಲವು ತೋರಿರುವ ಸಾಧ್ಯತೆಗಳಿವೆ.

ಕಾಂಗ್ರೆಸ್‌ ಭದ್ರಕೋಟೆ: ಹೇಳಿ ಕೇಳಿ ಮಾನ್ವಿ ಕಳೆದ ಎರಡು ದಶಕದಿಂದ ಕಾಂಗ್ರೆಸ್‌ ಆಡಳಿತಕ್ಕೆ ಒಳಪಟ್ಟಿತ್ತು. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ್‌ ಇಲ್ಲಿ ಪ್ರಾಬಲ್ಯ ಹೊಂದಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಎದುರಿಸಿದ್ದ ಕಾಂಗ್ರೆಸ್‌ ಹೀನಾಯವಾಗಿ ಸೋಲುಂಡಿತ್ತು. ಆದರೆ, ಬಿಜೆಪಿ ಉತ್ತಮ ಪೈಪೋಟಿ ನೀಡಿತ್ತಾದರೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈಚೆಗೆ ಪರಾಜಿತ ಅಭ್ಯರ್ಥಿ ವೈ.ಶರಣಪ್ಪ ನಾಯಕ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದು, ಬಿಜೆಪಿಗೆ ಅಂಥ ನಷ್ಟವೇನು ಉಂಟು ಮಾಡಿಲ್ಲ ಎನ್ನಲಾಗುತ್ತಿದೆ. ಈ ಬಾರಿ ಮೋದಿ ಪ್ರಭಾವ ಈ ಭಾಗದಲ್ಲಿ ತುಸು ಹೆಚ್ಚಾಗಿ ಕೆಲಸ ಮಾಡಿರುವ ಸಾಧ್ಯತೆಗಳಿದ್ದು, ಪೈಪೋಟಿ ಜೋರಾಗಿದೆ.

ಕೊನೆ ಗಳಿಗೆಯಲ್ಲಿ ಅಂತರ: ಪ್ರಚಾರದುದ್ದಕ್ಕೂ ಜತೆಗೆ ಇಟ್ಟುಕೊಂಡಿದ್ದ ಕಾಂಗ್ರೆಸ್‌ ನಾಯಕರು ಚುನಾವಣೆಗೆ ಇನ್ನೆರಡು ದಿನ ಬಾಕಿ ಇರುವಾಗ ಕೈಬಿಟ್ಟರು ಎನ್ನುವ ಆರೋಪಗಳು ಜೆಡಿಎಸ್‌ ಮುಖಂಡರಿಂದ ಬಲವಾಗಿ ಕೇಳಿ ಬಂದಿವೆ. ಇದರಿಂದ ಜೆಡಿಎಸ್‌ ಕಾರ್ಯಕರ್ತರು ಮೈತ್ರಿಗೆ ಬದ್ಧರಾಗಿದ್ದರು ಎಂದು ಖಡಾಖಂಡಿತವಾಗಿ ಹೇಳುವುದು ಕಷ್ಟವಾಗಿದೆ. ಕೆಲವೆಡೆ ಕಾರ್ಯಕರ್ತರು ತಟಸ್ಥ ನಿಲವು ಪ್ರದರ್ಶಿಸಿರುವ ಸಾಧ್ಯತೆಗಳಿವೆ. ಇದು ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಿರುವ ಸಾಧ್ಯತೆಗಳಿವೆ.

Advertisement

ನಾಯಕರಿಗೆ ಪ್ರತಿಷ್ಠೆ: ಮಾನ್ವಿ ಕ್ಷೇತ್ರ ಜಿಲ್ಲೆಯ ಪ್ರಭಾವಿ ರಾಜಕಾರಣಿ ಎನ್‌.ಎಸ್‌.ಬೋಸರಾಜ್‌ ಅವರ ತವರು. ಅದರ ಜತೆಗೆ ಜೆಡಿಎಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕರ ಕರ್ಮಭೂಮಿ. ಹೀಗಾಗಿ ಈ ಮೈತ್ರಿ ನಾಯಕರಿಗೆ ಈ ಚುನಾವಣೆ ತುಸು ಸವಾಲಾಗಿ ಪರಿಣಮಿಸಿದೆ. ಹೇಗಾದರೂ ಮಾಡಿ ಮುನ್ನಡೆ ಸಾಧಿಸಲೇಬೇಕಾದ ಪರಿಸ್ಥಿತಿಗೆ ಇಬ್ಬರೂ ನಾಯಕರು ಸಿಲುಕಿದ್ದಾರೆ. ಹೀಗಾಗಿ ನಾನಾ ತಂತ್ರಗಳನ್ನು ಪ್ರಯೋಗಿಸಿದ್ದಾರೆ. ಅದರಲ್ಲಿ ಬಿಜೆಪಿ ಮುಖಂಡರನ್ನು ತಮ್ಮತ್ತ ಸೆಳೆಯುವ ಪ್ರಹಸನ ಕೂಡ ಇತ್ತು. ಆದರೆ, ಹಿನ್ನಡೆ ಅನುಭವಿಸಿದಲ್ಲಿ ಮೈತ್ರಿ ವೈಫಲ್ಯದ ಜತೆಗೆ ಈ ಇಬ್ಬರು ನಾಯಕರು ಮುಖಭಂಗ ಎದುರಿಸಬೇಕಾಗುತ್ತದೆ.

ಜತೆಗೂಡಿದ ಶಾಸಕ: ಕಾಂಗ್ರೆಸ್‌ ಜತೆ ಎಣ್ಣೆ-ಸೀಗೆಕಾಯಿ ಸಂಬಂಧ ಹೊಂದಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಅನಿವಾರ್ಯ ಪರಿಸ್ಥಿತಿಗೆ ಕಟ್ಟು ಬಿದ್ದು ಕಾಂಗ್ರೆಸ್‌ ಮುಖಂಡರ ಜತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ನಾನಾ ಕಡೆ ಸಂಚರಿಸಿ ಕಾಂಗ್ರೆಸ್‌ ಪರ ಮತಯಾಚಿಸಿದ್ದಾರೆ. ಇದು ಅವರ ಹಿಂಬಾಲಕರು, ಕಾರ್ಯಕರ್ತರಿಗೆ ಮುಜುಗರ ತಂದೊಡ್ಡಿದೆ. ಆದರೆ, ಕೆಲವರು ಅವರ ಜತೆ ಗುರುತಿಸಿಕೊಂಡರೆ ಅನೇಕ ಮುಖಂಡರು ಅಂತರ ಕಾಯ್ದುಕೊಂಡರು ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಪಾಲಿಗೆ ಲೀಡ್‌ ತಂದುಕೊಡುವ ಕ್ಷೇತ್ರವಾಗಿದ್ದ ಮಾನ್ವಿಯಲ್ಲೂ ಸಮಬಲದ ಸೆಣಸಾಟ ಏರ್ಪಟ್ಟಿರುವುದು ಕುತೂಹಲ ಮೂಡಿಸಿದೆ. ಆದರೆ, ಜೆಡಿಎಸ್‌ ಶಾಸಕರ ಕ್ಷೇತ್ರದಲ್ಲಿ ಮೈತ್ರಿ ಗೆಲ್ಲುವುದೋ ಸೋಲುವುದೋ ಎನ್ನುವ ಕುತೂಹಲವಂತೂ ಇದೆ.

ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 10-15 ಸಾವಿರ ಲೀಡ್‌ ಸಾಧಿಸುವ ವಿಶ್ವಾಸವಿದೆ. ಜೆಡಿಎಸ್‌ ಮೈತ್ರಿ ಸಾಕಷ್ಟು ಅನುಕೂಲ ಕಲ್ಪಿಸಿದ್ದು, ಶಾಸಕ ರಾಜಾ ವೆಂಕಟಪ್ಪ ನಾಯಕ ನಮ್ಮ ಜತೆ ಎಲ್ಲೆಡೆ ಪ್ರಚಾರ ಮಾಡಿದ್ದಾರೆ. ಕ್ಷೇತ್ರದಲ್ಲಿ ಮೋದಿ ಅಲೆಯಾಗಲಿ, ಸಂಸದರ ವಿರೋಧಿ ಅಲೆಯಾಗಲಿ ಇಲ್ಲ. ಹೀಗಾಗಿ ಮುನ್ನಡೆ ಖಚಿತ.
ಅಬ್ದುಲ್ ಗಫಾರಸಾಬ್‌,
ಮಾನ್ವಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಮಾನ್ವಿಯಲ್ಲಿ ಕಾಂಗ್ರೆಸ್‌ ಜತೆಗೆ ನಮ್ಮ ಕಾರ್ಯಕರ್ತರು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಆದರೂ ಕ್ಷೇತ್ರದಲ್ಲಿ ಸಮಬಲದ ಹೋರಾಟ ಕಂಡು ಬರುತ್ತಿದೆ. ಕೆಲವೆಡೆ ಬಿಜೆಪಿ ಮತ ಲಭಿಸಿದ್ದು, ಸಾಕಷ್ಟು ಕಡೆ ಮೈತ್ರಿ ಅಭ್ಯರ್ಥಿ ಮುನ್ನಡೆ ಸಾಧಿಸುವ ವಿಶ್ವಾಸವಿದೆ. ಅಂತರ ಸ್ವಲ್ಪವೇ ಆದರೂ ನಾವು ಮುನ್ನಡೆ ಸಾಧಿಸುತ್ತೇವೆ.
ಮಲ್ಲಿಕಾರ್ಜನ ಪಾಟೀಲ,
 ಮಾನ್ವಿ ಜೆಡಿಎಸ್‌ ಅಧ್ಯಕ್ಷ

ಮಾನ್ವಿ ಕ್ಷೇತ್ರದಲ್ಲಿ ಮೈತ್ರಿ ಯಶಸ್ಸು ಕಂಡಿದೆ ಎಂಬುದೆಲ್ಲ ಸುಳ್ಳು. ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಬಿಜೆಪಿಗೆ ಒಲವು ಸಿಕ್ಕಿದೆ. ಈ ಬಾರಿ ಕನಿಷ್ಠ 6-7 ಸಾವಿರ ಮತಗಳ ಲೀಡ್‌ ಸಾಧಿಸುವ ವಿಶ್ವಾಸವಿದೆ. ಕಳೆದ ಬಾರಿ 11 ಸಾವಿರ ಮತಗಳ ಲೀಡ್‌ನಿಂದ ಮುನ್ನಡೆ ಸಾಧಿಸಿದ್ದೇವು. ಮೋದಿ ಅಲೆ ಜತೆಗೆ ಬಿಜೆಪಿ ತಳ ಮಟ್ಟದ ಸಂಘಟನೆಯಿಂದ ಹಿಡಿತ ಸಾಧಿಸುವ ನಂಬಿಕೆ ಇದೆ.
ಶರಣಗೌಡ ಸಿರವಾರ,
ಬಿಜೆಪಿ ಮುಖಂಡ

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next