Advertisement

ಶಾಸಕರ ದಿಕ್ಕೆಡಿಸಿದ ಲೋಕಾ ಫಲಿತಾಂಶ

11:20 AM May 25, 2019 | Naveen |

ರಾಯಚೂರು: ಲೋಕಸಭೆ ಚುನಾವಣೆ ದೇಶದ ವಿಚಾರಗಳ ಮೇಲೆ ನಡೆಯುವುದು ಸಾಮಾನ್ಯ. ಅದರ ಜತೆಗೆ ಆಯಾ ಕ್ಷೇತ್ರಗಳ ಶಾಸಕರ ಪ್ರಾಬಲ್ಯ ಪ್ರದರ್ಶನಕ್ಕೂ ಇದು ವೇದಿಕೆಯಾಗಿರುತ್ತದೆ. ಆದರೆ, ಮೇ 23ರಂದು ಬಂದ ಫಲಿತಾಂಶ ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿಪಕ್ಷಗಳ ಶಾಸಕರ ದಿಕ್ಕೆಡಿಸಿದ್ದು ಸುಳ್ಳಲ್ಲ.

Advertisement

ರಾಯಚೂರು ಲೋಕಸಭೆ ಕ್ಷೇತ್ರದ ವಿಜೇತ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಬರೋಬ್ಬರಿ 1,17,716 ಮತಗಳ ಭಾರೀ ಮುನ್ನಡೆ ಸಾಧಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಏಳರಲ್ಲಿ ಸಾವಿರಾರು ಮತಗಳ ಮುನ್ನಡೆ ಸಾಧಿಸಿರುವುದು ವಿಶೇಷ. ಆದರೆ, ಆ ಏಳರಲ್ಲಿ ಮೂರು ಕಾಂಗ್ರೆಸ್‌ ಮತ್ತು ಒಂದು ಜೆಡಿಎಸ್‌ ಕ್ಷೇತ್ರ ಕೂಡ ಇದೆ. ಆ ಶಾಸಕರು ಏನೇ ಶತಪ್ರಯತ್ನ ನಡೆಸಿದರೂ ಮುನ್ನಡೆ ಸಾಧಿಸುವುದಿರಲಿ, ಸಮಬಲದ ಸೆಣಸಾಟ ನಡೆಸಲು ಅವಕಾಶವಿಲ್ಲದ ರೀತಿ ಫಲಿತಾಂಶ ಬಂದಿದೆ. ಇದು ಆ ಶಾಸಕರ ಭವಿಷ್ಯದ ಚಿಂತನೆಗೆ ಅನುವು ಮಾಡಿಕೊಟ್ಟಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆದಕೊಂಡ ಕ್ಷೇತ್ರಗಳಲ್ಲಿ ಈಗ ಭರ್ಜರಿ ಮುನ್ನಡೆ ಸಾಧಿಸಿದೆ. ಇದು ಬಿಜೆಪಿ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ, ಈ ಫಲಿತಾಂಶದಿಂದ ತಳಮಟ್ಟದಲ್ಲಿ ಬಿಜೆಪಿ ಬಲಗೊಂಡಲ್ಲಿ ಉಳಿದ ಪಕ್ಷಗಳಿಗೆ ಮುಂಬರುವ ದಿನಗಳಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಬಿಜೆಪಿಯಲ್ಲದ ಕ್ಷೇತ್ರಗಳಲ್ಲಿ ನಿರೀಕ್ಷೆ ಮೀರಿ ಮತಗಳು ಲಭಿಸಿವೆ. ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು. ಬಿಜೆಪಿ 79,914 ಮತಗಳು ಪಡೆದರೆ ಕಾಂಗ್ರೆಸ್‌ 63,662 ಪಡೆದಿದೆ. ಅಂದರೆ ಬಿಜೆಪಿಗೆ 16,252 ಮತಗಳ ಮುನ್ನಡೆ ಲಭಿಸಿದೆ. ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್‌ ಅಧಿಕಾರದಲ್ಲಿದ್ದು, ಕಾಂಗ್ರೆಸ್‌ ಹಿರಿಯ ಮುಖಂಡ ಎನ್‌ .ಎಸ್‌. ಬೋಸರಾಜ್‌ ಅವರ ಪ್ರಭಾವ ಇದೆ. ಆದರೂ ಇಲ್ಲಿ ಬಿಜೆಪಿ 75,883 ಮತ ಪಡೆದರೆ, ಕಾಂಗ್ರೆಸ್‌ 54,352 ಪಡೆಯುವ ಮೂಲಕ 21,481 ಮತಗಳ ಹಿನ್ನಡೆ ಅನುಭವಿಸಿದೆ. ಇನ್ನೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಲಿಂಗಸುಗೂರು ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಬಿಜೆಪಿ 80,700 ಮತ ಪಡೆದರೆ, ಕಾಂಗ್ರೆಸ್‌ 59,003 ಪಡೆದಿದ್ದು, ಬಿಜೆಪಿಗೆ 21,697 ಭಾರೀ ಲೀಡ್‌ ಲಭಿಸಿದೆ. ಆದರೆ, ಇದು ಬಿಜೆಪಿ ಅಭ್ಯರ್ಥಿ ತವರು ನೆಲವೂ ಆಗಿರುವ ಕಾರಣ ಇಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರಬಹುದು ಎನ್ನಲಾಗಿತ್ತು. ಇನ್ನೂ ಶಾಹಪುರ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಅಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು. ಬಿಜೆಪಿ 73,272 ಮತ ಪಡೆದರೆ, ಕಾಂಗ್ರೆಸ್‌ 54,149 ಮತ ಪಡೆಯುವ ಮೂಲಕ 19,123 ಮತಗಳ ಹಿನ್ನಡೆ ಅನುಭವಿಸಿದೆ.

ಅನುಮಾನ ಮೂಡಿಸಿದ ದೇವದುರ್ಗ
ದೇವದುರ್ಗ ಕ್ಷೇತ್ರದಲ್ಲಿ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಲೀಡ್‌ ತಂದುಕೊಡುವುದಾಗಿ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ಆಶ್ವಾಸನೆ ನೀಡಿದ್ದರು. ಆದರೆ, ಅಲ್ಲಿ 5361 ಮತಗಳಿಂದ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಬಿಜೆಪಿ 63,365 ಮತ ಪಡೆದರೆ, ಕಾಂಗ್ರೆಸ್‌ 68,726 ಮತ ಪಡೆದಿದೆ. ವರಸೆಯಲ್ಲಿ ಮಾವ ಅಳಿಯರಾಗುವ ಕಾರಣ ಒಳಒಪ್ಪಂದದ ರಾಜಕಾರಣ ನಡೆದಿದೆ ಎನ್ನುವ ಆರೋಪಗಳಿವೆ. ಚುನಾವಣೆಗೆ ಇನ್ನೆರಡು ದಿನಗಳಿದ್ದಾಗ ಶಾಸಕ ಕೆ.ಶಿವನಗೌಡ ನಾಯಕ ಯಾವುದೇ ಕಾರ್ಯಕರ್ತರ ಕೈಗೆ ಸಿಕ್ಕಿರಲಿಲ್ಲ ಎಂಬ ಆರೋಪಗಳಿವೆ. ಆ ಕ್ಷೇತ್ರದಲ್ಲಿ ಮತಗಳ ಸಂಖ್ಯೆ ಕಡಿಮೆ ಆಗಿರುವುದಕ್ಕೂ ಇಂಥ ಆರೋಪಗಳಿಗೂ ಪುಷ್ಠಿ ನೀಡುವಂತಿದೆ. ಫಲಿತಾಂಶ ಮಾತ್ರ ಬಿಜೆಪಿಗೆ ಆನೆಬಲ ತಂದರೆ ಪ್ರತಿ ಪಕ್ಷಗಳಲ್ಲಿ ತಳಮಳ ಸೃಷ್ಟಿಸಿರುವುದು ಸುಳ್ಳಲ್ಲ. ಆದರೆ, ಈ ಅಲೆ ಮುಂಬರುವ ಚುನಾವಣೆಗಳ ಮೇಲೆ ಪ್ರಭಾವ ಬೀರುವುದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು

Advertisement
Advertisement

Udayavani is now on Telegram. Click here to join our channel and stay updated with the latest news.

Next