ರಾಯಚೂರು: ಸಮರ್ಥ ಅಭ್ಯರ್ಥಿಯೇ ಇಲ್ಲ ಎನ್ನುವ ಸಂದಿಗ್ಧ ಸ್ಥಿತಿಯಲ್ಲಿದ್ದ ಬಿಜೆಪಿ ಇಂದು ಭಾರೀ ಬಹುಮತದಿಂದ ಗೆಲುವು ದಾಖಲಿಸುವ ಮೂಲಕ ಚುನಾವಣೆ ಮುನ್ನವೇ ಒಳಗೊಳಗೆ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್ ಹೆಡೆಮುರಿ ಕಟ್ಟಿತು. ಮೋದಿ ಅಲೆ ಭ್ರಮೆ ಎಂದಿದ್ದ ಕಾಂಗ್ರೆಸ್ ನಾಯಕರು ಕೈ ಕೈ ಹಿಚುಕಿಕೊಳ್ಳುವಂಥ ಫಲಿತಾಂಶ ನೀಡಿದ್ದಾರೆ ಕ್ಷೇತ್ರದ ಮತದಾರರು.
ನಾಲ್ಕು ಬಾರಿ ಸಂಸದರಾಗಿದ್ದ ವೆಂಕಟೇಶ ನಾಯಕರು ಅಂದು ಎದುರಿಸಿದ್ದ ಟೀಕೆಗಳನ್ನೇ ಇಂದು ಅವರ ಮಗ ಬಿ.ವಿ.ನಾಯಕರು ಎದುರಿಸುವಂತಾಯಿತು. ಅಭಿವೃದ್ಧಿ ವಿಚಾರದಲ್ಲಿ ತಂದೆಗಿಂತ ಹಿಂದುಳಿದ ಸಂಸದ ಎಂಬ ಕುಖ್ಯಾತಿಯೊಂದಿಗೆ ನಿರ್ಮಿಸುವ ಸ್ಥಿತಿ ಕೈಯ್ನಾರೆ ತಂದುಕೊಂಡರು. ಐದು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದ ಅವರ ನಡೆಗೆ ಕ್ಷೇತ್ರದ ಮತದಾರ ತಕ್ಕ ಉತ್ತರವನ್ನೇ ನೀಡಿದ್ದಾನೆ.
ಸ್ವಂತ ಬಲದ ಜತೆಗೆ ಜೆಡಿಎಸ್ ಬೆಂಬಲವನ್ನೂ ಪಡೆದಿದ್ದ ಕಾಂಗ್ರೆಸ್‌ಗೆ ಬಿಜೆಪಿ ಸುಲಭ ತುತ್ತಾಗಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಅಲ್ಲದೇ, ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆಗಳಲ್ಲಿ ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಹಾಗೂ ಒಂದು ಕಡೆ ಜೆಡಿಎಸ್ ಅಧಿಕಾರದಲ್ಲಿತ್ತು. ಇದರಿಂದ ಮೋದಿ ಅಲೆ ಕೆಲಸ ಮಾಡಿದರೂ ನಮ್ಮ ಬಲ ಪ್ರದರ್ಶನ ಮಾಡಿ ಗೆಲ್ಲಬಲ್ಲೆವು ಎಂಬ ಮೈತ್ರಿ ಪಕ್ಷಗಳ ನಾಯಕರ ಲೆಕ್ಕಾಚಾರ ತಲೆ ಕೆಳಗಾಗಿದೆ.
ಇನ್ನು ಎರಡು ಬಾರಿ ಶಾಸಕರಾಗಿ ಸಚಿವರೂ ಆಗಿದ್ದ ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಈವರೆಗೂ ಕಾಂಗ್ರೆಸ್‌ನಲ್ಲಿಯೇ ಗುರುತಿಸಿಕೊಂಡಿದ್ದರು. ಆದರೆ, ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಕಾಣುತ್ತಿದ್ದಂತೆ ಪಕ್ಷಾಂತರ ಮಾಡಿ ಅದೃಷ್ಟ ಪರೀಕ್ಷೆಗಿಳಿದ ಅವರಿಗೆ ಟಿಕೆಟ್ ಸಿಕ್ಕಿದ್ದಲ್ಲದೇ, ಗೆಲುವಿನ ಮಾಲೆಯೂ ಕೊರಳಿಗೆ ಬಿದ್ದಿದೆ. ಲಿಂಗಸುಗೂರು, ಕಲ್ಮಲ ಕ್ಷೇತ್ರದಲ್ಲಿ ಅವರು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಜನ ಇಂದಿಗೂ ಸ್ಮರಿಸುತ್ತಾರೆ ಎಂಬುದು ಅವರ ಗೆಲುವಿಗೆ ಮತ್ತೂಂದು ಕಾರಣವಾಗಿರಬಹುದು.
ಮೈತ್ರಿ ನಂಬಿ ಕೆಟ್ಟರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಜಂಟಿಯಾಗಿ ಚುನಾವಣೆ ಎದುರಿಸುವ ನಿರ್ಧಾರ ಕೈಗೊಂಡಾಗ ಜಿಲ್ಲೆಯ ಮಟ್ಟಿಗೆ ಅದು ಉಭಯ ಪಕ್ಷಗಳಿಗೂ ಬಿಸಿತುಪ್ಪವಾಗಿ ಪರಿಣಿಮಿಸಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಸಮಬಲದ ಸೆಣಸಾಟ ನಡೆಸಿ ಸೋಲು ಗೆಲುವಿನ ರುಚಿ ಕಂಡಿದ್ದವು. ಅಲ್ಲದೇ, ಹಿಂದಿನಿಂದಲೂ ಎಣ್ಣೆ ಸೀಗೆಕಾಯಿ ಸಂಬಂಧ ಉಳಿಸಿಕೊಂಡೇ ಬಂದಿದ್ದವು. ಅಂಥ ಪಕ್ಷಗಳನ್ನು ಒಗ್ಗೂಡಿಸಿ ಚುನಾವಣೆ ಎದುರಿಸುವ ಚಿಂತನೆಯೇ ಅಭಾಸಕ್ಕೀಡು ಮಾಡಿತ್ತು. ಮೆಲ್ನೋಟಕ್ಕೆ ಮೈತ್ರಿಗೆ ಜೈ ಎಂದರೂ ಒಳಗೊಳಗೆ ಜೆಡಿಎಸ್ ನಾಯಕರು ಕೈ ಕೊಟ್ಟಿದ್ದೇ ಹೆಚ್ಚು. ಗ್ರಾಮೀಣ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ರವಿ ಪಾಟೀಲ ದೂರ ಉಳಿಯುವ ಮೂಲಕ ಬಂಡಾಯ ಪ್ರದರ್ಶಿಸಿದರೆ, ಕೆಲವೆಡೆ ತೋರಿಕೆಗಾಗಿ ಮೈತ್ರಿ ಧರ್ಮ ಪಾಲಿಸಿದರೆ ವಿನಃ ಕೈ ಅಭ್ಯರ್ಥಿ ಗೆಲುವಿಗಾಗಿ ಯಾರೂ ಪ್ರಾಮಾಣಿಕ ಪ್ರಯತ್ನ ನಡೆಸಿರಲಿಲ್ಲ. ಇನ್ನು ಚುನಾವಣೆಗೆ ಇನ್ನೆರಡು ದಿನ ಬಾಕಿ ಇರುವಾಗ ಕಾಂಗ್ರೆಸ್ ನಾಯಕರು ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ನಾಯಕರು ಮುನಿಸಿಕೊಂಡು ಅಂತಿಮ ಘಟದಲ್ಲಿಯೇ ತಟಸ್ಥ ನಿಲುವು ತಾಳಿದ್ದು, ಈ ಫಲಿತಾಂಶಕ್ಕೆ ಕಾರಣವಾಯಿತು.
ಫಲಿಸದ ರಾಹುಲ್ ಪ್ರಚಾರ: ರಾಯಚೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಇದನ್ನು ಉಳಿಸಿಕೊಳ್ಳಬೇಕು ಎಂಬ ಮಹದಾಸೆಗೆ ತಣ್ಣೀರೆರಚಿದಂತಾಗಿದೆ. ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೇ ಬಂದು ಇಲ್ಲಿ ಪ್ರಚಾರ ಮಾಡಿದರೂ ಫಲ ಸಿಕ್ಕಿಲ್ಲ. ಬದಲಿಗೆ ರಾಯಚೂರು ನಗರದಲ್ಲಿಯೇ ಬಿಜೆಪಿಗೆ ಹೆಚ್ಚು ಮತಗಳು ಲಭಿಸಿವೆ. ಅದರ ಜತೆಗೆ ರಾಜ್ಯ ಸರ್ಕಾರದ ನಾಯಕರು, ಸಚಿವರು, ಜೆಡಿಎಸ್ ವರಿಷ್ಠ ನಾಯಕರು ಮಾತ್ರವಲ್ಲದೇ ಪಕ್ಕದ ರಾಜ್ಯ ಆಂಧ್ರಪ್ರದೇಶದ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಕೂಡ ಬಂದು ಪ್ರಚಾರ ನಡೆಸಿದ್ದರು. ಆದರೆ, ಅದ್ಯಾವುದೂ ಕಾಂಗ್ರೆಸ್‌ಗೆ ಕೈ ಹಿಡಿದಿಲ್ಲ.
ದೇಶದಲ್ಲಿ ಎದ್ದಿರುವ ಮೋದಿ ಅಲೆ ಸುನಾಮಿಗೆ ರಾಯಚೂರು ಲೋಕಸಭೆ ಕ್ಷೇತ್ರವೂ ಕೊಚ್ಚಿಕೊಂಡು ಹೋಗಿದೆ. ಹಿಂದೊಮ್ಮೆ ಗಣಿಧಣಿಗಳ ಹಣಬಲದಿಂದ ಅಧಿಕಾರ ಗದ್ದುಗೆ ಏರಿದ್ದ ಬಿಜೆಪಿ ಈ ಬಾರಿ ಮೋದಿ ಅಲೆ ನೆರವಿನೊಂದಿಗೆ ಅಧಿಕಾರ ಹಿಡಿದಿದೆ.