ರಾಯಚೂರು: ಬರೋಬ್ಬರಿ ಒಂದೂವರೆ ತಿಂಗಳು ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೊದಲ ದಿನವೇ 2.5 ಕೋಟಿ ರೂ. ಮದ್ಯ ಮಾರಾಟವಾಗಿದೆ. 118 ಅಂಗಡಿಗಳಲ್ಲಿ 89 ವೈನ್ ಶಾಪ್, 29 ಎಂಎಸ್‌ಐಎಲ್ ಆರಂಭಿಸಲಾಗಿದೆ. 53,750 ಲೀಟರ್ ಮದ್ಯ ವಿಸ್ಕಿ, 13,850 ಲೀಟರ್ ಬೀಯರ್ ಮಾರಾಟವಾಗಿದೆ. ಇದರ ಮೌಲ್ಯದ 2.5 ಕೋಟಿ ರೂ. ದಾಟಿದೆ. ಆದರೂ, ಸಂಜೆ ಸಾಕಷ್ಟು ಜನರಿಗೆ ಮದ್ಯ ಸಿಗದೆ ಮರಳಿ ಹೋಗಿದ್ದಾರೆ.
ಸೋಮವಾರ ಬೆಳಗ್ಗೆ 9:00ರಿಂದ ಸಂಜೆ 7:00ರ ವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಇದ್ದರೂ ಬಹುತೇಕ ಅಂಗಡಿಗಳಲ್ಲಿ ಸಂಜೆ 5:00 ಗಂಟೆಗೆಲ್ಲ ಖಾಲಿಯಾಗಿತ್ತು. ಇದರಿಂದ ಕೆಲಕಾಲ ಮದ್ಯದ ಅಂಗಡಿಗಳ ಎದುರು ಜನ ಜಮಾಯಿಸಿದ್ದರು. ಗಲಾಟೆಯಾಗುವ ಮುನ್ಸೂಚನೆ ಕಂಡ ಪೊಲೀಸರು ಜನರನ್ನು ಚದುರಿಸಿದರು. ಆದರೆ, ಸರ್ಕಾರ ಮದ್ಯದ ದರವನ್ನು ಶೇ.6ರಷ್ಟು ಹೆಚ್ಚಿಸಿರುವ ಕಾರಣ ಮಂಗಳವಾರದಿಂದ ಪರಿಷ್ಕೃತ ದರ ಜಾರಿಗೊಳಿಸಲಾಗಿದೆ.
ಅಬಕಾರಿ ಇಲಾಖೆ ಗೋಡಾನ್‌ನಲ್ಲಿ ಸಂಗ್ರಹವಾಗಿದ್ದ ಮದ್ಯವನ್ನು ಅಂಡಿಗಳಿಗೆ ಸಾಗಿಸಲಾಗಿದೆ. ಆದರೆ, ಲಾಕ್‌ಡೌನ್ ಕಾರಣಕ್ಕೆ ಕೆಲವೊಂದು ಬ್ರ್ಯಾಂಡ್ ಮದ್ಯ ಖಾಲಿಯಾಗಿದೆ. ಮಾರಾಟ ಆರಂಭವಾದ ಒಂದು ಗಂಟೆಯೊಳಗೆ ಕೆಲವೆಡೆ ಮದ್ಯ ಖಾಲಿಯಾಗಿದೆ. ಮೊದಲ ದಿನ ಕೆಲಕಾಲ ಸಾಮಾಜಿಕ ಅಂತರ ಕಂಡು ಬಂದರೂ ಮಧ್ಯಾಹ್ನಕ್ಕೆಲ್ಲ ಜನ ಗುಂಪು ಗುಂಪಾಗಿ ಮದ್ಯ ಖರೀದಿಗೆ ಮುಗಿ ಬಿದ್ದಿದ್ದರು. ಹೀಗಾಗಿ ಮಂಗಳವಾರದಿಂದ ಸಮಯ ಬದಲಿಸಲಾಗಿದೆ. ಬೆಳಗ್ಗೆ 8:00ರಿಂದ ಮಧ್ಯಾಹ್ನ 2:00ರ ವರೆಗೂ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಕೊರೊನಾ ಭೀತಿ ಇರುವ ಕಾರಣ ಗಡಿ ಭಾಗದಲ್ಲಿ ನಾಲ್ಕು ವೈನ್ ಶಾಪ್ ಹಾಗೂ ಒಂದು ಎಂಎಸ್‌ಐಎಲ್ ಅಂಗಡಿ ಮುಚ್ಚಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.