ರಾಯಚೂರು: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರ ನಿಧನದ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನವನ್ನು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ದುರುಗೇಶ ಹಾಗೂ ಗಣ್ಯರು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಎ.ಎಂ.ಇ. ಕಾಲೇಜಿನ ಉಪನ್ಯಾಸಕಿ ರಾಜಶ್ರೀ ಕಲ್ಲೂರಕರ್ ಮಾತನಾಡಿ, ಕುವೆಂಪು ಅವರ ಆದರ್ಶಗಳು ಈಗ ಅನಿವಾರ್ಯವಾಗಿವೆ. ಮನುಜಮತ ವಿಶ್ವಪಥ ಎಂಬ ಸಂದೇಶ ನೀಡಿದ ಅವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಲ್ಲ. ಅವರು ವಿಶ್ವಕ್ಕೆ ಮಾನವರಾಗಿ ಬದುಕಿದ್ದವರು.
ಅದೇ ಸಂದೇಶವನ್ನು ನೀಡಿದವರು. ಸಾಹಿತ್ಯ, ಕಥೆ, ಕಾದಂಬರಿಗಳು ಸೇರಿದಂತೆ ತಮ್ಮ ವಿವಿಧ ಪ್ರಕಾರಗಳ ಬರವಣಿಗೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಪರೂಪದ ಸಾಹಿತಿ. ಎಲ್ಲರೊಂದಿಗೆ ಸಮಾನವಾಗಿ ಇರುತ್ತಿದ್ದ ಅವರು ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿದ್ದರು. ಕರುನಾಡಿನ ನಾಡಗೀತೆಯನ್ನು ರಚಿಸಿದ ಅವರು ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುತ್ತಿದ್ದರು ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಒಂದು ನಿಮಿಷ ಮೌನ ಆಚರಿಸಿ ನಮನ ಸಲ್ಲಿಸಲಾಯಿತು. ಶಿಕ್ಷಣಾ ಧಿಕಾರಿ ಆರ್.ಇಂದಿರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸರಳವಾಗಿ ಆಚರಿಸಿದರೂ ಸಭಾಂಗಣಕ್ಕೆ ಮಾತ್ರ ಜನರೇ ಬಂದಿರಲಿಲ್ಲ. ವೇದಿಕೆ ಮೇಲಿದ್ದಷ್ಟು ಜನ ಕೂಡ ಸಭಾಂಗಣದಲ್ಲಿರಲಿಲ್ಲ.