ರಾಯಚೂರು: ಕೃಷ್ಣಾ ನದಿ ಆರ್ಭಟ ಮುಗಿಯುವ ಮುನ್ನವೇ ತುಂಗಭದ್ರಾ ನದಿಗೆ ನೆರೆ ಮುನ್ಸೂಚನೆ ಸಿಕ್ಕಿದ್ದು, ಉಭಯ ನದಿಗಳ ಪಾತ್ರದಲ್ಲಿರುವ ಹಳ್ಳಿಗಳ ಜನ ಮತ್ತಷ್ಟೂ ಆತಂಕಕ್ಕೀಡಾಗಿದ್ದಾರೆ. ಕೃಷ್ಣಾ ನದಿ ನೆರೆಗೆ ಸಿಲುಕಿದವರ ರಕ್ಷಣೆ ಕಾರ್ಯ ಮುಗಿಯುವ ಮುನ್ನವೇ ತುಂಗಭದ್ರಾ ನದಿಗೆ 2.22 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದು, ಮತ್ತಷ್ಟು ಭಯಕ್ಕೆ ಕಾರಣವಾಗಿದೆ.
ಕೃಷ್ಣಾ ನದಿಗೆ ರವಿವಾರ ಕೂಡ 6.11 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಶನಿವಾರ ಖಾಲಿ ಮಾಡಿಸಿದ್ದ ಬಹುತೇಕ ಹಳ್ಳಿಗಳಿಗೆ ನೀರು ನುಗ್ಗಿದೆ. ರವಿವಾರ ಮಧ್ಯಾಹ್ನ 3ರ ಹೊತ್ತಿಗೆ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 6.11 ಲಕ್ಷ ಕ್ಯೂಸೆಕ್ ಹಾಗೂ ಭೀಮಾ ನದಿಯ ಸನ್ನತಿ ಜಲಾಯಶದಿಂದ 2.85 ಸೇರಿ 9 ಕ್ಯೂಸೆಕ್ ನೀರು ಹರಿಸಲಾಗಿದೆ.
ರಾಯಚೂರು, ದೇವದುರ್ಗ ಮತ್ತು ಲಿಂಗಸುಗೂರು ತಾಲೂಕಿನ 26 ಹಳ್ಳಿಗಳ 905 ಕುಟುಂಬಗಳು ನೆರೆಗೆ ತುತ್ತಾಗಿದ್ದು, 4481 ಜನರಿಗೆ ಜಿಲ್ಲಾಡಳಿತ ಪರಿಹಾರ ಕೇಂದ್ರಗಳಲ್ಲಿ ಅನ್ನ ನೀರು, ವಸತಿ ಸೌಲಭ್ಯ ಕಲ್ಪಿಸಿದೆ. ಇನ್ನು ಇದಕ್ಕೆ ಭೀಮಾ ನದಿ ಪ್ರವಾಹವೂ ಜತೆಯಾಗಿದ್ದು, ಸನ್ನತಿಯಿಂದ 2.85 ಲಕ್ಷ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ರಾಯಚೂರು ತಾಲೂಕಿನ ನಡುಗಡ್ಡೆಗಳಾದ ಕುರ್ವಕುದಾ, ಕುರ್ವಕುಲಾ ಗ್ರಾಮಗಳವರೆಗೂ ನೀರು ತಲುಪಿದೆ. ಇನ್ನೂ ಸ್ವಲ್ಪ ನೀರಿನ ಹರಿವು ಹೆಚ್ಚಾದಲ್ಲಿ ಈ ನಡುಗಡ್ಡೆಗಳಲ್ಲಿ ವಾಸಿಸುವ ನೂರಾರು ಕುಟುಂಬಗಳ ಸ್ಥಳಾಂತರ ಕೂಡ ಅನಿವಾರ್ಯವಾಗಲಿದೆ.
ಏತನ್ಮಧ್ಯೆ ಟಿಬಿ ಡ್ಯಾಂನಿಂದ ನದಿಗೆ 2.22 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದು, ನದಿ ಪಾತ್ರಗಳ ಜನತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ವಿವಿಧ ಗ್ರಾಮಗಳಲ್ಲಿ ಡಂಗೂರ ಸಾರಿ ಎಚ್ಚರಿಕೆ ನೀಡುತ್ತಿದ್ದಾರೆ. ಪಶ್ಚಿಮ ವಾಹಿನಿಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ತುಂಗಭದ್ರೆಗೆ ಒಳಹರಿವು ಹೆಚ್ಚಾಗಿದೆ. 2,15,505 ಕ್ಯೂಸೆಕ್ ಒಳಹರಿವಿದ್ದು, 2,30,767 ಕ್ಯೂಸೆಕ್ ಹೊರ ಹರಿವಿದೆ. ಅದರಲ್ಲಿ 4,280 ಕ್ಯೂಸೆಕ್ ಕಾಲುವೆಗಳಿಗೆ ಹರಿಸಿದರೆ, ಉಳಿದ ನೀರು ನದಿಗೆ ಬಿಡಲಾಗುತ್ತಿದೆ.