ರಾಯಚೂರು: ಮಹಾರಾಷ್ಟ್ರದ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿರುವ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ದಿನೇದಿನೆ ಮಿತಿ ಮೀರುತ್ತಿದೆ. ರವಿವಾರ ಕೂಡ 2.85 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಇದರಿಂದ ನಡುಗಡ್ಡೆಗಳು, ನದಿ ಪಾತ್ರದ ಗ್ರಾಮಸ್ಥರು ಪ್ರವಾಹ ಭೀತಿಗೆ ಸಿಲುಕಿ ಅಕ್ಷರಶಃ ನಲುಗಿದ್ದರೆ, ನಾಟಿ ಮಾಡಿದ್ದ ಬೆಳೆಯೆಲ್ಲ ನೀರಿಗೆ ಕೊಚ್ಚಿಕೊಂಡು ಹೋಗುತ್ತಿದೆ.
ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರೀ ಜಲಾಶಯದಿಂದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ 2.85 ಸಾವಿರ ಕ್ಯೂಸೆಕ್ ಒಳಹರಿವಿದ್ದು, ಜಲಾಶಯದಿಂದ ನದಿಗೆ 2.85 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನೀರಿನ ಪ್ರಮಾಣ ಕ್ರಮೇಣ ಹೆಚ್ಚಾದಂತೆ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಪ್ರಮುಖ ದೇವಸ್ಥಾನಗಳಾದ ದೇವದುರ್ಗ ತಾಲೂಕಿನ ಕೊಪ್ಪರ ಲಕ್ಷ್ಮೀ ನರಸಿಂಹ ಸ್ವಾಮಿ, ಲಿಂಗಸುಗೂರಿನ ಛಾಯಾ ಭಗವತಿ, ಕಾಡ್ಲೂರು ಆಂಜನೇಯ ಸ್ವಾಮಿ ದೇವಸ್ಥಾನಗಳು ಜಲಾವೃತಗೊಂಡಿವೆ. ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮಸ್ಥರಿಗೆ ನದಿಗೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮುಖ್ಯವಾಗಿ ಲಿಂಗಸುಗೂರು ತಾಲೂಕಿನ ನಡುಗಡ್ಡೆಗಳಾದ ಓಂಕಾರ ಗಡ್ಡಿ, ಹಾರಗಲಗಡ್ಡಿ, ಕರಕಲಗಡ್ಡಿ, ರಾಯಚೂರು ತಾಲೂಕಿನ ಕುರ್ವಕುಲಾ, ಅಗ್ರಹಾರ, ಕುರ್ವಕುರ್ದಾ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದರೆ, ನದಿ ಪಾತ್ರದುದ್ದಕ್ಕೂ ರಾಯಚೂರು, ದೇವದುರ್ಗ ಹಾಗೂ ಲಿಂಗೂಸೂರಿನ 51 ಗ್ರಾಮಗಳಿಗೆ ಪ್ರವಾಹ ಭೀತಿ ಇದ್ದು, ಎಚ್ಚರಿಕೆ ನೀಡಲಾಗಿದೆ. ಈವರೆಗೆ ಯಾವುದೇ ಗ್ರಾಮಕ್ಕೆ ನೀರು ನುಗ್ಗಿದ ನಿದರ್ಶನಗಳಿಲ್ಲ. ಆದರೆ, ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ನಾಟಿ ಮಾಡಿದ್ದ ಭತ್ತ, ಹತ್ತಿ ಬೆಳೆ ಸಂಪೂರ್ಣ ಹಾಳಾಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರೈತರು ಕೂಡ ಮುಂಜಾಗ್ರತಾ ಕ್ರಮವಾಗಿ ನದಿಗೆ ಅಳವಡಿಸಿದ್ದ ಎಲ್ಲ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿದ್ದಾರೆ.
ಲಿಂಗಸುಗೂರಿನಲ್ಲಿ ಯರಗೋಡಿ-ಶೀಲಹಳ್ಳಿ, ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ತುಂಬಿ ಹರಿಯುತ್ತಿದ್ದು, ಈಗಾಗಲೇ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಬ್ಯಾರೇಜ್ ಕೂಡ ಸಂಪೂರ್ಣ ತುಂಬಿ ಹರಿಯುತ್ತಿದ್ದು, ವಿವಿಧ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಗೂಗಲ್ ಬ್ಯಾರೇಜ್ ಕೂಡ ತುಂಬಿ ಹರಿಯುತ್ತಿದ್ದು, ಸಂಚಾರ ಮಾತ್ರ ಸ್ಥಗಿತಗೊಂಡಿಲ್ಲ.
ನಡುಗಡ್ಡೆಗಳಾದ ಲಿಂಗಸುಗೂರು ತಾಲೂಕಿನ ಕಡದರಗಡ್ಡಿ, ಅಗ್ರಹಾರ, ಓಂಕಾರಗಡ್ಡಿಗಳಲ್ಲಿಯೂ ಮುಂಜಾಗ್ರತಾ ಕ್ರಮವಾಗಿ 15 ಸಿಬ್ಬಂದಿ ತಂಡ ನಿಯೋಜಿಸಲಾಗಿದೆ. ಆಹಾರ, ಔಷಧ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ರಾಯಚೂರು ತಾಲೂಕಿನ ಕುರುವಪುರ, ಕುರುಮಗಡ್ಡೆ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ರಕ್ಷಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ, ಇಲ್ಲಿ ಆಹಾರ ಧಾನ್ಯ ಪೂರೈಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣ ದಳ (ಎನ್‌ಡಿಆರ್‌ಎಫ್) ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ರವಿವಾರ ಬೆಳಗ್ಗೆ ಆತ್ಕೂರು ಹಾಗೂ ಡಿ.ರಾಂಪುರ ಸೇರಿದಂತೆ ಅಪಾಯ ಇರುವ ಸ್ಥಳಗಳಿಗೆ ತೆರಳಿ ಭೇಟಿ ನೀಡಿ ಪರಿಶೀಲಿಸಿತು. ಎಲ್ಲಿಯೂ ನೀರಿನ ಮಟ್ಟ ಅಪಾಯದ ಅಂಚಿಗೆ ತಲುಪಿಲ್ಲ. ಆದರೂ ನಾವು ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ತಂಡಗಳನ್ನು ಸನ್ನದ್ಧಗೊಳಿಸಿದ್ದೇವೆ. 3 ತಂಡಗಳನ್ನಾಗಿ ರೂಪಿಸಿ ಅಗತ್ಯವಿರುವ ಕಡೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಶಾಮಕ ದಳದ ತಂಡಗಳಿಗೆ ಸ್ಥಳದಲ್ಲೇ ವ್ಯಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೋಟ್‌ಗಳ ವ್ಯವಸ್ಥೆ ಮಾಡಿದ್ದು, ಯಾವುದೇ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಿದ್ಧಗೊಂಡಿವೆ. ಈಗಾಗಲೇ ಕರ್ತವ್ಯನಿರತ ಸಿಬ್ಬಂದಿ, ನಡುಗಡ್ಡೆ ಜನರಿಗೆ, ಮೀನುಗಾರರಿಗೆ ಲೈಫ್ ಜಾಕೆಟ್‌ಗಳನ್ನು ವಿತರಿಸಲಾಗಿದೆ. ಜಿಲ್ಲಾಧಿಕಾರಿ ಶರತ್ ಬಿ. ಮೂರು ತಾಲೂಕುಗಳ ಅಧಿಕಾರಿಗಳು ಮತ್ತು ಎನ್‌ಡಿಆರ್‌ಎಫ್ ತಂಡದ ಅದಿಕಾರಿಗಳ ವಿಶೇಷ ಸಭೆ ನಡೆಸಿದ್ದು, ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.