ರಾಯಚೂರು: ಒಂದೆಡೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಯುವುದೋ ಅಳಿಯುವುದೋ ಎನ್ನುವ ಕುತೂಹಲ ಮೂಡಿದೆ. ಅದರ ಮಧ್ಯೆ ಸರ್ಕಾರ ಉಳಿದರೂ, ಅಳಿದರೂ ಜಿಲ್ಲೆಗೆ ದಕ್ಕಿದ ಸಚಿವ ಸ್ಥಾನಕ್ಕೆ ಕುತ್ತುಂಟಾಗುವುದೇ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಹಿರಿಯ ನಾಯಕ, ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡರಿಗೆ ಸಚಿವ ಸ್ಥಾನ ನೀಡಿ ಬಹುದಿನಗಳ ಬೇಡಿಕೆ ಈಡೇರಿಸಿತ್ತು. ಸರ್ಕಾರ ಈಚೆಗೆ ಒಂದು ವರ್ಷ ಪೂರೈಸಿದ್ದು, ಆಗಲೇ ಸರ್ಕಾರದ ಸ್ಥಿತಿ ಡೋಲಾಯಮಾನವಾಗಿದೆ. ಅತೃಪ್ತರ ಮನವೊಲಿಕೆಗೆ ಅನೇಕ ಕಸರತ್ತು ನಡೆಸಿರುವ ದೋಸ್ತಿ ಪಕ್ಷಗಳ ವರಿಷ್ಠರು ಅವರು ಏನೇ ಕೇಳಿದರೂ ಇಲ್ಲ ಎನ್ನುವ ಸ್ಥಿತಿಯಲ್ಲಿಲ್ಲ. ಅದರಲ್ಲಿ ಸಚಿವ ಸ್ಥಾನದ ಬೇಡಿಕೆ ಎದುರಾದಲ್ಲಿ ಕೆಲ ಸಚಿವರು ರಾಜೀನಾಮೆ ನೀಡಬೇಕಾಗಬಹುದು. ಅಂಥ ವೇಳೆ ಉಭಯ ಪಕ್ಷಗಳ ನಿಷ್ಠಾವಂತ ನಾಯಕರೇ ಟಾರ್ಗೆಟ್ ಆಗಬಹುದು.
ಹಿಂದಿನ ಸರ್ಕಾರದಲ್ಲೂ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ವಂಚಿಸಲಾಗಿತ್ತು. ಏಳು ಕ್ಷೇತ್ರಗಳಲ್ಲಿ ಮೂವರು ಕಾಂಗ್ರೆಸ್ ಶಾಸಕರಿದ್ದರು. ಹಂಪನಗೌಡ ಬಾದರ್ಲಿಯಂಥ ಹಿರಿಯ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಈ ಬಾರಿಯೂ ಮೂವರು ಕಾಂಗ್ರೆಸ್, ಇಬ್ಬರು ಜೆಡಿಎಸ್ ಶಾಸಕರಿದ್ದು, ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಜೆಡಿಎಸ್‌ನ ನಿಷ್ಠಾವಂತ ನಾಯಕರೆನಿಸಿಕೊಂಡಿದ್ದ ವೆಂಕಟರಾವ್ ನಾಡ ಗೌಡರಿಗೆ ಸಚಿವ ಸ್ಥಾನ ನೀಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೂ ನ್ಯಾಯ ಸಲ್ಲಿಸಿದ್ದರು. ಆದರೆ, ಈಗ ಎದುರಾಗಿರುವ ಬಿಕ್ಕಟ್ಟು ಶಮನ ಮಾಡಲು ಸರ್ಕಾರ ಸಚಿವ ಸಂಪುಟ ಪುನಾರಚನೆ ಮಾಡಿದಲ್ಲಿ ಜಿಲ್ಲೆಗೆ ನೀಡಿರುವ ಸಚಿವ ಸ್ಥಾನ ಹಿಂಪಡೆಯಬಹುದೇ ಎಂಬ ಅನುಮಾನ ಶುರುವಾಗಿದೆ. ಪಕ್ಷಕ್ಕೆ ನಿಷ್ಠರಾಗಿರುವ ವೆಂಕಟರಾವ್ ನಾಡಗೌಡ ಅವರು ವರಿಷ್ಠರ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುವವರಲ್ಲ ಎಂಬುದು ಸತ್ಯ. ಒಂದು ವೇಳೆ ಸ್ಥಾನ ತ್ಯಜಿಸುವಂತೆ ಹೇಳಿದರೆ ಅನಿವಾರ್ಯವಾಗಿ ಕೈ ಬಿಡಬೇಕಾಗುತ್ತದೆ. ಇಲ್ಲವೇ ಸರ್ಕಾರವೇ ವಿಸರ್ಜನೆಯಾದರೆ ಮುಂದಿನ ಸರ್ಕಾರ ಜಿಲ್ಲೆಗೆ ಸಚಿವ ನೀಡುವುದೇ ಎಂಬ ಅನುಮಾನವೂ ಇದೆ.
ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಸರ್ಕಾರದ ಧೋರಣೆ ಖಂಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದು ಕ್ರಮಬದ್ಧವಾಗಿದೆ ಎಂದು ಸ್ಪೀಕರ್ ತಿಳಿಸಿಯಾಗಿದೆ. ಅದರ ಜತೆಗೆ ಪ್ರತಾಪಗೌಡ ಕೂಡ ಬಿಜೆಪಿ ಸೇರುವುದು ನಿಶ್ಚಿತ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಮುಂದೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದರೂ ಅವರು ಪುನಃ ಚುನಾವಣೆ ಎದುರಿಸಬೇಕಿದೆ. ಆರಂಭದಲ್ಲೇ ಸಚಿವ ಸ್ಥಾನ ಸಿಗುವುದೇ ಎಂಬ ಖಚಿತತೆ ಇಲ್ಲ.
ಒಂದು ವೇಳೆ ಎಲ್ಲ ಬಿಕ್ಕಟ್ಟು ಶಮನಗೊಂಡು ಸಮ್ಮಿಶ್ರ ಸರ್ಕಾರ ಯಥಾ ಸ್ಥಿತಿಯಲ್ಲಿ ಮುಂದುವರಿದರೆ ಜಿಲ್ಲೆಯ ಸಚಿವ ಸ್ಥಾನಕ್ಕೆ ಯಾವುದೇ ಆತಂಕವಿಲ್ಲ. ಆಪರೇಷನ್ ಕಮಲ ಯಶಸ್ವಿಯಾಗಿದ್ದೇ ಆದಲ್ಲಿ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆಯೇ ಹೆಚ್ಚು ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯ ರಾಜಕೀಯದಲ್ಲಿ ಏನಾಗುತ್ತಿದೆ ಎನ್ನುವುದನ್ನು ದಿನ ಬೆಳಗಾದರೆ ಮಾಧ್ಯಮಗಳಲ್ಲಿ ರಾಜ್ಯದ ಜನ ನೋಡುತ್ತಿದ್ದಾರೆ. ಆದರೆ, ಈ ಬಗ್ಗೆ ನಾನು ಏನೂ ಹೇಳಲಾರೆ. ಕಾಯ್ದು ನೋಡಿ ಎಂದಷ್ಟೇ ಹೇಳುವೆ.
•
ವೆಂಕಟರಾವ್ ನಾಡಗೌಡ,
ಜಿಲ್ಲಾ ಉಸ್ತುವಾರಿ ಸಚಿವ