ರಾಯಚೂರು: ಒಪೆಕ್ ಆಸ್ಪತ್ರೆ ಐಸೋಲೇಶನ್ ವಾರ್ಡ್‌ನಲ್ಲಿ ದಾಖಲಾಗಿದ್ದ 34 ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ರವಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ರೋಗಿಗಳ ಮುಖದಲ್ಲಿ ಮಂದಹಾಸ ಮೂಡಿದ್ದರೆ, ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ.
ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳ ಮೇಲೆ ಪುಷ್ಪವೃಷ್ಟಿ ಮಾಡಿ ಆಸ್ಪತ್ರೆಯಿಂದ ಬೀಳ್ಕೊಟ್ಟರು. ಬಳಿಕ ಆಂಬುಲೆನ್ಸ್ ಮೂಲಕ ಅವರ ಮನೆಗೆ ಕಳುಹಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಮೇ 17ರಿಂದ ಸೋಂಕು ಹರಡಿದೆ. ಸೋಂಕಿತರನ್ನು ಒಪೆಕ್ ಆಸ್ಪತ್ರೆಯಲ್ಲಿರುವ ಐಸೋಲೇಶನ್ ವಾರ್ಡ್‌ಗೆ ಸ್ಥಳಾಂತರಿಸಿ 14 ದಿನ ಚಿಕಿತ್ಸೆ ನೀಡಲಾಗಿತ್ತು. ಅದರಲ್ಲಿ 34 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಎರಡನೇ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ನಂತರ ಗುಣಮುಖರಾದವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ರಾಯಚೂರು ನಗರ, ಆಟೋ ನಗರ, ಮಡ್ಡಿಪೇಟೆ, ಮಂದಕಲ್ ಗ್ರಾಮಕ್ಕೆ ಸೇರಿದ ಕೋವಿಡ್ ಸೋಂಕಿತರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಹೊಂದಿರುವವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರೆಂಟೈನ್ ನಲ್ಲಿಯೇ ಇರಬೇಕು. ಅವರ ಕೈಗಳ ಮೇಲೆ ಮುದ್ರೆ ಹಾಕಿ ಕಳುಹಿಸಲಾಗುತ್ತಿದೆ. ಹೊರಗೆ ಓಡಾಡಿದಲ್ಲಿ ಜನರಿಗೆ ತಿಳಿಯುತ್ತದೆ. ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಬಿಡುಗಡೆ ಹೊಂದಿರುವ ಸೋಂಕಿತರು ಮನೆಯಲ್ಲಿರಬೇಕು. ಯಾರ ಸಂಪರ್ಕಕ್ಕೆ ಹೋಗಬಾರದು. ಅವರ ಮೇಲೆ ನಿಗಾವಹಿಸಲು ಪೊಲೀಸರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ನಿತ್ಯ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುವರು. ಸಂಬಂಧಿಸಿದವರಿಗೆ ಬಿಡುಗಡೆಯಾದವರ ಪಟ್ಟಿ ಈಗಾಗಲೇ ನೀಡಲಾಗಿದೆ. ರಾಯಚೂರು ತಾಲೂಕಿನ ಹೊಸ ಮಲಿಯಬಾದ್ ಗ್ರಾಮದ ಎರಡು ವರ್ಷದ ಬಾಲಕಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಮಲಿಯಬಾದ್ ಗ್ರಾಮದಲ್ಲಿ ಕಂಟೆನ್ಮೆಂಟ್ ಝೋನ್ 28 ದಿನ ಮುಂದುವರಿಯಲಿದೆ. ಇನ್ನೂ ಮಹಾರಾಷ್ಟ್ರದಿಂದ ಇನ್ನೂ ಜಿಲ್ಲೆಗೆ ಆಗಮಿಸಲು 200ಕ್ಕೂ ಹೆಚ್ಚು ಅರ್ಜಿಗಳು ಬಾಕಿಯಿವೆ. ಸರಿ ಸುಮಾರು 1500 ಜನ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.
ದೇವದುರ್ಗ ತಾಲೂಕು ಕೋತಿ ಗುಡ್ಡದಲ್ಲಿ ಮೃತ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್ ನಿಯಾವಳಿಯಂತೆ ಶವಸಂಸ್ಕಾರ ಮಾಡಲಾಗಿದೆ. ಶವ ಸಂಸ್ಕಾರ ದಲ್ಲಿ ಭಾಗಿಯಾದವರ ಮೇಲೆ ನಿಗಾವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ, ರಿಮ್ಸ್ ಡೀನ್ ಡಾ| ಬಸವರಾಜ ಪೀರಾಪುರ, ಒಪೆಕ್ ವಿಶೇಷಾಧಿಕಾರಿ ಡಾ| ನಾಗರಾಜ ಗದ್ವಾಲ್, ಜಿಲ್ಲಾ ಸರ್ಜನ್ ಡಾ| ವಿಜಯ ಶಂಕರ, ಡಿಎಸ್‌ಒ ಡಾ| ನಾಗರಾಜ ಇದ್ದರು.