Advertisement

ರಾಯಚೂರಿನಲ್ಲಿ ಪಾತಾಳ ಕಂಡ ಅಂತರ್ಜಲ

11:10 AM Jul 19, 2019 | Naveen |

ಸಿದ್ಧಯ್ಯಸ್ವಾಮಿ ಕುಕುನೂರು
ರಾಯಚೂರು:
ಸತತ ಬರದಿಂದ ಕಂಗೆಟ್ಟ ಜಿಲ್ಲೆಯಲ್ಲಿ ಅಂತರ್ಜಲ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಎಷ್ಟು ಆಳಕ್ಕೆ ಕೊರೆದರೂ ಕೊಳವೆಬಾವಿಗಳಿಂದ ನೀರು ಮಾತ್ರ ಬರುತ್ತಿಲ್ಲ. ಜಿಲ್ಲಾಡಳಿತ ಹೊಸ ಬೋರ್‌ವೆಲ್ ಕೊರೆಯಲು ಉತ್ಸಾಹ ತೋರುತ್ತಿದೆ ವಿನಃ ಅಂತರ್ಜಲ ಹೆಚ್ಚಿಸಿ ಜಲ ಮರುಪೂರಣಕ್ಕೆ ಕಿಂಚಿತ್ತೂ ಒತ್ತು ನೀಡುತ್ತಿಲ್ಲ.

Advertisement

ಬರ ಬಂದರೆ ಸಾಕು ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಭುಗಿಲೇಳುತ್ತದೆ. ಎರಡು ನದಿಗಳಿದ್ದರೂ ಅದೆಷ್ಟೋ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯವಿಲ್ಲ. ಆದರೆ, ಸರ್ಕಾರ ನೀರಿಗೆ ಮೊದಲಾದ್ಯತೆ ನೀಡಬೇಕು ಎಂಬ ಕಾರಣಕ್ಕೆ ಬೋರ್‌ವೆಲ್ ಕೊರೆಸಲು ಅನುಮತಿ ನೀಡುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕಳೆದ ಬೇಸಿಗೆಯಲ್ಲಿ ಬರೋಬ್ಬರಿ 554 ಬೋರ್‌ವೆಲ್ಗಳನ್ನು ಕೊರೆಯಿಸಲಾಗಿದೆ. ಅದರಲ್ಲಿ 393ರಲ್ಲಿ ಅಲ್ಪಸ್ವಲ್ಪ ನೀರು ಲಭ್ಯವಾಗಿದ್ದರೆ ಬರೋಬ್ಬರಿ 160 ಬೋರ್‌ವೆಲ್ಗಳು ವಿಫಲಗೊಂಡಿವೆ. 500 ಅಡಿಗೂ ಅಧಿಕ ಆಳ ಕೊರೆದರೂ ನೀರು ಸಿಕ್ಕಿಲ್ಲ. ಕಳೆದ ವರ್ಷ ಕೂಡ ಇಂಥದ್ದೇ ಸನ್ನಿವೇಶ ಎದುರಾದಾಗ ಆಗಲೂ ಸಾಕಷ್ಟು ಬೋರ್‌ವೆಲ್ ಕೊರೆಯಿಸಲಾಗಿತ್ತು. ನೀರು ಬಾರದೆ ಅನೇಕ ಬೋರ್‌ವೆಲ್ಗಳು ವಿಫಲಗೊಂಡಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.

ಹೆಚ್ಚು ನೀರು ಬಂದಿಲ್ಲ: ಈಗ ಕೊರೆಸಿದ ಬೋರ್‌ವೆಲ್ಗಳಲ್ಲಿ ನೀರು ಬಂದಿದೆಯಾದರೂ ಬಹುತೇಕ ಕಡೆ ಎರಡು ಮೂರು ಇಂಚು ಬಂದಿರುವುದೇ ಹೆಚ್ಚು. ಅಗತ್ಯಕ್ಕೆ ಅನುಸಾರ ಬಳಸಬೇಕಿದೆ. ಅಲ್ಲದೇ, ಬೇಸಿಗೆ ಮುಗಿದ ಬಳಿಕ ಅವುಗಳ ಸಮರ್ಪಕ ಬಳಕೆ ಆಗದೆ ಮುಂಬರುವ ವರ್ಷಕ್ಕೆ ಅವು ನಿರುಪಯುಕ್ತವಾದ ನಿದರ್ಶನ ಹೆಚ್ಚು. ಆದರೆ, ಮುಂದಿನ ವರ್ಷಕ್ಕೆ ಆ ಕೊಳವೆಬಾವಿಗಳಿಂದ ನೀರು ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ಹೊಸ ಬೋರ್‌ವೆಲ್ ಕೊರೆಯಬೇಕಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಅಂತರ್ಜಲ ಹೆಚ್ಚಳಕ್ಕಿಲ್ಲ ಆದ್ಯತೆ: ಕೇವಲ ಬೋರ್‌ವೆಲ್ ಕೊರೆಯುವುದರಿಂದ ಅಂತರ್ಜಲ ಹೆಚ್ಚುವುದಿಲ್ಲ. ಈ ವರ್ಷ ಕೊರೆದ ಕೊಳವೆಬಾವಿಗಳು ಶಾಶ್ವತವಾಗಿ ಕೆಲಸ ಮಾಡಬೇಕಿದ್ದರೆ ಜಲ ಮರುಪೂರಣಕ್ಕೆ ಆದ್ಯತೆ ನೀಡಬೇಕಿದೆ ಎನ್ನುತ್ತಾರೆ ಪರಿಸರ ತಜ್ಞರು. ಆದರೆ, ಜಿಲ್ಲೆಯ ಮಟ್ಟಿಗೆ ಮಾತ್ರ ಅದು ಆಗುತ್ತಿಲ್ಲ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ ಅಗತ್ಯವಿರುವ ಕಡೆ ಕೊರೆಸಲು ಸರ್ಕಾರದ ನಿರ್ದೇಶನವಿತ್ತು. ಅಂತರ್ಜಲ ಸಮಸ್ಯೆ ಎಲ್ಲೆಡೆ ಇದೆ. ಸರ್ಕಾರ ಅಂತರ್ಜಲ ಹೆಚ್ಚಿಸಲೆಂದೇ ಜಲಾಮೃತ ಎಂಬ ಯೋಜನೆ ಜಾರಿಗೊಳಿಸುತ್ತಿದ್ದು, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ

Advertisement
Advertisement

Udayavani is now on Telegram. Click here to join our channel and stay updated with the latest news.

Next