Advertisement

ಬೆರಗು ತಂದಬಣ್ಣ ಬಣ್ಣದ ಬೆನಕ

11:52 AM Sep 04, 2019 | Naveen |

ರಾಯಚೂರು: ನೆರೆ, ಬರದಲ್ಲಿ ಬಂದ ಗಣನಾಯಕನಿಗೆ ಸರಳ ಸ್ವಾಗತ ಸಿಕ್ಕಿದ್ದು ನಿಜವಾದರೂ, ಪಿಒಪಿ ಗಣೇಶ ಮೂರ್ತಿಗಳ ಭರಾಟೆಯಲ್ಲಿ ಮಾತ್ರ ಕಿಂಚಿತ್ತೂ ಕಡಿಮೆಯಾದಂತೆ ಕಂಡು ಬಂದಿಲ್ಲ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲಿಯೂ ಅಬ್ಬರದ ವಾತಾವರಣ ಕಾಣುತ್ತಿಲ್ಲ. ಎಲ್ಲೆಲ್ಲೂ ಸರಳ ಆಚರಣೆಗೆ ಆದ್ಯತೆ ನೀಡಿದಂತೆ ಕಾಣುತ್ತಿದೆ. ಕೆಲವೊಂದು ಗಜಾನನ ಸಮಿತಿಗಳು ಮಾತ್ರ ವೈಭವದ ಆಚರಣೆಯಲ್ಲಿ ಎಂದಿನ ಗತ್ತು ಕಾಯ್ದುಕೊಂಡರೆ ಬಹುತೇಕ ಸಂಘಗಳು ಖರ್ಚಿಗೆ ತುಸು ಕಡಿವಾಣ ಹಾಕಿದಂತಿದೆ. ಇನ್ನು ಶಾಲಾ ಕಾಲೇಜುಗಳಲ್ಲಿ, ಮನೆಗಳಲ್ಲಿ ಸರಳವಾಗಿ ಮಣ್ಣಿನ ಗಣೇಶ, ಚಿಕ್ಕ ಗಾತ್ರದ ಗಣೇಶಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಸಂಜೆಯೇ ವಿಸರ್ಜನೆ ಮಾಡಲಾಯಿತು. ಕೆಲವರು ಅಕ್ಕಪಕ್ಕದ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಿದರೆ ಬಹುತೇಕರು ಮನೆಯಲ್ಲಿ ಬಕೆಟ್, ಪಾತ್ರೆಗಳಲ್ಲಿ ನೀರು ತುಂಬಿ ವಿಸರ್ಜಿಸುವ ಮೂಲಕ ಹಬ್ಬವನ್ನು ಆಚರಿಸಿದರು.

ರಾಯಚೂರು ಜಿಲ್ಲಾದ್ಯಂತ 1,845 ಗಣಪತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಲಾಗಿದೆ. ರಾಯಚೂರು ನಗರದಲ್ಲೇ 337 ಗಣೇಶಗಳು ಪ್ರತಿಷ್ಠಾಪಿತಗೊಂಡಿದ್ದರೆ, ರಾಯಚೂರು ಗ್ರಾಮೀಣ ವಿಭಾಗದಲ್ಲಿ 402 ಗಣೇಶಗಳನ್ನು ಕೂಡ್ರಿಸಲಾಗಿದೆ. ಲಿಂಗಸುಗೂರು ಉಪವಿಭಾಗದಲ್ಲಿ 387, ಸಿಂಧನೂರು ಉಪ ವಿಭಾಗದಲ್ಲಿ 719 ಗಣಪತಿ ಸಮಿತಿಗಳಿಗೆ ಅನುಮತಿ ನೀಡಲಾಗಿದೆ.

ರಾಯಚೂರು ನಗರದಲ್ಲಿ ಎಂದಿನಂತೆ ಅನೇಕ ಸಂಘ ಸಂಸ್ಥೆಗಳು, ಗಜಾನನ ಸಮಿತಿಗಳು ತಮ್ಮ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿವೆ. ಮುಖ್ಯವಾಗಿ ತೀನ್‌ ಕಂದಿಲ್, ಸರಾಫ್‌ ಬಜಾರ್‌, ಏಕ್‌ ಮಿನಾರ್‌, ಚಂದ್ರಮೌಳೇಶ್ವರ, ಗೀತಾ ಮಂದಿರ, ನೇತಾಜಿ ನಗರ, ಚಂದ್ರಮೌಳೇಶ್ವರ, ಗಂಗಾ ನಿವಾಸ ಹೀಗೆ ಪ್ರಮುಖ ವೃತ್ತ, ಬಡಾವಣೆಗಳಲ್ಲಿ ವಿವಿಧ ಗಜಾನನ ಸಮಿತಿಗಳು ವಿಘ್ನ ನಿವಾರಕನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿವೆ.

ಬಗೆ ಬಗೆಯ ಕಲಾಕೃತಿಗಳು: ಪ್ರತಿ ವರ್ಷ ವಿಭಿನ್ನ ಗಣೇಶಗಳನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆಯುವ ಕೆಲ ಗಜಾನನ ಸಮಿತಿಗಳು ಈ ಬಾರಿಯೂ ಅದೇ ಮಾದರಿಯನ್ನು ಮುಂದುವರಿಸಿವೆ. ವಿಭಿನ್ನತೆಗೆ ಹೆಸರಾದ ಕಲ್ಲಾನೆ ಗಜಾನನ ಸಮಿತಿ ಈ ಬಾರಿ ಮುಂಬಯಿನ ಆದಿದೇವ ಸಿದ್ಧಿ ವಿನಾಯಕನ ಮಾದರಿಯ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆದಿದೆ. ಗಾತ್ರದಲ್ಲಿ ಕಳೆದ ಬಾರಿಗಿಂತ ಚಿಕ್ಕದಾಗಿದ್ದು, ಸರಳವಾಗಿ ಕಂಡು ಬರುತ್ತಿದೆ. ಮುನ್ನೂರು ಕಾಪು ಸಮಾಜದ ಲಕ್ಷ್ಮೀ ದೇವಸ್ಥಾನದಲ್ಲಿ 22 ಅಡಿ ಗಣೇಶನನ್ನು ಕೂಡಿಸಿದ್ದು ಗಮನ ಸೆಳೆಯುತ್ತಿದೆ. ನಗರದ ಶೆಟ್ಟಿ ಬಂಡಿ ಚೌಕ್‌ ಬಳಿ ಪುರಾತನ ದೇವಸ್ಥಾನ ಮಾದರಿಯಲ್ಲಿ ಮಂಟಪ ನಿರ್ಮಿಸಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಗೀತಾ ಮಂದಿರದಲ್ಲಿ ಚಿಕ್ಕ ಗಣೇಶನನ್ನು ಪ್ರತಿಷ್ಠಾಪಿಸಿ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಕೋದಂಡ ರಾಮ ದೇವಸ್ಥಾನ ಬಳಿ ಹಡಗಿನ ಮಾದರಿ ನಿರ್ಮಿಸಿ ನಾಲ್ಕಾರು ಮೆಟ್ಟಿಲು ನಿರ್ಮಿಸಿ ಅದರಲ್ಲಿ ಗಣೇಶನನ್ನು ಕೂಡ್ರಿಸಲಾಗಿದೆ. ಕಾಟೆ ದರವಾಜ್‌ ಬಳಿ ದತ್ತಾತ್ರೇಯ ಮಾದರಿ ಗಣೇಶ ಆಕರ್ಷಿಸಿದರೆ, ಗೌಳಿ ಸಮಾದಜವರು ಕೂಡ್ರಿಸಿದ ಕೃಷ್ಣನ ಮಾದರಿ ಗಣೇಶ ಗಮನ ಸೆಳೆಯುತ್ತಿದೆ. ಎಲ್ಲಗಿರಿಗಿಂತ ಭಿನ್ನವಾಗಿ ಚಂದ್ರಮೌಳೇಶ್ವರ ವೃತ್ತದಲ್ಲಿ ಈ ವರ್ಷವೂ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿದ್ದು, ಉತ್ತಮ ಸಂದೇಶ ನೀಡಲಾಗಿದೆ. ಇನ್ನೂ ಸಾಕಷ್ಟು ಕಡೆ ಪ್ರತಿಷ್ಠಾಪಿಸಿದ ವಿವಿಧ ಮಾದರಿಯ ಗಣೇಶ ಮೂರ್ತಿಗಳು ಜನರನ್ನು ಸೆಳೆಯುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next