ರಾಯಚೂರು: ರೈತರ ಆಪತ್ತಿನ ಕಾಲಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಜಾರಿಗೊಳಿಸಿದ ಫಸಲ್ ಬಿಮಾ ಯೋಜನೆ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಾವು ಪ್ರತಿ ವರ್ಷ ದುಡ್ಡು ಕಟ್ಟಿದ್ದು, ಸತತ ಬರ ಇದ್ದರೂ ನಮಗೆ ಮಾತ್ರ ಪರಿಹಾರ ಬಂದಿಲ್ಲ ಎಂದು ದೂರುತ್ತಿದ್ದಾರೆ.
2016-2017ರಿಂದ 2018-19ರವರೆಗೆ ಜಿಲ್ಲೆಯಲ್ಲಿ ಬರೊಬ್ಬರಿ 2,14,851 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಜಿಲ್ಲೆಗೆ ಕೇವಲ 80.30 ಕೋಟಿ ರೂ. ವಿಮೆ ಹಣ ಬಿಡುಗಡೆಯಾಗಿದ್ದು, 86,817 ರೈತರಿಗೆ ಮಾತ್ರ ಇದರ ಲಾಭ ಸಿಕ್ಕಿದೆ. ನೋಂದಣಿ ಮಾಡಿದ ರೈತರ ಜಮೀನಿನಲ್ಲಿ ಬೆಳೆ ಹಾನಿಯಾಗಿದ್ದರೂ ಹಣ ಬಾರದಿರುವ ಕಾರಣ ರೈತರು ಯೋಜನೆಯಿಂದ ವಿಮುಖರಾಗುತ್ತಿದ್ದಾರೆ.
2017-18ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದೆ. ಹಾಗಿದ್ದರೆ ನೋಂದಾಯಿತ ಎಲ್ಲ ರೈತರಿಗೂ ವಿಮೆ ಹಣ ಬರಬೇಕಿತ್ತು. ಯಾಕೆ ಬಂದಿಲ್ಲ ಎಂದು ಪ್ರಶ್ನಿಸುತ್ತಾರೆ ರೈತರು.
ಯಾವ ವರ್ಷ ಎಷ್ಟು ಹಣ: 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 31,496 ರೈತರು ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿದ್ದು, 1.45 ಲಕ್ಷ ಎಕರೆ ಪ್ರದೇಶ ವಿಮೆಗೊಳಪಟ್ಟಿತ್ತು. ಆದರೆ, 2.53 ಕೋಟಿ ರೂ. ವಿಮೆ ಹಣ ಬಿಡುಗಡೆಯಾಗಿದ್ದು, 2,722 ರೈತರಿಗೆ ಮಾತ್ರ ವಿಮೆ ಹಣ ಲಭಿಸಿತ್ತು. ಆ ವರ್ಷ ಸಾಕಷ್ಟು ಕಡೆ ಆಲಿಕಲ್ಲು ಮಳೆಯಾಗಿ ವಿಪರೀತ ಬೆಳೆ ಹಾನಿಯಾಗಿತ್ತು. 2016-17ನೇ ಸಾಲಿನ ಹಿಂಗಾರಿನಲ್ಲಿ ನೋಂದಣಿಯಾದ 73,125 ರೈತರಲ್ಲಿ 67,803 ರೈತರಿಗೆ ವಿಮೆ ಹಣ ಲಭಿಸಿದೆ. ಆ ವರ್ಷದ ಬೇಸಿಗೆಯಲ್ಲಿ ನೋಂದಣಿಯಾದ 842 ರೈತರಲ್ಲಿ ಒಬ್ಬ ರೈತರಿಗೂ ವಿಮೆ ಹಣ ಬಂದಿಲ್ಲ. 2017-18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 22,900 ರೈತರು ನೋಂದಣಿಯಾಗಿದ್ದು, 26.80 ಕೋಟಿಗಳಲ್ಲಿ 11,250 ರೈತರ ಖಾತೆಗೆ ವಿಮೆ ಹಣ ಜಮಾ ಆಗಿದೆ. ಉಳಿದ 11 ಸಾವಿರ ರೈತರಿಗೆ ಯಾವುದೇ ವಿಮೆ ಹಣ ಜಮಾವಣೆಯಾಗಿಲ್ಲ. ಬೇಸಿಗೆಯಲ್ಲಿ 257 ರೈತರು ನೋಂದಣಿಯಾಗಿದ್ದರೂ ಯಾರಿಗೂ ಹಣ ಜಮಾ ಆಗಿಲ್ಲ. 2018-19ನೇ ಸಾಲಿನಲ್ಲಿ 86,229 ರೈತರು ವಿಮೆ ನೋಂದಣಿ ಮಾಡಿಕೊಂಡಿದ್ದರೆ, 8.22 ಕೋಟಿಗಳಲ್ಲಿ 5,492 ರೈತರ ಖಾತೆಗೆ ವಿಮೆ ಹಣ ಜಮಾ ಆಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ವಿಮೆ ಹಣ ಜಮಾ ಆಗಿಲ್ಲ.
ಅವೈಜ್ಞಾನಿಕ ನಿಯಮ: ವಿಮೆ ಹಣ ನೀಡಲು ಸರ್ಕಾರದ ಅವೈಜ್ಞಾನಿಕ ನಿಯಮಗಳು ಅಡ್ಡಿಯಾಗುತ್ತಿವೆ. ಹೆಕ್ಟೇರ್ ಪ್ರದೇಶ ಆಧರಿಸಿ ಸರ್ವೆ ನಡೆಸಿ ನಷ್ಟದ ಅಂದಾಜು ಮಾಡಿ ಪರಿಹಾರ ನೀಡುವುದಾಗಿ ತಿಳಿಸುತ್ತಾರೆ. ಆದರೆ, ಒಂದು ಎರಡು ಎಕರೆ ಇರುವ ರೈತರು ಲೆಕ್ಕಕ್ಕೆ ಸಿಗದಂತಾಗುತಾಗುತ್ತದೆ. ಇನ್ನು ಸರ್ಕಾರದ ಮಾನದಂಡಗಳಿಗೂ ವಾಸ್ತವಾಂಶಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ನಿಯಮ ಸಡಿಲಿಸಲಿ ಎಂಬುದು ರೈತರ ಹಕ್ಕೊತ್ತಾಯ.
ಸಾಲ ಬೇಕಾದ್ರೆ ವಿಮೆ ಮಾಡಿಸಿ: ರೈತರು ಯಾವುದೇ ಬ್ಯಾಂಕ್‌ಗಳಿಗೆ ತೆರಳಿ ಸಾಲ ಪಡೆಯಬೇಕೆಂದರೆ ಫಸಲ್ ಬಿಮಾ ವಿಮೆ ಮಾಡಿಸಿ ಎಂಬ ಷರತ್ತು ಒಡ್ಡುತ್ತಿದ್ದಾರೆ. ರೈತರು ನಮಗೆ ಈ ಯೋಜನೆಯೇ ಬೇಡ. ಸಾಲ ಕೊಡಿ ಸಾಕು ಎಂದರೂ ಕೇಳುವುದಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನ ಇದೆ. ಕಡ್ಡಾಯವಾಗಿ ವಿಮೆ ಪಾವತಿಸಿದರೆ ಸಾಲ, ಇಲ್ಲವಾದರೆ, ಇಲ್ಲ ಎನ್ನುತ್ತಿದ್ದಾರೆ. ಕೆಲ ಬ್ಯಾಂಕ್‌ಗಳಲ್ಲಿ ಈಗಾಗಲೇ ಸಾಲ ಪಡೆದ ರೈತರಿದ್ದರೆ ಅವರ ಖಾತೆಯಿಂದ ವಿಮೆ ಹಣ ಕಡಿತ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.
ಒಟ್ಟಾರೆ ರೈತರಿಗೆ ಬೇಡವಾದರೂ ಬಲವಂತದಿಂದ ವಿಮೆ ಮಾಡಿಸಿ ಪರಿಹಾರ ಹಣ ನೀಡದೆ ಸತಾಯುಸುವಂತಾಗಿದೆ. ಇದರಿಂದ ರೈತರು ಮಾತ್ರ ಅಡಕತ್ತರಿಯಲ್ಲಿ ಸಿಲುಕಿ ನಲಗುತ್ತಿರುವುದು ಸತ್ಯ.
ಮೂರು ವರ್ಷಗಳಿಂದ ಫಸಲ್ ಬಿಮಾ ವಿಮೆ ಮಾಡಿಸಿದ ಎಷ್ಟೋ ರೈತರಿಗೆ ಪರಿಹಾರವೇ ಬಂದಿಲ್ಲ. ಆದರೂ ಪ್ರತಿ ವರ್ಷ ರೈತರಿಂದ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಈಗ ಬ್ಯಾಂಕ್‌ನವರು ಸಾಲ ನೀಡಬೇಕಾದರೂ ವಿಮೆ ಕಡ್ಡಾಯ ಎನ್ನುತ್ತಿದ್ದಾರೆ. ರಾಯಚೂರು ಜಿಲ್ಲೆ ಎರಡ್ಮೂರು ವರ್ಷಗಳಿಂದ ಸತತ ಬರಕ್ಕೆ ತುತ್ತಾಗಿದೆ. ಇನ್ನೇನು ಬೇಕು ಸರ್ಕಾರಕ್ಕೆ ದಾಖಲೆ. ಮೊದಲು ನಾವು ಕಟ್ಟಿದ ವಿಮೆ ಪರಿಹಾರ ಕೊಟ್ಟು ಹೊಸ ವಿಮೆ ಮಾಡಿಸಿಕೊಳ್ಳಲಿ.
•ಲಕ್ಷ್ಮಣಗೌಡ ಕಡಂಗದಿನ್ನಿ,
ರೈತ ಸಂಘದ ಜಿಲ್ಲಾಧ್ಯಕ್ಷ