Advertisement

ಯುವಶಕ್ತಿಯಿಂದ ಬಲಿಷ್ಠರಾಷ್ಟ್ರ ನಿರ್ಮಾಣ

12:19 PM Dec 25, 2019 | Naveen |

ರಾಯಚೂರು: ಯುವಶಕ್ತಿಯಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯವಿದೆ. ಆದರೆ ಯುವಕರು ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿರುವುದು ಆತಂಕಕಾರಿ ವಿಷಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಸ್ಥಳೀಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಯುವಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಯುವಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಯುವ ಶಕ್ತಿ ಎಂದರೆ ಅದು ರಾಷ್ಟ್ರ ಶಕ್ತಿ. ದೇಶದಲ್ಲಿ ಯುವ ಸಮೂಹ ಬಲಿಷ್ಠವಾಗಿದ್ದು, ಈ ರಾಷ್ಟ್ರ ಕಟ್ಟಲು ಬಲಿಷ್ಠ ಯುವಕರ ಅಗತ್ಯ ಇದೆ ಎಂದು ಸ್ವಾಮಿ ವಿವೇಕಾನಂದರು ಬಹಳ ಹಿಂದೆಯೇ ಹೇಳಿದ್ದರು. ಅವರು ಯಾವುದೇ ಕ್ಷೇತ್ರಕ್ಕೆ ಅಡಿಯಿಟ್ಟರೂ ಆ ಕ್ಷೇತ್ರ ಬಂಗಾರವಾಗುತ್ತದೆ. ಸರಕಾರಿ ನೌಕರಿಯಲ್ಲಿ ದಕ್ಷತೆ ಹೆಚ್ಚಾಗುತ್ತದೆ. ಆದ ಕಾರಣ ಯುವಕರು ಸಾಮಾಜ ಸೇವೆಗೆ ಮುಂದಾಗಬೇಕು. ರಾಜ್ಯದ ಗ್ರಾಮೀಣ ಭಾಗದಲ್ಲಿ ಆರೋಗ್ಯವನ್ನು ಉತ್ತಮಗೊಳಿಸಲು ವೈದ್ಯರು, ತಜ್ಞರನ್ನು ನೇಮಕ ಮಾಡಲಾಗುತ್ತಿದೆ. ಯುವ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆಗೆ ಮುಂದಾಗಬೇಕು ಎಂದರು.

ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಯುವ ಜನಾಂಗ ಜೀವನದಲ್ಲಿ ಗುರಿಯಿಟ್ಟುಕೊಂಡು ಶಿಕ್ಷಣ ಪಡೆಯಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ತಂತ್ರಜ್ಞಾನವನ್ನು ಜ್ಞಾನ ಪಡೆಯಲು ಬಳಸಿಕೊಳ್ಳಬೇಕೇ ಹೊರತು ಅದಕ್ಕೆ ದಾಸರಾಗಬಾರದು. ಅವಶ್ಯಕತೆಗೆ ತಕ್ಕಷ್ಟು ಮಾತ್ರ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಜತೆಗೆ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ನಡೆಯಬೇಕು ಎಂದು ಸಲಹೆ ನೀಡಿದರು.

Advertisement

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಯುವಜನೋತ್ಸವ ದೇಶ ಕಲೆ ಹಾಗೂ ಸಂಸ್ಕೃತಿ ಪ್ರದರ್ಶಿಸುವ ಕಾರ್ಯಕ್ರಮವಾಗಿದೆ. ಜಿಲ್ಲೆಯ ಯುವ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಪ್ರದರ್ಶನ ಮಾಡುವ ಮೂಲಕ ಜಿಲ್ಲೆಗೆ ಹಾಗೂ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಸ್ಪರ್ಧೆಗಳು ಜರುಗಿದವು. ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ, ಅಪರ ಜಿಲ್ಲಾಧಿಕಾರಿ ದುರಗೇಶ, ಎಸ್ಪಿ ಡಾ| ಸಿ.ಬಿ.ವೇದಮೂರ್ತಿ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಮುಖಂಡ ತ್ರಿವಿಕ್ರಮ ಜೋಶಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next