Advertisement

ಪ್ರತ್ಯೇಕ ವಿವಿ ಆರಂಭಿಸಲು ಆಗ್ರಹ

03:37 PM Jan 12, 2020 | Team Udayavani |

ರಾಯಚೂರು: ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಪೂರ್ಣ ಪ್ರಮಾಣದಲ್ಲಿ ಶೀಘ್ರವೇ ಆರಂಭಿಸಲು ಆಗ್ರಹಿಸಿ ತಾರಾನಾಥ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಸೇರಿ ಧರಣಿ ನಡೆಸುವ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿ ಯಲ್ಲಿ ರಾಯಚೂರಿಗೆ ಪ್ರತ್ಯೇಕ ವಿವಿ ಘೋಷಣೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಕಾಲೇಜುಗಳು ಗುಲ್ಬರ್ಗ ವಿವಿ ವ್ಯಾಪ್ತಿಗೆ ಒಳಪಡುವುದರಿಂದ ಶೈಕ್ಷಣಿಕ ವರ್ಷ ಅನಗತ್ಯವಾಗಿ ವಿಳಂಬವಾಗುತ್ತಿದೆ. ಇದರಿಂದ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅಡಚಣೆಯಾಗುತ್ತಿದೆ. ಪ್ರತ್ಯೇಕ ವಿವಿ ಕಾರ್ಯಾರಂಭವಾದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಅಲೆದಾಟ ತಪ್ಪಲಿದೆ ಎಂದು ವಿವರಿಸಿದರು.

ಪ್ರತ್ಯೇಕ ವಿವಿ ಸ್ಥಾಪನೆ ಸಂಬಂಧ ಅನೇಕ ಹೋರಾಟ ನಡೆಸಲಾಗಿದೆ. 2017ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ಮುಂದಾದರೆ ರಾಜ್ಯಪಾಲರು ತಡೆ ಹಿಡಿದಿದ್ದಾರೆ. ಈಗಿನ ಸರ್ಕಾರ ಬಂದು ಆರು ತಿಂಗಳಾಗಿದ್ದು ಇನ್ನಾದರೂ ವಿವಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿವಿಗೆ ಅಧಿಕಾರಿಯನ್ನು ನೇಮಿಸಿದ್ದು, ಅಲ್ಲಿ ಕೆಲಸವೇ ಇಲ್ಲ. ಈಗ ಸ್ನಾತಕೋತ್ತರಕ್ಕೆ ಮಂಜೂರಾದ ಕೆಲವೊಂದು ತರಗತಿಗಳು ಮಾತ್ರ ನಡೆಯುತ್ತಿವೆ. ಉಳಿದಂತೆ ಮತ್ತೇನೂ ನಡೆಯುತ್ತಿಲ್ಲ. ವಿವಿಗೆ ಸಂಬಂಧಿಸಿದ ಆಯವ್ಯಯ
ಮುಂಗಡ ಪತ್ರದಲ್ಲಿ ಯಾವುದೇ ಹಂಚಿಕೆ ನೀಡಿಲ್ಲ. ಇದರಿಂದ ಅದೊಂದು ಗೊಂದಲದ ಗೂಡಾಗಿ ಪರಿಣಮಿಸಿದೆ ಎಂದು ದೂರಿದರು.

ಜಿಲ್ಲೆಗೆ ನ್ಯಾಯೋಚಿತವಾಗಿ ದಕ್ಕಬೇಕಿದ್ದ ಐಐಟಿ ಕೈ ತಪ್ಪಿದೆ. ಕನಿಷ್ಠ ಪಕ್ಷ ರಾಯಚೂರು ವಿವಿಗೆ ಆಡಳಿತಾತ್ಮಕ ಚಾಲನೆ ನೀಡದಿರುವುದು ವಿಪರ್ಯಾಸ. ಅಧಿ ವೇಶನದಲ್ಲಿ ಈ ಬಾರಿ ಮುಂಗಡ ಪತ್ರಕ್ಕೆ ಮೊದಲು ರಾಜ್ಯಪಾಲರ ಅನುಮೋದನೆಗೆ ಬೇಕಾದ ಎಲ್ಲ ಪ್ರಕ್ರಿಯೆ ಮುಗಿಸಬೇಕು. ವಿವಿ ಸ್ಥಾಪನೆಗೆ ಮತ್ತು ಹಣಕಾಸಿನ ವ್ಯವಸ್ಥೆಗೆ ಅನುಮೋದನೆ ನೀಡಿ ಎರಡು ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂಸ್ಥೆ ಅಧ್ಯಕ್ಷ ಪಾರಸಮಲ್‌ ಸುಖಾಣಿ, ಮುಖಂಡರಾದ ಮಸ್ಕಿ ನಾಗರಾಜ, ಕೆ.ಶಾಂತಪ್ಪ, ಶಿವಮೂರ್ತಿ, ರುದ್ರಪ್ಪ ಅಂಗಡಿ, ದರೂರು ಬಸವರಾಜ, ಜಿ.ಸುರೇಶ, ಅಬ್ದುಲ್‌ ಕರೀಂ, ಶ್ರೀನಿವಾಸ, ಹನುಮಂತ ನಾಯಕ, ಭೀಮನಗೌಡ ಇಟಗಿ, ರಾಜೇಶ ಮಡಿವಾಳ, ವೀರೇಶ, ಅಶ್ವಿ‌ನಿಕುಮಾರ, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next