ರಾಯಚೂರು: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದ ಸರ್ಕಾರದ ನಿರ್ಣಯಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ನಿರೀಕ್ಷೆ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಸರ್ಕಾರ ನಿಗದಿತ ಸೀಟು ನೀಡಿದ್ದರಿಂದ ಯಾರಿಗೆ ಪ್ರವೇಶ ನೀಡಬೇಕು ಎಂಬುದೇ ಸಮಸ್ಯೆಯಾಗಿ ಪರಿಣಮಿಸಿದೆ.
Advertisement
ಪ್ರಯೋಗಾತ್ಮಕವಾಗಿ ಜಿಲ್ಲೆಯ 33 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಸರ್ಕಾರ ಇಂಗ್ಲಿಷ್ ಮೀಡಿಯಂ ಶಾಲೆ ಆರಂಭಿಸಿದರೆ, 9 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಯುಕೆಜಿ ಕೂಡ ಆರಂಭವಾಗಿದೆ. ಪ್ರತಿ ತರಗತಿಗೆ 30 ಸೀಟುಗಳನ್ನು ಮಾತ್ರ ಕಾಯ್ದಿರಿಸಲಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ತರಗತಿ ಕೋಣೆ ನಿರ್ಮಿಸಿದ್ದು, 45 ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಆರಂಭದಲ್ಲಿ ಅಷ್ಟೇನು ಸ್ಪಂದನೆ ಸಿಗದ ಕಾರಣ ಶಿಕ್ಷಕರು ಕೂಡ ನಿರುಮ್ಮಳರಾಗಿದ್ದರು. ಆದರೆ, ಈಗ ಒಂದೊಂದು ಶಾಲೆಯಲ್ಲಿ ನೂರಾರು ಅರ್ಜಿಗಳನ್ನು ಪಡೆದಿದ್ದು, ಪಾಲಕರು ನಮಗೇ ಸೀಟು ಕೊಡಿ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಇದು ಶಾಲಾಡಳಿತ ಮಂಡಳಿಗೆ ತಲೆ ನೋವಾಗಿ ಪರಿಣಮಿಸಿದೆ.
Related Articles
Advertisement
ಖಾಸಗಿ ಶಾಲೆಗಳಿಗೆ ಕುತ್ತು: ಇಂಗ್ಲಿಷ್ ಮೀಡಿಯಂ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಕೇಂದ್ರಗಳಾಗಿದ್ದ ಕೆಲ ಶಿಕ್ಷಣ ಸಂಸ್ಥೆಗಳಿಗೆ ಇದರಿಂದ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಗ್ರಾಮೀಣ ಭಾಗದಲ್ಲಿ ಎರಡ್ಮೂರು ಹಳ್ಳಿಗಳಿಗೆ ಒಂದರಂತೆ ಖಾಸಗಿ ಶಾಲೆಗಳು ತಲೆ ಎತ್ತಿದ್ದವು. ಇಂಗ್ಲಿಷ್ ಮೀಡಿಯಂ ಹೆಸರಿನಲ್ಲಿ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದವು. ಒಂದು ವೇಳೆ ಸರ್ಕಾರದ ಈ ಯೋಜನೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದ್ದೇ ಆದಲ್ಲಿ ಖಾಸಗಿ ಶಾಲೆಗಳಿಗೆ ಕಂಟಕ ಎದುರಾಗುವುದು ನಿಶ್ಚಿತ.
ಆರಂಭದಲ್ಲಿ ಪಾಲಕರು ಐದಾರು ಅರ್ಜಿ ಮಾತ್ರ ಪಡೆದಿದ್ದರು. ಆದರೆ, ಜೂ.5ರೊಳಗಾಗಿ ನೂರಾರು ಜನ ಬಂದರು. ಎಲ್ಲ ಮಕ್ಕಳಿಗೂ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದರೂ ಕೇಳಿರಲಿಲ್ಲ. ಅಗತ್ಯಕ್ಕಿಂತ ಹೆಚ್ಚು ಜನ ಹಾಜರಾದರು. ಹೀಗಾಗಿ ವಿಧಿ ಇಲ್ಲದೆ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.• ಐ.ಎಸ್. ರಾಜು,
ಪ್ರಾಚಾರ್ಯರು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಟಮಾರಿ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಆರಂಭಿಸಿದ ಆಂಗ್ಲ ಮಾಧ್ಯಮ ತರಗತಿಗಳಿಗೆ ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿತ್ತು. ಅದನ್ನು ಹೆಚ್ಚಿಸುವ ಕುರಿತು ಇಲಾಖೆ ಮಟ್ಟದಲ್ಲಿ ಮೇಲಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಆದರೆ, ನಮಗೆ ಇನ್ನೂ ಯಾವುದೇ ಅಧಿಕೃತ ಆದೇಶ ಕೈ ಸೇರಿಲ್ಲ. ಹೀಗಾಗಿ ಹೆಚ್ಚುವರಿ ಅರ್ಜಿ ಸಲ್ಲಿಕೆಯಾದಲ್ಲಿ ನಾವು ಲಾಟರಿ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದೇವೆ.
•ಬಿ.ಕೆ.ನಂದನೂರು, ಡಿಡಿಪಿಐ