Advertisement

ಶ್ರದ್ಧಾ -ಭಕ್ತಿಯ ಶಕ್ತಿ ದೇವತೆ ಆರಾಧನೆ

04:50 PM Oct 09, 2019 | |

ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ ನಾಡಹಬ್ಬ ದಸರಾ ನಿಮಿತ್ತ ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬಹುತೇಕ ಮಠ ಮಂದಿರಗಳಲ್ಲಿ ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಸೇವೆ ನೆರವೇರಿಸಲಾಯಿತು.

Advertisement

ಸಾಕಷ್ಟು ಮಠಗಳಲ್ಲಿ ನವರಾತ್ರಿ ನಿಮಿತ್ತ ಒಂಬತ್ತು ದಿನಗಳವರೆಗೆ ದೇವಿ ಪುರಾಣ ಪ್ರವಚನ ಕಾರ್ಯಕ್ರಮ ನಡೆದವು. ಕೆಲ ದೇವಸ್ಥಾನಗಳಲ್ಲಿ ದೇವಿ ಸಹಸ್ರ ನಾಮಾವಳಿ ಪಾರಾಯಣ ಜರುಗಿತು.

ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಗರಸಭೆಯಿಂದ ನಾಡದೇವಿ ಭುವನೇಶ್ವರಿ ಮೂರ್ತಿ ಮೆರವಣಿಗೆ ಜರುಗಿತು. ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

ನಗರ ಶಾಸಕ ಡಾ| ಶಿವರಾಜ ಪಾಟೀಲ, ನಗರಸಭೆ ಪೌರಾಯುಕ್ತ ರಮೇಶ ನಾಯಕ, ನಗರಸಭೆ ಸದಸ್ಯರು, ಅಧಿ ಕಾರಿಗಳು ಸೇರಿ ಇತರರು ಪಾಲ್ಗೊಂಡಿದ್ದರು.

ನಗರಸಭೆಯಿಂದ ಶುರುವಾದ ಮೆರವಣಿಗೆ ಪ್ರಮುಖ ಬೀದಿಗಳಾದ ಏಕಮಿನಾರ್‌, ಕಾಟೆ ದರ್ವಾಜ್‌, ತೀನ್‌ ಕಂದಿಲ್‌, ಕಿರಾಣ ಬಜಾರ, ಸದರ ಬಜಾರ, ಸ್ವಾಮಿ ವಿವೇಕಾನಂದ ವೃತ್ತ, ಹನುಮಾನ ಟಾಕೀಸ್‌ ಮತ್ತು ಎಲ್‌ವಿಡಿ ಕಾಲೇಜು ರಸ್ತೆ ಮೂಲಕ ಮಾಣಿಕಪ್ರಭು ದೇವಸ್ಥಾನ ಬಳಿಯ ಬನ್ನಿ ಮಂಟಪಕ್ಕೆ ಬಂದು ತಲುಪಿತು.

Advertisement

ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಹಿಳೆಯರ ಡೊಳ್ಳು ಕುಣಿತ, ಕೋಲಾಟ, ತಮಟೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆ ಮೆರಗು ಹೆಚ್ಚಿಸಿದವು. ನೂರಾರು ಮುತ್ತೈದೆಯರು ಪೂರ್ಣ ಕುಂಭ, ಕಳಸ ಹೊತ್ತು ಪಾಲ್ಗೊಂಡಿದ್ದರು. ಸಂಜೆ ವೇಳೆ ದೇವಿ ಸ್ವರೂಪವಾದ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಬನ್ನಿ ಮುಡಿಯಲಾಯಿತು. ಬಳಿಕ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭ ಕೊರಲಾಯಿತು.

ಆಯುಧ ಪೂಜೆ: ಆಯುಧ ಪೂಜೆ ದಿನವಾದ ಸೋಮವಾರ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಶಸ್ತ್ರಾಸ್ತ್ರಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ದಂಪತಿ ಸಮೇತರಾಗಿ ಆಗಮಿಸಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ಸಾರಿಗೆ ಸಂಸ್ಥೆ ಘಟಕಗಳಲ್ಲಿ
ಬಸ್‌ಗಳಿಗೂ ಪೂಜೆ ಸಲ್ಲಿಸಲಾಗಿತ್ತು. ಹೂವಿನ ಅಲಂಕಾರ, ಬಾಳೆ ಗೊನೆ ಕಟ್ಟಿ ಬಸ್‌ಗಳಿಗೆ ಪೂಜೆ ನೆರವೇರಿಸಲಾಯಿತು.

ಶಕ್ತಿನಗರದ ಆರ್‌ಟಿಪಿಎಸ್‌ನಲ್ಲೂ ಆಯುಧ ಪೂಜೆ ನಿಮಿತ್ತ ಎಲ್ಲ ಘಟಕಗಳ ಯಂತ್ರಗಳಿಗೆ ಪೂಜೆ ನೆರವೇರಿಸಲಾಯಿತು. ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next