ಸಿದ್ಧಯ್ಯಸ್ವಾಮಿ ಕುಕುನೂರು
ರಾಯಚೂರು: ಮುಂಗಾರಿನಲ್ಲಿ ಬಿತ್ತನೆ ಮಾಡಿ ವರುಣನ ಬರುವಿಕೆಗೆ ಕಾದು ಸುಸ್ತಾದ ರೈತರು ಕೊನೆಗೆ ಮೊಳಕೆ ಬಂದ ಬೆಳೆಯನ್ನೆಲ್ಲ ನಾಶ ಮಾಡಿದ್ದಾರೆ.
ಒಂದೆರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಹಿಂಗಾರು ಮಳೆಯಾದರೂ ಕೈ
ಹಿಡಿಯುವುದೇ ಎಂಬ ಆಶಾಭಾವದಲ್ಲಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ ಶೇ.39ರಷ್ಟು
ಮಳೆ ಕೊರತೆ ಕಾಡುತ್ತಿದೆ. ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡದಿದ್ದರೂ ಮಧ್ಯಂತರದಲ್ಲಿ ಸುರಿದ ಒಂದೆರಡು ಮಳೆ ನಂಬಿ ರೈತರು ಸಾವಿರಾರು ರೂ. ಖರ್ಚು ಮಾಡಿ ತೊಗರಿ, ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಜಿಲ್ಲೆಯಲ್ಲಿ ಶೇ.70ಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಕ್ರಮೇಣ ಬೆಳೆಗೆ ಅಗತ್ಯದಷ್ಟು ಮಳೆ ಬಾರದೆ ಇಳುವರಿ
ಕುಂಠಿತಗೊಂಡಿದೆ. ಬೆಳೆಗಿಂತ ಕಳೆಯೇ ಹೆಚ್ಚಾಗಿ ಬಂದ ಕಾರಣ ರೈತರು ವಿಧಿ ಇಲ್ಲದೇ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.
ತಾಲೂಕಿನ ಗೋನಾಲ ಗ್ರಾಮದಲ್ಲಿ ಶೇ.50ರಷ್ಟು ರೈತರು ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಸೂರ್ಯಕಾಂತಿ ನಾಶಪಡಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲೂ ರೈತರು ಇದೇ ದಾರಿ ಹಿಡಿದಿದ್ದಾರೆ. ಕೆಲವೆಡೆ ಮಾತ್ರ ತುಸು ಮಳೆಯಾಗಿದ್ದು, ಏನಾದರೂ ಆಗಲಿ ಎಂದು ವರುಣ ದೇವನ ಮೇಲೆ ಭಾರ ಹಾಕಿ ಕಾಯುತ್ತಿದ್ದಾರೆ.
ಭಾರಿ ನಷ್ಟದಿಂದ ಪಾರು: ರೈತರು ಎಕರೆಗೆ ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಈವರೆಗೆ ಏನಿಲ್ಲವೆಂದರೂ 10-15 ಸಾವಿರ ರೂ. ಖರ್ಚಾಗಿದೆ. ಇನ್ನು ಮುಂದೆ ಬೆಳೆಗೆ ಕೀಟ ಬಾಧೆ ಎದುರಾಗುವುದರಿಂದ ಕನಿಷ್ಟ ಮೂರು ಬಾರಿ ಕ್ರಿಮಿನಾಶಕ ಸಿಂಪಡಿಸಬೇಕು. ಕಾಲಕಾಲಕ್ಕೆ ಕಳೆ ಕೀಳುವುದು ಸೇರಿದಂತೆ ನಾನಾ ಖರ್ಚುಗಳು ಎದುರಾಗಲಿದೆ. ಆದರೆ, ಇಷ್ಟೆಲ್ಲ ಮಾಡಿದ ರೈತರಿಗೆ ಎಕರೆಗೆ ಏನಿಲ್ಲವೆಂದರೂ 3-4 ಕ್ವಿಂಟಲ್ ಇಳುವರಿ ಬರಲೇಬೇಕು. ಆದರೆ, ಆರಂಭದಲ್ಲೇ ಬೆಳವಣಿಗೆ ಕುಂಠಿತವಾಗಿದ್ದು, 1-2 ಕ್ವಿಂಟಲ್ ಬಂದರೆ ಹೆಚ್ಚು ಎನ್ನುವಂತಿದೆ. ಮುಂದೆ ಎದುರಾಗುವ ಭಾರೀ ನಷ್ಟದಿಂದ ಪಾರಾಗಲು ರೈತರು ಈಗಲೇ ಬೆಳೆ ನಾಶ ಮಾಡಿ ಸಣ್ಣ ನಷ್ಟ ಎದುರಿಸುತ್ತಿದ್ದಾರೆ. ಟಿಎಲ್‌ಬಿಸಿ, ಎನ್‌ಆರ್‌ಬಿಸಿ ಕೊನೆ ಭಾಗದ ರೈತರದ್ದೂ ಇದೇ ಸಮಸ್ಯೆಯಾಗಿದೆ.
ಹಿಂಗಾರು ಮೇಲೆ ವಿಶ್ವಾಸ: ಎಲ್ಲೆಡೆ ಭಾರೀ ಮಳೆಯಾಗಿ ಜಿಲ್ಲೆಯ ಎರಡು ಜೀವನದಿಗಳಾದ ಕೃಷ್ಣಾ, ತುಂಗಭದ್ರಾಕ್ಕೆ ಪ್ರವಾಹ ಬಂದರೂ ಜಿಲ್ಲೆಯಲ್ಲಿ ಮಾತ್ರ ಮಳೆ ಸುರಿಯಲಿಲ್ಲ. ಬರದ ಛಾಯೆಗೆ ಜಿಲ್ಲೆಯ ರೈತಾಪಿ ಜನ ಕಂಗಾಲಾಗಿದ್ದರು. ಆದರೆ, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದು, ಹಿಂಗಾರು ಬಿತ್ತನೆ ಮಾಡುವವರಿಗೆ ತುಸು ನಿರಾಳಭಾವ ಮೂಡಿಸಿದೆ. ಜೋಳ, ಕಡಲೆ, ಮೆಕ್ಕೆಜೋಳ ಸೇರಿ ಇನ್ನಿತರ ಬೆಳೆ ಬೆಳೆಯುವ
ಚಿಂತನೆಯಲ್ಲಿದ್ದಾರೆ.
ಬೆಳೆ ಉಳಿಸಿಕೊಳ್ಳುವ ಸವಾಲು: ಇಷ್ಟು ದಿನ ಮಳೆಯಿಲ್ಲದೇ ಸಮಸ್ಯೆ ಎದುರಿಸಿದ ರೈತರಿಗೆ ಈಗ
ಮತ್ತೂಂದು ರೀತಿಯ ಸಮಸ್ಯೆ ಕಾಡುತ್ತಿದೆ. ಕೆಲವೆಡೆ ಉತ್ತಮ ಇಳುವರಿ ಬಂದಿದ್ದು, ಈಗ ಅಗತ್ಯಕ್ಕಿಂತ ಜಾಸ್ತಿ ಮಳೆ ಸುರಿದರೂ ಬೆಳೆಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಜಾಗೃತಿ ಮೂಡಿಸುತ್ತಿರುವ ಕೃಷಿ ಇಲಾಖೆ, ಜಮೀನುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
ಕಾಲಕಾಲಕ್ಕೆ ರೋಗ ನಿರೋಧಕ ಸಿಂಪರಣೆ ಮಾಡುವಂತೆ ಹೇಳುತ್ತಿದೆ. ಇಲ್ಲವಾದರೆ ತೊಗರಿ
ಹೂ ಕೆಂಪಾಗಿ ಉದುರಿ ಹೋದರೆ, ಹತ್ತಿಗೆ ಗುಲಾಬಿ ಕಾಯಿಕೊರಕ ಬಾ ಧಿಸುವ ಸಾಧ್ಯತೆಗಳಿವೆ.