Advertisement

ಕೋವಿಡ್ ಪ್ರಯೋಗಾಲಯ ಶೀಘ್ರ ಆರಂಭಿಸಿ

12:35 PM May 23, 2020 | Naveen |

ರಾಯಚೂರು: ಇಷ್ಟು ದಿನ ಹಸಿರು ವಲಯದಲ್ಲಿದ್ದ ರಾಯಚೂರು ಜಿಲ್ಲೆಯಲ್ಲೂ ಕೋವಿಡ್ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿದ್ದು, ವೈರಸ್‌ ಪತ್ತೆ ಹಚ್ಚುವ ಪ್ರಯೋಗಾಲಯ ಶೀಘ್ರ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ರಿಮ್ಸ್‌ನಲ್ಲಿ ಕೋವಿಡ್‌ -19 ಪ್ರಯೋಗಾಲಯ ನಿರ್ಮಾಣ ಬೇಗನೇ ಮುಗಿಸಬೇಕು. ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದ ವಲಸಿಗರಿಂದ ಪಾಸಿಟಿವ್‌ ಪ್ರಕರಣಗಳು ಬರುತ್ತಿವೆ. ರೈಲು, ಬಸ್‌ ಸಂಚಾರ ಕೂಡ ಶುರುವಾಗಲಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಶಂಕಿತರ ಮಾದರಿ ಬೆಂಗಳೂರು, ಬಳ್ಳಾರಿ ಅಥವ ಕಲಬುರಗಿಗೆ ಕಳುಹಿಸುವ ಬದಲು ಜಿಲ್ಲೆಯಲ್ಲಿಯೇ ಪರೀಕ್ಷೆ ನಡೆಸಿ ಬೇಗ ಫಲಿತಾಂಶ ಪಡೆಯಬಹುದು ಎಂದರು.

ಗ್ರಾಮೀಣ ಶಾಸಕ ದದ್ದಲ್‌ ಬಸನಗೌಡ ಮಾತನಾಡಿ, ಕ್ವಾರಂಟೈನ್‌ಗಳಲ್ಲಿ 14 ದಿನಕ್ಕಿಂತ ಹೆಚ್ಚು ಉಳಿಸಿಕೊಳ್ಳಲಾಗುತ್ತಿದೆ. ಪರೀಕ್ಷಾ ವರದಿ ಬೇಗ ಪಡೆದು ನೆಗೆಟಿವ್‌ ಎಂದಿದ್ದಲ್ಲಿ ಅವರನ್ನು ಬೇಗನೆ ಬಿಡುಗಡೆ ಮಾಡಬೇಕು. ಕ್ವಾರಂಟೈನ್‌ಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂಬ ದೂರುಗಳು ಹೆಚ್ಚಾಗಿದೆ. ಒಂದೇ ಕೇಂದ್ರದಲ್ಲಿ 200ಕ್ಕೂ ಅಧಿಕ ಜನರನ್ನು ಉಳಿಸಿದ್ದು, ಸೋಂಕು ಹರಡುವ ಸಾಧ್ಯತೆ ಇದೆ ಎಂದರು.

ರಿಮ್ಸ್‌ ನಿರ್ದೇಶಕ ಡಾ. ಬಸವರಾಜ ಪೀರಾಪುರ ಮಾತನಾಡಿ, ಕೋವಿಡ್‌-19 ಪ್ರಯೋಗಾಲಯ ಸಿದ್ಧಗೊಂಡಿದ್ದು, ಐಸಿಎಂಆರ್‌ನಿಂದ ಅನುಮತಿ ಸಿಗಬೇಕಿದೆ. ಅಲ್ಲದೇ ಆರ್‌ಟಿಸಿಪಿಆರ್‌ ಯಂತ್ರ ಬಂದಲ್ಲಿ ಪರೀಕ್ಷೆ ಆರಂಭಿಸಬಹುದು. ಆ ಯಂತ್ರ ಇದ್ದರೆ ಪಾಸಿಟಿವ್‌ ಪ್ರಕರಣ ಪತ್ತೆ ಹಚ್ಚಬಹುದು. ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದಿಂದ ಮಾರ್ಗ ಸೂಚನೆಗಳು ಬಂದಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌ ಪ್ರತಿಕ್ರಿಯಿಸಿ, ಈಗಾಗಲೇ ಆರ್‌ಟಿಸಿಪಿಆರ್‌ ಯಂತ್ರ ಬೆಂಗಳೂರು ತಲುಪಿದ್ದು, ನಾಳೆಯೊಳಗೆ ಬರಲಿದೆ. ಪ್ರಯೋಗಾಲಯ ಶುರುವಾದರೆ ದಿನಕ್ಕೆ 800 ಮಾದರಿ ಪರೀಕ್ಷಿಸಬಹುದು. 15 ದಿನಗಳಲ್ಲಿ 10 ಸಾವಿರ ವಲಸಿಗರು ಬಂದಿದ್ದಾರೆ. ಬಹುತೇಕರನ್ನು ಸರ್ಕಾರಿ ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಕೆಲವರು ಖಾಸಗಿ ಲಾಡ್ಜ್ ಗಳಲ್ಲಿ ಉಳಿದಿದ್ದಾರೆ. ಮಹಾರಾಷ್ಟ್ರದಿಂದ ಬರಲು ಅನುಮತಿ ನೀಡುತ್ತಿಲ್ಲ. ಕ್ವಾರಂಟೈನ್‌ ಕೇಂದ್ರಗಳಲ್ಲಿ ಮೂರು ದಿನಕ್ಕೊಮ್ಮೆ ರಾಸಾಯನಿಕ ಸಿಂಪಡಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಮಾತನಾಡಿ, ಈವರೆಗೆ 6,297 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯ 3,94,739 ಮನೆಗಳ ಪೈಕಿ 3,91,721 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಅದರಲ್ಲಿ 60 ವರ್ಷ ಮೇಲ್ಪಟ್ಟ 1,92,136 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. 35,050 ಗರ್ಭಿಣಿಯರು, ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವ 3,873 ಜನರನ್ನು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಪಾಸಿಟಿವ್‌ ಪ್ರಕರಣ ಹೆಚ್ಚಾಗಿರುವ ಪ್ರದೇಶಗಳಿಂದ ಬರುವ ವಲಸಿಗರನ್ನು ಪ್ರತ್ಯೇಕ ಕ್ವಾರಂಟೈನ್‌ಗಳಲ್ಲಿ ಉಳಿಸಬೇಕು. ಆಗ ವೈರಸ್‌ ಹರಡದಂತೆ ತಡೆಯಲು ಸಾಧ್ಯ ಎಂದರು. ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಹೊರರಾಜ್ಯದಿಂದ ಬಂದವರನ್ನಷ್ಟೇ ಸಾಂಸ್ಥಿಕ ಕ್ವಾರಂಟೈನ್‌ ಮಾಡದೇ ಹೊರ ಜಿಲ್ಲೆಯಿಂದ ಬಂದವರನ್ನು ಮಾಡಬೇಕು. ಒಂದು ನಿರ್ದಿಷ್ಟ ಪ್ರದೇಶದಲ್ಲಿದ್ದವರಲ್ಲಿ ಮಾತ್ರ ಸೋಂಕು ಕಂಡು ಬರುತ್ತಿದೆ. ಅದು ಹರಡದಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸದಿದ್ದವರಿಗೆ ದಂಡ ವಿಧಿ ಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸವದಿ, ಜಿಲ್ಲಾಡಳಿತ ಇನ್ನೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಿ. ಬೈಕ್‌ ನಲ್ಲಿ ಇಬ್ಬರು ಓಡಾಡುವಂತಿಲ್ಲ. ಜನರು ಕೂಡ ಸಹಕಾರ ನೀಡಬೇಕಿದೆ. ಶೇ.45 ಪಾಸಿಟಿವ್‌ ಪ್ರಕರಣಗಳು ಗುಣಮುಖವಾಗಿವೆ. ಈ ನಿಟ್ಟಿನಲ್ಲಿ ಜಿಲ್ಲೆ ಕೂಡ ಮುಂದಿನ ದಿನಗಳಲ್ಲಿ ವೈರಸ್‌ ವಿರುದ್ಧ ಹೋರಾಡಬೇಕಿದೆ ಎಂದರು. ಈ ವೇಳೆ ಎಂಎಲ್‌ಸಿ ಎನ್‌.ಎಸ್‌. ಬೋಸರಾಜ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ , ಸಿಇಒ ಲಕ್ಷ್ಮೀ ಕಾಂತ ರೆಡ್ಡಿ, ಎಸ್‌ಪಿ ಡಾ.ಸಿ.ಬಿ. ವೇದಮೂರ್ತಿ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next