ರಾಯಚೂರು: ಜಿಲ್ಲೆಯಲ್ಲಿ ಶನಿವಾರ 40 ಕೋವಿಡ್ ಪಾಸಿಟಿವ್ ಬಂದು ದಿಗ್ಭ್ರಾಂತಿ ಮೂಡಿಸಿದ್ದರೆ ರವಿವಾರ ಯಾವುದೇ ಪಾಸಿಟಿವ್ ಪ್ರಕರಣ ಬಾರದಿರುವುದು ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತೆ ಮಾಡಿತು.
ಮುಂಬಯಿನಿಂದ ವಲಸೆ ಬಂದವರಲ್ಲಿ ಪಾಸಿಟಿವ್ ಗಳ ಸಂಖ್ಯೆ ಮಿತಿ ಮೀರುತ್ತಿದೆ. ಕೇವಲ ಐದು ದಿನದಲ್ಲೇ 66 ಪ್ರಕರಣಗಳು ದೃಢಪಟ್ಟಿದ್ದವು. ಏರುಗತಿಯಲ್ಲಿ ಸಾಗಿದ್ದ ಈ ಸಂಖ್ಯೆ ರವಿವಾರ ಎಷ್ಟು ಬರಬಹುದು ಎಂಬ ಕುತೂಹಲ ಮೂಡಿಸಿತ್ತು. ಆದರೆ, ಯಾವುದೇ ಪಾಸಿಟಿವ್ ಬಾರದೆ ತುಸು ನೆಮ್ಮದಿ ತರಿಸಿತು.
ಜಿಲ್ಲೆಯಿಂದ ರವಿವಾರ 1,413 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 973 ವರದಿಗಳು ನೆಗೆಟಿವ್ ಬಂದಿವೆ. 3,135 ವರದಿ ಬರಬೇಕಿದೆ. ಫೀವರ್ ಕ್ಲಿನಿಕ್‌ಗಳಲ್ಲಿಂದು 1,398 ಜನರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ 10,498 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಅವುಗಳಲ್ಲಿ 5,878 ವರದಿಗಳು ನೆಗೆಟಿವ್ ಆಗಿವೆ. ರೋಗ ಲಕ್ಷಣಗಳಿಲ್ಲದ ಕಾರಣ 6 ವರದಿಗಳು ತಿರಸ್ಕೃತಗೊಂಡಿವೆ. ವೈರಸ್ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರ ಸಂಜೆ ನಾಲ್ವರು ಮುಂಬಯಿನಿಂದ ಬಂದಿದ್ದು, ಕ್ವಾರಂಟೈನ್ ಮಾಡಲಾಗಿದೆ. ರವಿವಾರ ಬೆಳಗ್ಗೆ ಮುಂಬಯಿನಿಂದ ಎರಡು ಬಸ್‌ಗಳಲ್ಲಿ ವಲಸಿಗರು ಬಂದಿದ್ದು, ಅವರಿಗೆಲ್ಲ ಜಿಲ್ಲಾಡಳಿತ ರೆಡ್ ಕ್ರಾಸ್ ಸಂಸ್ಥೆ ಹಾಗೂ ಎನ್‌ಜಿಒಗಳ ಸಹಯೋಗದಲ್ಲಿ ಊಟ ಉಪಹಾರ ಕಲ್ಪಿಸಲಾಗಿದೆ. ನಗರದ ಜಹೀರಾಬಾದ್‌ಗೆ ಬಳ್ಳಾರಿಯಿಂದ ಮಹಿಳೆಯೊಬ್ಬರು ಬಂದಿದ್ದು, ಅಕ್ಕಪಕ್ಕದ ಜನ ಆತಂಕಗೊಂಡಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ ಪ್ರಸಂಗ ನಡೆದಿದೆ.