Advertisement

ರಾಯಚೂರಲ್ಲಿ ಮತ್ತೆ ಕೋವಿಡ್ ಘರ್ಜನೆ

11:37 AM Jul 05, 2020 | Naveen |

ರಾಯಚೂರು: ಜಿಲ್ಲೆಯಲ್ಲಿ ಮತ್ತೆ ಮಹಾಮಾರಿ ಕೋವಿಡ್ ವೈರಸ್‌ ಅಬ್ಬರಿಸುತ್ತಿದ್ದು, ಶನಿವಾರ ಒಂದೇ ದಿನ 41 ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಸದ್ಯಕ್ಕಂತೂ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸದಂತಾಗಿದೆ.

Advertisement

ಮಾನ್ವಿ ತಾಲೂಕಿನಲ್ಲಿ 17, ಸಿಂಧನೂರು ತಾಲೂಕಿನಲ್ಲಿ 16 ಪ್ರಕರಣಗಳು ದಾಖಲಾಗಿವೆ. ರಾಯಚೂರು ತಾಲೂಕಿನಲ್ಲಿ 6, ಲಿಂಗಸುಗೂರು ತಾಲೂಕಿನಲ್ಲಿ 2 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 559ಕ್ಕೆ ಏರಿದೆ. ಗುಣಮುಖರಾದ 18 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈವರೆಗೆ ಒಟ್ಟು 422 ಜನ ಗುಣಮುಖರಾಗಿದ್ದಾರೆ. ಇನ್ನೂ 131 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯ ದೇವದುರ್ಗ ತಾಲೂಕಿನಿಂದ 91, ಲಿಂಗಸುಗೂರು 48, ಮಾನ್ವಿ 89, ಸಿಂಧನೂರು 47 ಮತ್ತು ರಾಯಚೂರು ತಾಲೂಕಿನಿಂದ 51 ಸೇರಿದಂತೆ ಒಟ್ಟು 326 ಜನರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಿಂದೆ ಕಳುಹಿಸಿದ ವರದಿಗಳಲ್ಲಿ 100 ನೆಗೆಟಿವ್‌ ಆಗಿವೆ. ಇನ್ನೂ 1742 ಮಾದರಿಗಳ ಫಲಿತಾಂಶ ಬರಬೇಕಿದೆ. ಫಿವರ್‌ ಕ್ಲಿನಿಕ್‌ಗಳಲ್ಲಿಂದು 566 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಸಿಂಧನೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಮುಂಬಯಿ ವಲಸಿಗರ ಸಂಪರ್ಕ ಕಡಿಮೆ ಇರುವ ಕಾರಣ ಅಲ್ಲಿ ಇಷ್ಟು ದಿನಗಳ ಕಾಲ ಸಮಸ್ಯೆ ಇರಲಿಲ್ಲ. ಆದರೆ, ಬಳ್ಳಾರಿಯ ಜಿಂದಾಲ್‌, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೋಮ್‌ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸುತ್ತಿರುವ ಸಮಸ್ಯೆ ಒಂದೆಡೆಯಾದರೆ, ಸೋಂಕಿತರ ಸಂಪರ್ಕ ಪತ್ತೆ ಹಚ್ಚುವ ಸವಾಲು ಮತ್ತೊಂದೆಡೆ ಎದುರಾಗಿದೆ. ಸೋಂಕಿ ತರು ಎಲ್ಲಿ ಬೇಕಾದಲ್ಲಿ ಓಡಾಡುತ್ತಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ಶುರುವಾಗಿದೆ. ಜಿಪಂ ಕಚೇರಿಯಲ್ಲಿ ಕೊರೊನಾ ಸೋಂಕಿತ ಓಡಾಡಿದ್ದಾನೆ ಎಂಬ ಮಾಹಿತಿ ಮೇರೆಗೆ ಸಿಇಒ ಕಚೇರಿಯಾದಿಯಾಗಿ ಎಲ್ಲವನ್ನು ಸ್ಯಾನಿಟೈಸೇಶನ್‌ ಮಾಡಲಾಗಿದೆ.

ಮೆಡಿಕಲ್‌ ವರ್ತಕರೊಬ್ಬರಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದು, ಅವರ ಸಂಪರ್ಕ ಪತ್ತೆ ಕಾರ್ಯ ನಡೆದಿದೆ. ಕೃಷಿ ವಿವಿಯಲ್ಲೂ ಇಂಥದ್ದೇ ಸಮಸ್ಯೆ ಎದುರಾಗಿದೆ. ಅಲ್ಲಿಯೂ ಕೆಲ ಕಾಲ ಕೆಲವೊಂದು ವಿಭಾಗಗಳನ್ನು ಶೀಲ್‌ ಡೌನ್‌ ಮಾಡಲಾಗಿತ್ತು. ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಓಡಾಡುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಪರ್ಕ ಪತ್ತೆ ಹಚ್ಚುವುದು ಹೊಸ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

Advertisement

ಆರ್‌ಟಿಪಿಎಸ್‌ಗೂ ವಿಸ್ತರಣೆ
ಇನ್ನು ಆರ್‌ಟಿಪಿಎಸ್‌ನ ಸಿಬ್ಬಂದಿಯೊಬ್ಬರ ಪುತ್ರನಿಗೆ ಕೋವಿಡ್  ಪಾಸಿಟಿವ್‌ ದೃಢಪಟ್ಟಿದೆ. ಅನಾರೋಗ್ಯದ ನಿಮಿತ್ತ ಶಕ್ತಿನಗರದ ಕೆಪಿಸಿ ಆಸ್ಪತ್ರೆಗೆ ಪರೀಕ್ಷೆಗೆಂದು ತೆರಳಿದ್ದರು. ರೋಗದ ಲಕ್ಷಣಗಳು ಬಂದಿರುವ ಕಾರಣ ಕೋವಿಡ್‌ 19 ಪರೀಕ್ಷೆ  ಮಾಡಿದ್ದು, ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಇದರಿಂದ ಆಸ್ಪತ್ರೆಯನ್ನು ಸೀಲ್‌ ಡೌನ್‌ ಮಾಡಿ ಸ್ಯಾನಿಟೈಸೇಶನ್‌ ಮಾಡಲಾಗಿದೆ. ಅವರು ವಾಸಿಸುತ್ತಿದ್ದ ವಸತಿ ಗೃಹವನ್ನು ಸೀಲ್‌ ಡೌನ್‌ ಮಾಡಿ ಕುಟುಂಬ ಸದಸ್ಯರನ್ನೆಲ್ಲ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next