Advertisement

ರಾಯಚೂರಲ್ಲಿ ಕೋವಿಡ್‌ ಆರ್ಭಟ

05:04 PM Jul 03, 2020 | Naveen |

ರಾಯಚೂರು: ಇಷ್ಟು ದಿನ ಅಂತಾರಾಜ್ಯ ವಲಸಿಗರಿಂದ ಹೆಚ್ಚಾಗಿ ಹರಡುತ್ತಿದ್ದ ಕೋವಿಡ್‌-19 ಈಗ ಅಂತರ ಜಿಲ್ಲೆಗಳ ವಲಸಿಗರಿಂದ ಹರಡಲು ಶುರುವಾಗಿದೆ. ನಿಯಂತ್ರಣಕ್ಕೆ ಜಿಲ್ಲಾಡಳಿತ ಏನೆಲ್ಲ ಪ್ರಯತ್ನ ನಡೆಸಿದರೂ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗದಿರುವುದು ಸೋಂಕು ಹರಡುವಿಕೆಗೆ ಕಾರಣವಾಗುತ್ತಿದೆ.

Advertisement

ಅಂತರ ಜಿಲ್ಲೆಗಳಿಂದ ಬಂದವರನ್ನು ಕ್ವಾರಂಟೈನ್‌ ಮಾಡದಿರುವುದೇ ಸೋಂಕು ಹರಡಲು ಕಾರಣವಾಗುತ್ತಿದೆ ಎನ್ನುತ್ತಿದೆ ಜಿಲ್ಲಾಡಳಿತ. ಬೆಂಗಳೂರು, ಬಳ್ಳಾರಿ, ಕಲಬುರಗಿ, ಯಾದಗಿರಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಜನ ಬರುತ್ತಿದ್ದು, ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಅಂಥವರಲ್ಲಿ ಯಾರಿಗಾದರೂ ಕೋವಿಡ್ ಪಾಸಿಟಿವ್‌ ಇದ್ದಲ್ಲಿ ಅದು ಇತರರಿಗೂ ಹರಡುತ್ತಿದೆ. ಸಿಂಧನೂರಿನಲ್ಲಿ ಬಳ್ಳಾರಿ ಜಿಲ್ಲೆಯಿಂದ ಬಂದವರಿಂದ ವೈರಸ್‌ ಹರಡಿದರೆ, ಸಿರವಾರದಲ್ಲಿ ನಡೆದ ಮದುವೆಯಲ್ಲಿ ಯಾದಗಿರಿ ಜಿಲ್ಲೆಯ ವ್ಯಕ್ತಿ ಪಾಲ್ಗೊಂಡಿದ್ದರು. ಅವರು ಮೃತಪಟ್ಟಿದ್ದು, ಅವರಿಗೆ ಕೋವಿಡ್ ಪಾಸಿಟಿವ್‌ ಇರುವುದು ದೃಢವಾಗಿದೆ.

ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯಗಳಿಂದ ಬಂದವರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗುತ್ತಿದೆ. ಆದರೆ, ಕ್ವಾರಂಟೈನ್‌ಗೆ ಒಳಪಟ್ಟವರು ಹೊರಗೆ ಓಡಾಡುವ ಮೂಲಕ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದ ವೈರಸ್‌ ಸಮುದಾಯಕ್ಕೆ ಹರಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಂಟೈನ್ಮೆಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟು ದಿನ ಕೋವಿಡ್ ಮುಕ್ತವಾಗಿದ್ದ ಸಿಂಧನೂರು ತಾಲೂಕಿನಲ್ಲೂ ಈಗ ಕೋವಿಡ್ ಅಟ್ಟಹಾಸ ಶುರುವಾಗಿದೆ. ಗುರುವಾರ ಬ್ಯಾಂಕ್‌ ಆಫ್‌ ಬರೋಡಾ ಸಿಬ್ಬಂದಿಗೂ ಕೋವಿಡ್ ಇರುವುದು ಖಚಿತಗೊಂಡಿದೆ. ಇದರಿಂದ ಅಲ್ಲಿನ ಸಿಬ್ಬಂದಿ ಹಾಗೂ ವ್ಯವಹರಿಸಿದ ಜನರಿಗೂ ಈಗ ಭೀತಿ ಶುರುವಾಗಿದೆ.

ಐನೂರರ ಗಡಿ ದಾಟಿತು: ನೆರೆ ರಾಜ್ಯಗಳು, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೋವಿಡ್ ಅಟ್ಟಹಾಸವಿದ್ದರೆ ಜಿಲ್ಲೆ ಮಾತ್ರ ಸೇಫ್‌ ಝೋನ್‌ನಲ್ಲಿತ್ತು. ಆದರೆ, ಮುಂಬಯಿ ವಲಸಿಗರ ಆಗಮನದಿಂದ ಶುರುವಾದ ಪಾಸಿಟಿವ್‌ ಪ್ರಕರಣಗಳು ಸಾಂಸ್ಥಿಕ ಕ್ವಾರಂಟೈನ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಈಗ ಸಮುದಾಯದ ಜನರಲ್ಲೂ ಕಾಣಿಸಿಕೊಂಡಿದ್ದು, ಶರವೇಗದಲ್ಲಿ 500ರ ಗಡಿ ದಾಟಿದೆ. ಗುರುವಾರ ಮತ್ತೆ 11 ಜನರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 511ಕ್ಕೆ ಏರಿದೆ. ಆದರೆ, 404 ಜನ ಗುಣಮುಖರಾಗಿದ್ದು, ಬಿಡುಗಡೆ ಮಾಡಿದ್ದು, ಇನ್ನೂ 107 ಸಕ್ರಿಯ ಪ್ರಕರಣಗಳಿವೆ.

ದಂಡಕ್ಕೂ ಮಣಿಯದ ಜನ: ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕಾದರೆ ಜನರ ಸ್ಪಂದನೆ ಕೂಡ ಮುಖ್ಯ. ಆದರೆ, ಜನ ಯಾವುದೇ ಭೀತಿಯಿಲ್ಲದೇ ರಾಜಾರೋಷವಾಗಿ ಮಾಸ್ಕ್ಧ ರಿಸದೇ ಓಡಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಆಶಾಗಳು ಸಾಕಷ್ಟು ಜಾಗೃತಿ ಮೂಡಿಸಿದರೂ ಜನ ಮಾತ್ರ ಸ್ಪಂದಿಸುತ್ತಿಲ್ಲ. ಇದೇ ಕಾರಣಕ್ಕೆ ಮಾಸ್ಕ್ ಇಲ್ಲದೇ ಬೈಕ್‌ ಓಡಿಸುತ್ತಿರುವವರನ್ನು ತಡೆದು ದಂಡ ಹಾಕಿದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಪಾದಾಚಾರಿಗಳಿಗೂ ದಂಡ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಹೋಮ್‌ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಹೊರಗೆ ಓಡಾಡಿದ 49 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಬೇರೆ ಜಿಲ್ಲೆಗಳಿಂದ ಬಂದವರನ್ನು ಕ್ವಾರಂಟೈನ್‌ ಮಾಡಬಾರದು ಎಂದು ಸೂಚಿಸಲಾಗಿದೆ. ಹಾಗೆ ಬಂದವರಲ್ಲೂ ಪಾಸಿಟಿವ್‌ ಪತ್ತೆಯಾಗುತ್ತಿದ್ದು, ವೈರಸ್‌ ಹರಡಲು ಕಾರಣವಾಗಿದೆ. ಹೋಮ್‌ ಕ್ವಾರಂಟೈನ್‌ಗೆ ಒಳಪಟ್ಟವರನ್ನು ಹೊರಗೆ ಹೋಗದಂತೆ ಮನೆಯವರೇ ತಡೆಯಬೇಕು. ಮನೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು. ಪ್ರತ್ಯೇಕ ಬಾತ್‌ ರೂಮ್‌ ಹಾಗೂ ಶೌಚಗೃಹಗಳನ್ನು ಬಳಸುವುದು ಸೂಕ್ತ. ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದ್ದು, ಆತಂಕ ಪಡುವ ಅಗತ್ಯವಿಲ್ಲ.
ಆರ್‌.ವೆಂಕಟೇಶಕುಮಾರ,
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next