ರಾಯಚೂರು: ಚಕ್ರವ್ಯೂಹದೊಳಗೆ ಸಿಲುಕಿ ಅಭಿಮನ್ಯು ಹೋರಾಡಿದ ರೀತಿ ಸುತ್ತಲೂ ಕೋವಿಡ್ ಪಾಸಿಟಿವ್ ಇರುವ ಜಿಲ್ಲೆಗಳ ಮಧ್ಯೆ ರಾಯಚೂರು ಮಾರಣಾಂತಿಕ ಕಾಯಿಲೆ ವಿರುದ್ಧ ಸೆಣಸಾಡುತ್ತಿದೆ. ಈವರೆಗೂ ಹಸಿರು ವಲಯದಲ್ಲಿರುವ ಜಿಲ್ಲೆಗೆ ಯಾವ ರೂಪದಲ್ಲಿ ಕೋವಿಡ್ ಆವರಿಸುವುದೋ ಎಂಬ ಆತಂಕ ಶುರುವಾಗಿದೆ. ಆಂಧ್ರ, ತೆಲಂಗಾಣ ರಾಯಚೂರು ಜಿಲ್ಲೆಗೆ ಹೊಂದಿಕೊಂಡಿದ್ದು, ಕರ್ನೂಲ್, ಮಕ್ತಾಲ್, ಗದ್ವಾಲ್ ಸೇರಿದಂತೆ ವಿವಿಧ ಊರುಗಳಲ್ಲಿ ಕೋವಿಡ್ ನ ಅಟ್ಟಹಾಸವಿದೆ.
ಅಕ್ಕಪಕ್ಕದ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿಯಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆ ಮಾತ್ರ ಇನ್ನೂ ಸೇಫ್ ಜೋನ್‌ನಲ್ಲಿ ಉಳಿದಿರುವುದು ನಿಜಕ್ಕೂ ಪವಾಡ ಸದೃಶ್ಯ ಎನ್ನುವಂತಾಗಿದೆ. ಕಂಪ್ಲಿ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಆ ವ್ಯಕ್ತಿ ಜತೆ ಜಿಲ್ಲೆಯ ಮೂವರು ಸಂಚರಿಸಿದ್ದಾರೆ. ಅವರಿಗೂ ಸೋಂಕು ತಲುಲಿದೆಯಾ ಎಂಬ ಶಂಕೆ ಮೂಡಿತ್ತು. ಬುಧವಾರ ಆ ಮೂವರ ವರದಿ ನೆಗೆಟಿವ್ ಎಂದು ಬಂದಿದ್ದು, ಜಿಲ್ಲೆಗೆ ಎದುರಾದ ಗಂಡಾಂತರ ತಪ್ಪಿದೆ.
ವಲಸಿಗರೇ ಸವಾಲು: ಈಗ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿರುವುದೇ ವಲಸಿಗರು. ಅದರಲ್ಲೂ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿರುವ ಮಹಾರಾಷ್ಟ್ರದ ಮುಂಬೈ, ಪುಣೆಯಿಂದಲೂ ಜನ ಬರುತ್ತಿದ್ದಾರೆ. ಆಂಧ್ರ, ತೆಲಂಗಾಣ, ಗುಜರಾತ, ಮಧ್ಯಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಜನ ಬರುತ್ತಿದ್ದಾರೆ. ಯಾರೇ ಬಂದರೂ ಅವರನ್ನು ಕೂಡಲೇ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಕಾಲ್ನಡಿಗೆ ಮೂಲಕವೂ ಜನ ಬರುತ್ತಿದ್ದು, ಅವರನ್ನು ಪತ್ತೆ ಹಚ್ಚುವ ಸವಾಲಾಗಿದೆ. ಹಾಗೆ ಬಂದವರಲ್ಲಿ ಯಾರಿಗಾದರೂ ಸೋಂಕು ತಗುಲಿದ್ದಲ್ಲಿ ಹಸಿರು ವಲಯದಲ್ಲಿರುವ ರಾಯಚೂರಿಗೂ ಕೋವಿಡ್ ಆತಂಕ ಎದುರಾಗಬಹುದು.
ರಾಯಚೂರು- ಕೊಪ್ಪಳ ಸುರಕ್ಷಿತ
ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಈಗ ಎರಡು ಮಾತ್ರ ಸೇಫ್ ಜೋನ್‌ನಲ್ಲಿ ಉಳಿದಿವೆ. ರಾಜ್ಯದಲ್ಲೇ ಮೊದಲ ಕೋವಿಡ್ ಪ್ರಕರಣ ಕಲಬುರಗಿಯಲ್ಲಿ ಪತ್ತೆಯಾಗಿತ್ತು. ಅಲ್ಲಿ ಶುರುವಾದ ಸಾವಿನ ಸರಮಾಲೆ ಇಂದಿಗೂ ನಿಂತಿಲ್ಲ. ಬುಧವಾರ ಕೂಡ ಅಲ್ಲಿ ಕೋವಿಡ್ ನಿಂದ ಸಾವು ಸಂಭವಿಸಿದೆ. ಇನ್ನೂ ಹಸಿರು ವಲಯದಲ್ಲಿದ್ದ ಬೀದರ ಕೂಡ ಈಗ ರೆಡ್ ಜೋನ್ ಸೇರಿದೆ. ಅಲ್ಲಿಯೂ ಒಂದು ಸಾವು ಸಂಭವಿಸಿದ್ದು, ಪಾಸಿಟಿವ್ ಪ್ರಕರಣಗಳ ಹೆಚ್ಚಾಗಿದೆ. ಇಷ್ಟು ದಿನ ಸೇಫ್ ಆಗಿದ್ದ ಯಾದಗಿರಿ ಜಿಲ್ಲೆಗೆ ಅಹ್ಮದಬಾದ್‌ನಿಂದ ಬಂದ ಇಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಈಗ ರಾಯಚೂರು, ಕೊಪ್ಪಳ ಮಾತ್ರ ಉಳಿದಿದೆ.
ಹೊರ ರಾಜ್ಯದಿಂದ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಹಾಗೆ ಬಂದವರನ್ನು ಕಡ್ಡಾಯವಾಗಿ 14 ದಿನ ಸರ್ಕಾರಿ ಕ್ವಾರಂಟೈನ್‌ನಲ್ಲಿಯೇ ಉಳಿಸಿ ಬಳಿಕ ಮನೆಗೆ ಕಳುಹಿಸಲಾಗುತ್ತಿದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ಮಾದರಿ ಸಂಗ್ರಹ ಘಟಕ ಸ್ಥಾಪಿಸಲಾಗಿದೆ. ಎಲ್ಲ ವಸತಿ ನಿಲಯಗಳು, ಪ್ರಮುಖ ಶಾಲೆಗಳನ್ನು ಕ್ವಾರಂಟೈನ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಹೊಸಬರು ಕಂಡುಬಂದಲ್ಲಿ ಸಾರ್ವಜನಿಕರು ಗಮನಕ್ಕೆ ತರಬೇಕು.
ಆರ್. ವೆಂಕಟೇಶಕುಮಾರ,
ಜಿಲ್ಲಾಧಿಕಾರಿ