ರಾಯಚೂರು: ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದರೂ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ನಾಗರಿಕ ರಾಷ್ಟ್ರೀಯ ನೋಂದಣಿ ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ ಸಂಘಟನೆ ಕಾರ್ಯಕರ್ತರು ಶನಿವಾರ ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು 15 ಜನ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಭಗತ್‌ಸಿಂಗ್ ವೃತ್ತದಲ್ಲಿ ಸಂಘಟನೆ ನೇತೃತ್ವದಲ್ಲಿ ನೂರಾರು ಜನ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ರಸ್ತೆಗಿಳಿದು ಹೋರಾಟ ಮಾಡಿದರು. ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಕೆಲಕಾಲ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಿಲ್ಲೆಯಲ್ಲಿ ಇಂದು ಕೂಡ ನಿಷೇಧಾಜ್ಞೆ ಜಾರಿಯಲ್ಲಿದ್ದು, ಹೋರಾಟ ಮೊಟಕು ಗೊಳಿಸುವಂತೆ ಸೂಚಿಸಿದರು. ಆದರೆ, ಪ್ರತಿಭಟನಾಕಾರರು ಮಾತ್ರ ಪೊಲೀಸರ ಮಾತಿಗೆ ಮನ್ನಣೆ ನೀಡದೆ ಹೋರಾಟ ಮುಂದುವರಿಸಿದರು. ಈ ವೇಳೆ ಬಲವಂತವಾಗಿ ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.
ಡಿ.19ರಿಂದ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪ್ರತಿಭಟನೆ, ಧರಣಿ ನಡೆಸುವುದು, ಗುಂಪು ಚರ್ಚೆ ನಡೆಸುವುದನ್ನು ನಿಷೇಧಿಸಲಾಗಿದೆ. ಆದರೆ, ಪೊಲೀಸರ ಅನುಮತಿ ಪಡೆಯದೆ ಹೋರಾಟ ನಡೆಸಿದ್ದಕ್ಕಾಗಿ ಪ್ರತಿಭಟನಾಕಾರರನ್ನು ಬಂಧಿಸಲಾಯಿತು. 144ಕಲಂ ನಿಷೇಧಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಸದರ್ ಬಜಾರ್ ಠಾಣೆ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತದಿಂದ ವ್ಯಾನ್ ಹತ್ತಿಸಿದರು. 15 ಜನರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 71ರ ಪ್ರಕಾರ ಪ್ರಕರಣ ದಾಖಲಿಸಿಕೊಂಡರು.
ಇದಕ್ಕೂ ಮುನ್ನ ಮಾತನಾಡಿದ ಸಂಘಟನೆ ಮುಖಂಡರು, ದೇಶದಲ್ಲಿ ಒಂದೆಡೆ ಆರ್ಥಿಕ ಬಿಕ್ಕಟ್ಟು ಎದುರಾಗಿ ಯುವಕರಿಗೆ ಕೆಲಸ ಇಲ್ಲದ ಸ್ಥಿತಿ ಎದುರಾಗಿದೆ. ಇಂಥ ವೇಳೆ ಅನಗತ್ಯ ಮಸೂದೆಗಳನ್ನು ಜಾರಿಗೊಳಿಸಿ ದೇಶದಲ್ಲಿ ಅಶಾಂತಿ ನೆಲೆಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಡಜನರು ಜೀವನ ನಡೆಸುವುದೇ ಕಷ್ಟವಾಗುತ್ತಿದೆ ಎಂದು ದೂರಿದರು.
ಇಂಥ ವೇಳೆ ದೇಶದ ನಾಗರಿಕರು ನೆಮ್ಮದಿಯಿಂದ ಬಾಳಲು ಆಗದಂತ ಕಾನೂನು ಜಾರಿ ಮಾಡುತ್ತಿರುವುದು ಖಂಡನೀಯ. ಇದರಿಂದ ಜನ ಆತಂಕದಲ್ಲೇ ದಿನದೂಡಬೇಕಿದ್ದು, ಕೂಡಲೇ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಮುಖಂಡರಾದ ಚಂದ್ರಗಿರೀಶ, ಶರಣಪ್ಪ ಉದ್ಬಾಳ, ಎನ್.ಎಸ್.ವೀರೇಶ, ಚನ್ನಬಸವ ಜಾನೇಕಲ್, ಮಹೇಶ, ಪ್ರಮೋದ ಕುಮಾರ, ಮಲ್ಲನಗೌಡ, ಆಂಜನೇಯ, ಸಲೀಂ, ಮಹ್ಮದ್ ಇಕ್ಬಾಲ್, ನಿಸಾರ್ ಅಹ್ಮದ್, ಈಶ್ವರ, ಗಣೇಶ, ಚೋಟುಬಾಯಿ ಸೇರಿದಂತೆ ಅನೇಕರಿದ್ದರು.