Advertisement

ಬಸ್‌ ನಿಲ್ದಾಣ ಮೇಲಂತಸ್ತು ನಿರುಪಯುಕ್ತ

03:04 PM Dec 05, 2019 | Naveen |

ರಾಯಚೂರು: ನಗರದ ಕೇಂದ್ರ ಬಸ್‌ ನಿಲ್ದಾಣ ಲೋಕಾರ್ಪಣೆಗೊಂಡು ವರ್ಷಗಳೇ ಕಳೆದರೂ ಮೇಲಂತಸ್ತಿನ ಕಟ್ಟಡ ಮಾತ್ರ ಅರೆಬರೆಯಾಗಿದ್ದು, ಯಾವುದಕ್ಕೂ ಬಳಕೆಯಾಗದೆ ನಿರುಪಯುಕ್ತವಾಗಿದೆ. ಇದರಿಂದ ನಿಗಮಕ್ಕೆ ಬರುವ ಆದಾಯಕ್ಕೂ ಕೊಕ್ಕೆ ಬಿದ್ದಂತಾಗಿದೆ.

Advertisement

ಡಾ| ನಂಜುಂಡಪ್ಪ ವರದಿಯನ್ವಯ ವಿಶೇಷ ಅಭಿವೃದ್ಧಿ ಯೋಜನೆಯಡಿ 4 ಎಕರೆ ಸ್ಥಳದಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಬಸ್‌ ನಿಲ್ದಾಣ ನಿರ್ಮಿಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲೆ ಬಹುದೊಡ್ಡ ಹೈಟೆಕ್‌ ಬಸ್‌ ನಿಲ್ದಾಣವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಕಟ್ಟಡ ನಿರ್ಮಾಣಕ್ಕೆ 4.85 ಕೋಟಿ, ಕಾಂಕ್ರಿಟ್‌ ಕೆಲಸಕ್ಕೆ 1.05 ಲಕ್ಷ, ಮತ್ತು ಮುನ್ನೋಟ ಅಲಂಕಾರ ಹಾಗೂ ಉಳಿದ ಕೆಲಸಕ್ಕೆ 1.90 ಕೋಟಿ ರೂ.ಖರ್ಚು ಮಾಡಲಾಗಿತ್ತು. ಇದೇ ವೇಳೆ ಮೇಲಂತಸ್ತು ನಿರ್ಮಿಸಲಾಯಿತು. ಆದರೂ ಕೇವಲ ಕಾಲಂ ಹಾಕಿ ಮೇಲ್ಛಾವಣಿ ನಿರ್ಮಿಸಿ ಕೈಬಿಡಲಾಗಿತ್ತು. ಆದರೆ, ಅಲ್ಲಿಂದ ಈವರೆಗೆ ಅದಕ್ಕೆ ಸಂಬಂಧಿ ಸಿದ ಯಾವ ಕೆಲಸಗಳು ಕೂಡ ನಡೆದಿಲ್ಲ. ಅತ್ತ ವಾಣಿಜ್ಯಿಕ ಉದ್ದೇಶಗಳಿಗೂ ಬಳಸದೆ, ಇತ್ತ ನಿಗಮದ ಕೆಲಸ ಕಾರ್ಯಗಳಿಗೂ ಬಳಸದೆ ಖಾಲಿ ಬಿಡಲಾಗಿದೆ.

ಮಳಿಗೆಗಳಿಗೆ ಬೇಡಿಕೆ: ನಗರದ ಹೃದಯ ಭಾಗದಲ್ಲಿರುವ ಈ ನಿಲ್ದಾಣದ ಆಸುಪಾಸು ಮಳಿಗೆಗಳಿಗೆ ತುಂಬಾ ಬೇಡಿಕೆಯಿದೆ. ಅಲ್ಲದೇ, ಕಚೇರಿ ಕಾರ್ಯಗಳಿಗೋ, ಇನ್ನಿತರ ಉದ್ದೇಶಗಳಿಗೋ ಬಳಕೆಗೂ ಅವಕಾಶವಿದೆ. ಕಟ್ಟಡ ನಿರ್ಮಿಸಿದಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು ಅದು ಸಂಪೂರ್ಣ ನಿರುಪಯುಕ್ತವಾಗಿದೆ. ಮೇಲೆ ತೆರಳುವ ಎರಡು ಬದಿಯ ಗೇಟ್‌ಗಳನ್ನು ಮುಚ್ಚಿದ್ದು, ಸಂಪೂರ್ಣ ಖಾಲಿ ಬಿಡಲಾಗಿದೆ.

ಅರ್ಧ ಕೆಲಸ ಮುಕ್ತಾಯ: ಮೇಲಂತಸ್ತಿನ ಅರ್ಧ ಕೆಲಸ ಈಗಾಗಲೇ ಪೂರ್ಣಗೊಂಡಂತಾಗಿದೆ. ಕಾಲಂಗಳನ್ನು ನಿರ್ಮಿಸಿ ಮೇಲ್ಛಾವಣಿ ಹಾಕಲಾಗಿದೆ. ಈಗೇನಿದ್ದರೂ ಗೋಡೆ ನಿರ್ಮಿಸಿ ಸುಣ್ಣ ಬಣ್ಣ ಬಳಿಯುವುದಷ್ಟೇ ಕೆಲಸ. ಆದರೂ ಇಷ್ಟು ವರ್ಷವಾದರೂ ಆ ಕೆಲಸ ಆಗದಿರುವುದು ವಿಪರ್ಯಾಸ.

ಗದ್ದಲದಲ್ಲೇ ಗ್ರಂಥಾಲಯ: ನಗರ ಕೇಂದ್ರ ಬಸ್‌ ನಿಲ್ದಾಣದ ಕೆಳಭಾಗದ ಒಂದು ಕೋಣೆಯಲ್ಲಿ ಗ್ರಂಥಾಲಯ ನಿರ್ಮಿಸಲಾಗಿದೆ. ಆದರೆ, ಅದು ಸಂಪೂರ್ಣ ಸದ್ದುಗದ್ದಲದಿಂದ ಕೂಡಿದ್ದು, ಓದುಗರು ತದೇಕಚಿತ್ತದಿಂದ ಓದುವುದೇ ಕಷ್ಟ. ಅಲ್ಲದೇ, ಸ್ಥಳಾಭಾವ ಕಾಡುತ್ತಿದ್ದು, ಬಹುತೇಕರು ನಿಂತಲ್ಲೇ ಪತ್ರಿಕೆ ಓದಿದರೆ, ಅನೇಕರು ಹಿಂದಿರುಗುವುದು ಸಾಮಾನ್ಯವಾಗಿದೆ. ಕನಿಷ್ಠ ಪಕ್ಷ ಗ್ರಂಥಾಲಯವನ್ನಾದರೂ ಮೇಲ್ಭಾಗಕ್ಕೆ ಸ್ಥಳಾಂತರಿಸಿದಲ್ಲಿ ತುಸು ಅನುಕೂಲವಾಗಬಹುದು ಎನ್ನುತ್ತಾರೆ ಓದುಗರು.

Advertisement

ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ
ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ನಿಗಮದಿಂದ ಮೂರು ಬಾರಿ ಟೆಂಡರ್‌ ಕರೆಯಲಾಗಿದೆ. 75 ಲಕ್ಷ ರೂ. ಮೌಲ್ಯದ ಕೆಲಸಕ್ಕೆ ಟೆಂಡರ್‌ ಕರೆದರೆ ಯಾವುದೇ ಸಂಸ್ಥೆಗಳು ಪಾಲೊಳ್ಳುತ್ತಿಲ್ಲ. ಈಗ ಸಾರಿಗೆ ಸಿಬ್ಬಂದಿಗಾಗಿ ಎರಡು ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಟೆಂಡರ್‌ ಕರೆದಿದ್ದು, ಅದು ಮುಗಿಯುವ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಕೆಲಸ ಶುರುವಾಗಬಹುದು ಎನ್ನುತ್ತಾರೆ ನಿಗಮದ ಅಧಿಕಾರಿಗಳು.

ಕೇಂದ್ರ ಬಸ್‌ ನಿಲ್ದಾಣ ಮೇಲ್ಭಾಗ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಆದರೆ, ಅದಕ್ಕೆ ಕಾರಣ ಏನು ಎಂಬ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಸಂಬಂಧಿಸಿದ ವರದಿ ನೋಡಿದ ಮೇಲೆ ಕ್ರಮ ಕೈಗೊಳ್ಳಲಾಗುವುದು.
ವೆಂಕಟೇಶ,
ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ,
ರಾಯಚೂರು

Advertisement

Udayavani is now on Telegram. Click here to join our channel and stay updated with the latest news.

Next