Advertisement

ದೊರೆಗೆ ಸಮಸ್ಯೆಗಳ ಸ್ವಾಗತ

11:11 AM Jun 26, 2019 | Naveen |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ಜಿಲ್ಲೆಯ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕು, ಜ್ವಲಂತ ಸಮಸ್ಯೆಗಳಿಗೆ ಕಾಯಕಲ್ಪ ನೀಡಬೇಕು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು ಎಂಬ ಮಹೋನ್ನತ ಉದ್ದೇಶದೊಂದಿಗೆ ನಾಡಿನ ದೊರೆ ಜಿಲ್ಲೆಯ ಕರೇಗುಡ್ಡದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ನಿರೀಕ್ಷೆಯಂತೆ ಅವರನ್ನು ಎಡೆದೊರೆ ನಾಡು ಸಮಸ್ಯೆಗಳ ಸರಮಾಲೆಯಿಂದಲೇ ಸ್ವಾಗತಿಸುತ್ತಿರುವುದು ವಿಪರ್ಯಾಸ.

Advertisement

ಹೆಸರೇ ಹೇಳುವಂತೆ ಕೃಷ್ಣೆ, ತುಂಗಭದ್ರೆ ಎಂಬ ಎರಡು ತೊರೆಗಳ ನಡುವಿನ ನಾಡಿಗೆ ಬರ ಎಂಬುದು ಬೆಂಬಿಡದೇ ಕಾಡುತ್ತಿದೆ. ಟೇಲೆಂಡ್‌ ಭಾಗದ ಜನರು ಪ್ರತಿ ವರ್ಷ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ. ತುಂಗಭದ್ರಾ ಜಲಾಶಯ ಭರ್ತಿಯಾದರೂ ಕಳೆದ ವರ್ಷ ಎರಡನೇ ಬೆಳೆಗೆ ನೀರು ಸಿಗದ ಸ್ಥಿತಿ ಎದುರಾಗಿದೆ. ಅದರ ಜತೆಗೆ ಅನೇಕ ನೀರಾವರಿ ಯೋಜನೆಗಳು ಕಾಯಕಲ್ಪ ಕಾಣದೆ ನನೆಗುದಿಗೆ ಬಿದ್ದಿದ್ದು, ರೈತರ ಬದುಕು ವರ್ಷದಿಂದ ವರ್ಷಕ್ಕೆ ವಿಷಮ ಸ್ಥಿತಿಗೆ ಹೋಗುತ್ತಿರುವುದು ವಾಸ್ತವ. ಸಾಗು ಮಾಡಿ ಬದುಕು ಸಾಗಿಸುತ್ತಿರುವ ಅದೆಷ್ಟೋ ಜನರಿಗೆ ಇಂದಿಗೂ ಹಕ್ಕು ಪತ್ರಗಳು ಸಿಕ್ಕಿಲ್ಲ. ಕನಿಷ್ಟ ಸೌಲಭ್ಯ ಸಿಗದೇ ಅದೆಷ್ಟೋ ಹಳ್ಳಿಗಳು ಇಂದಿಗೂ ಕೂಪಗಳಾಗಿವೆಯೇ ಉಳಿದಿವೆ.

ಕೃಷಿ ವಲಯವೇ ದುರ್ಬಲ: ಭತ್ತದ ನಾಡು ಎಂಬ ಖ್ಯಾತಿ ಪಡೆದ ಜಿಲ್ಲೆಯಲ್ಲಿ ಕೃಷಿ ವಲಯವೇ ದುರ್ಬಲವಾಗಿರುವುದು ಸತ್ಯ. ಕಳೆದೆರಡು ವರ್ಷಗಳ ಸತತ ಬರ ರೈತರ ದಿಕ್ಕೆಡಿಸಿದೆ. ಜಿಲ್ಲೆಯಲ್ಲಿ 3.2 ಲಕ್ಷ ಹೆಕ್ಟೇರ್‌ಗೂ ಅಧಿಕ ಕೃಷಿ ಪ್ರದೇಶವಿದ್ದು, ಅದರಲ್ಲಿ ಅರ್ಧದಷ್ಟು ನೀರಾವರಿ ಆಶ್ರಿತವಾಗಿದೆ. ಆದರೆ, ನೀರಾವರಿ ಹೆಸರಿಗೆ ಮಾತ್ರ ಎನ್ನುವಂತಾಗಿದ್ದು, ಟೇಲೆಂಡ್‌ ಭಾಗಕ್ಕೆ ನೀರು ತಲುಪದೆ ರೈತರು ಸಂಪೂರ್ಣ ನಷ್ಟಕ್ಕೆ ತುತ್ತಾಗಿದ್ದಾರೆ. ಅದಕ್ಕೆ ನೀರಿನ ಸಮರ್ಪಕ ನಿರ್ವಹಣೆ ಕೊರತೆಯೇ ಪ್ರಮುಖ ಕಾರಣ ಎನ್ನುವುದು ಕೃಷಿ ತಜ್ಞರ ಅನಿಸಿಕೆ.

ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯ ಐವರು ಶಾಸಕರಿದ್ದರೂ ಕಳೆದ ಒಂದು ವರ್ಷದಲ್ಲಿ ನೀರಾವರಿ ವಲಯಕ್ಕೆ ಜಿಲ್ಲೆಗೆ ಹೇಳಿಕೊಳ್ಳುವಂಥ ಕೊಡುಗೆ ಸಿಕ್ಕಿಲ್ಲ. ಈಗ ಪುನಃ ನವಲಿ ಜಲಾಶಯ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಗೊಳಿಸಲು ಸೂಚಿಸಲಾಗಿದೆ ಎನ್ನುತ್ತಿದ್ದಾರೆ ಉಸ್ತುವಾರಿ ಸಚಿವರು. ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ವ್ಯಯಿಸುವ ದೃಢ ನಿಲುವು ತೋರುತ್ತಿಲ್ಲ. ತುಂಗಭದ್ರಾ ಹಾಗೂ ನಾರಾಯಣಪುರ ಜಲಾಶಯಗಳಿದ್ದರೂ ಜಿಲ್ಲೆಯ ಟಿಎಲ್ಬಿಸಿ, ಎನ್‌ಆರ್‌ಬಿಸಿ ಟೇಲೆಂಡ್‌ ರೈತರಿಗೆ ನೀರು ಸಿಗುತ್ತಿಲ್ಲ. ಕಳೆದ ವರ್ಷದ ಮಳೆಗಾಲದಲ್ಲಿ ಕೃಷ್ಣ, ತುಂಗಭದ್ರಾ ನದಿಗೆ 350ಕ್ಕೂ ಹೆಚ್ಚು ಟಿಎಂಸಿ ನೀರು ವ್ರಥಾ ಹರಿದು ಹೋಗಿದೆ ಎನ್ನುತ್ತಾರೆ ನೀರಾವರಿ ತಜ್ಞರು.

ನವಲಿ ಮತ್ತು ಕವಿತಾಳ ಬಳಿ ಸಮಾನಾಂತರ ಜಲಾಶಯ ಹಾಗೂ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದ್ದೇ ಆದಲ್ಲಿ, ಜಿಲ್ಲೆಯ ಲಕ್ಷಾಂತರ ಹೆಕ್ಟೇರ್‌ ಪ್ರದೇಶ ಹಸಿರಾಗಲಿದೆ. 5ಎ ಕಾಲುವೆ ವಿಸ್ತರಣೆ, ನನೆಗುದಿಗೆ ಬಿದ್ದ ಏತ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಸಿಗಬೇಕಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಕೆರೆಗಳ ಪುನಶ್ಚೇತನ ಮಾಡಿ ನೀರು ತುಂಬಿಸುವ ಕೆಲಸವೂ ಆಗಬೇಕಿದೆ.

Advertisement

ಅರೆಜೀವದಲ್ಲಿ ಒಪೆಕ್‌: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಒಪೆಕ್‌ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಸೂಕ್ತ ನಿರ್ವಹಣೆ ಇಲ್ಲದೇ ಅರೆಜೀವದಲ್ಲಿ ನರಳುತ್ತಿದೆ. ನಿರ್ವಹಣೆಯನ್ನು ರಿಮ್ಸ್‌ ಸುಪರ್ದಿಗೆ ನೀಡಿದ್ದು, ಅನುದಾನವಿಲ್ಲದೇ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕೋಟ್ಯಂತರ ರೂ. ವೆಚ್ಚದ ಯಂತ್ರೋಪಕರಣಗಳು ನಿರುಪಯುಕ್ತವಾಗುತ್ತಿವೆ. ಒಪೆಕ್‌ ಸ್ವಾಯತ್ತ ಸಂಸ್ಥೆಯನ್ನಾಗಿಸದ ಹೊರತು ಅದಕ್ಕೆ ಮರುಜೀವ ನೀಡಲು ಸಾಧ್ಯವಿಲ್ಲ.

ಕೈಗಾರಿಕೆ ಕ್ಷೇತ್ರ ಕಡೆಗಣನೆ: ಜಿಲ್ಲೆಯಲ್ಲಿ ಸೂಕ್ತ ಸ್ಥಳಾವಕಾಶ ಕಲ್ಪಿಸಿದರೆ ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಿಸಬಹುದು. ಇನ್ನು ಪ್ರಸ್ತುತಕ್ಕೆ ಜಿಲ್ಲೆಯಲ್ಲಿ ಹೊಸ ಕೈಗಾರಿಕೆ ಸ್ಥಾಪಿಸಲು ಸ್ಥಳವೇ ಸಿಗುತ್ತಿಲ್ಲ. ಹೀಗಾಗಿ 3,700 ಎಕರೆ ಭೂಮಿ ಸ್ವಾಧೀನಕ್ಕೆ ಅನುದಾನ ಮೀಸಲಿಡುವಂತೆ ವಾಣಿಜ್ಯೋದ್ಯಮ ಸಂಘ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಭತ್ತ, ಹತ್ತಿ ಹೆಚ್ಚಾಗಿ ಬೆಳೆಯುತ್ತಿದ್ದು, ಕಾಟನ್‌ ಅಥವಾ ರೈಸ್‌ ಪಾರ್ಕ್‌ ನೀಡಿದರೆ ಅನುಕೂಲವಾಗಲಿದೆ. ಇದರಿಂದ ಉದ್ಯೋಗಾವಕಾಶ ಹೆಚ್ಚಲಿದ್ದು, ವಹಿವಾಟು ಕೂಡ ಹೆಚ್ಚಲಿದೆ ಎಂಬುದು ವಾಣಿಜ್ಯೋದ್ಯಮಿಗಳ ಅನಿಸಿಕೆ.

ಸಾಲ ಮನ್ನಾದ ನಿರೀಕ್ಷೆ
ಸಿಎಂ ಎಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ವರ್ಷ ಕಳೆದರೂ ಇಂದಿಗೂ ರೈತರಿಗೆ ಆ ಭಾಗ್ಯ ದಕ್ಕಿಲ್ಲ. ಸಹಕಾರಿ ಬ್ಯಾಂಕ್‌ಗಳಲ್ಲಿ 52,038 ಫಲಾನುಭವಿಗಳಿದ್ದು, 254 ಕೋಟಿ ರೂ. ಸಾಲವಿದ್ದರೆ, ವಾಣಿಜ್ಯ ಬ್ಯಾಂಕ್‌ಗಳಲ್ಲಿ 1,23,462 ಫಲಾನುಭವಿಗಳಿದ್ದು, 1,600 ಕೋಟಿ ರೂ. ಸಾಲ ಬಾಕಿ ಇದೆ. ಸರ್ಕಾರ ಎರಡು ಲಕ್ಷ ರೂ. ಮಾತ್ರ ಸಾಲ ಮನ್ನಾ ಮಾಡಲು ನಿರ್ಧರಿಸಿತ್ತು. ಆದರೆ, ಲೀಡ್‌ ಬ್ಯಾಂಕ್‌ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಮಾರ್ಚ್‌ ಅಂತ್ಯದವರೆಗೆ ಜಿಲ್ಲೆಯ 49,282 ರೈತರ ಖಾತೆಗಳಿಗೆ 183.34 ಕೋಟಿ ರೂ. ಹಣ ಸಂದಾಯ ಮಾಡಲಾಗಿದೆ ಎನ್ನುತ್ತಾರೆ. ಆದರೆ, ರೈತರು ಮಾತ್ರ ನಮ್ಮ ಸಾಲ ಮನ್ನಾ ಆಗಿದೆ ಎಂದು ಹೇಳಿಕೊಂಡ ನಿದರ್ಶನಗಳೇ ಕಡಿಮೆಯಾಗಿದೆ. ಅದರ ಬದಲಿಗೆ ಬ್ಯಾಂಕ್‌ಗಳಿಂದ ಸಾಲ ಕಟ್ಟುವಂತೆ ನೋಟಿಸ್‌ಗಳು ಮಾತ್ರ ಹೋಗುತ್ತಿವೆ. ಬುಧವಾರ ಕರೇಗುಡ್ಡದಲ್ಲಿ ಸಿಎಂ ರೈತರಿಗೆ ಋಣಮುಕ್ತ ಪತ್ರ ನೀಡುವುದಾಗಿ ಹೇಳುತ್ತಿದ್ದು, ಎಷ್ಟು ಜನರ ಸಾಲ ಮನ್ನಾ ಆಗುವುದೋ ಕಾದು ನೋಡಬೇಕು.
ಋಣ ತೀರಿಸುವರೇ ಸಿಎಂ?
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹೊರತಾಗಿಸಿ ನೋಡುವುದಾದರೆ ರಾಯಚೂರು ಜಿಲ್ಲೆಯ ಮೇಲೆ ಅವರ ಋಣ ಹೆಚ್ಚಾಗಿದೆ ಎಂದೇ ಹೇಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೈ-ಕ ಭಾಗದಲ್ಲಿ ಜೆಡಿಎಸ್‌ ನಾಲ್ಕು ಸ್ಥಾನ ಗೆದ್ದರೆ ಅದರಲ್ಲಿ ಎರಡು ಈ ಜಿಲ್ಲೆಯಲ್ಲಿವೆ. ಅಲ್ಲದೇ, 2.3 ಲಕ್ಷಕ್ಕೂ ಅಧಿಕ ಮತಗಳು ಜೆಡಿಎಸ್‌ಗೆ ಚಲಾವಣೆಗೊಂಡಿವೆ. ಈ ನಿಟ್ಟಿನಲ್ಲಿ ಅವರು ಜಿಲ್ಲೆಯ ಋಣ ಸಂದಾಯ ಯಾವ ರೀತಿ ಮಾಡುವರೋ ಕಾದು ನೋಡಬೇಕು.
Advertisement

Udayavani is now on Telegram. Click here to join our channel and stay updated with the latest news.

Next