Advertisement

ಉಪ್ಪಾರ ಸಮಾಜ ಶಿಕ್ಷಣಕ್ಕೆ ಒತ್ತು ನೀಡಲಿ

02:34 PM May 12, 2019 | Naveen |

ರಾಯಚೂರು: ಉಪ್ಪಾರ ಸಮಾಜದವರು ಶಿಕ್ಷಣದಿಂದ ಕುಂಠಿತರಾಗಿದ್ದಾರೆ. ಸಮಾಜದಲ್ಲಿ ಬದುಕಲು ಶಿಕ್ಷಣ ಅಗತ್ಯವಾಗಿದೆ. ಸಮಾಜ ಬಾಂಧವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಬೆಳವಣಿಗೆ ಸಾಧ್ಯ ಎಂದು ಮಲದಕಲ್ ನಿಜಾನಂದ ಯೋಗಾಶ್ರಮದ ಸ್ವಾಮೀಜಿ ಗುರುಬಸವ ರಾಜಗುರುಗಳು ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸರಕಾರದಿಂದ 5ನೇ ವರ್ಷದ ಭಗೀರಥ ಜಯಂತಿ ಕಾರ್ಯಕ್ರಮ ಇದಾಗಿದೆ. ಜಯಂತಿಯಲ್ಲಿ ಸಮಾಜದ ಜನರು ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸದಿರುವುದು ತುಂಬಾ ಬೇಸರದ ಸಂಗತಿ. ಕರ್ನಾಟಕದಲ್ಲಿ ಉಪ್ಪಾರ ಸಮಾಜದ ಸುಮಾರು 45 ಲಕ್ಷ ಜನರಿದ್ದಾರೆ. ಆದರೆ ಉಪ್ಪಾರ ಸಮಾಜದಲ್ಲಿ ಸಂಘಟನೆ ಕೊರತೆಯಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಉಪ್ಪಾರ ಸಮಾಜದವರು ಸಂಘಟನೆಗೆ ಶ್ರಮ ವಹಿಸಬೇಕಿದೆ ಎಂದರು.

ಭಗೀರಥ ಮಹರ್ಷಿಯವರು 32 ವರ್ಷಗಳ ಕಾಲ ರಾಜ್ಯವನ್ನಾಳಿದ್ದಾರೆ ಎಂಬುದು ಉಲ್ಲೇಖಗಳಿದ್ದು ಭಗೀರಥನ ಅಚಾರ, ವಿಚಾರ ಹಾಗೂ ತತ್ವ ಅಜರಾಮರ. ನಮ್ಮನ್ನು ನಾವು ತಿಳಿದಾಗ ಮಾತ್ರ ಬೆಳವಣಿಗೆಯಾಗಲು ಸಾಧ್ಯ. ಕಾಯಕದಲ್ಲಿ ತೃಪ್ತಿ ಇರಬೇಕು ಅತ್ಮ ತೃಪ್ತಿಗಾಗಿ ಕೆಲಸ ಮಾಡಿದ ವ್ಯಕ್ತಿ ಮಹಾತ್ಮನಾಗುತ್ತಾನೆ ಎಂದು ಹೇಳಿದರು.

ಯಾವುದೇ ವ್ಯಕ್ತಿ ಜೀವನದಲ್ಲಿ ಅನುಮಾನ, ಅವಮಾನ ಸಹಿಸಿ ಕಾರ್ಯ ನಿರ್ವಹಿಸುತ್ತಾನೆ. ಅವನು ಒಂದಲ್ಲ ಒಂದು ದಿನ ಸನ್ಮಾನ ಮಾಡಿಸಿಕೊಳ್ಳುತ್ತಾನೆ. ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಭಗೀರಥನ ಹೆಸರು ಹಳ್ಳಿಗಳಲ್ಲಿ ಕೂಡ ವಿಸ್ತಾರವಾಗಲಿ. ನಿಮ್ಮ ಪ್ರಯತ್ನ ಭಗೀರಥನ ಪ್ರಯತ್ನವಾಗಲಿ ಎಂದು ನುಡಿದರು.

Advertisement

ಜಿಲ್ಲಾ ಉಪ್ಪಾರ ಸಮಾಜ ಜಿಲ್ಲಾಧ್ಯಕ್ಷ ವೆಂಕೋಬ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಗಟ್ಟು ಶ್ರೀನಿವಾಸ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಿ. ಸುರೇಖಾ, ಉಪ್ಪಾರ ಸಮಾಜದ ನವಯುವಕರ ಸಂಘದ ಜಿಲ್ಲಾಧ್ಯಕ್ಷ ಜೂಕುರು ಶ್ರೀನಿವಾಸ, ಕಾರ್ಯದರ್ಶಿ ರೊಟ್ಲ ಶ್ರೀನಿವಾಸ, ಉಪ್ಪಾರ ಸಮಾಜದ ಹಿರಿಯ ಮುಖಂಡರಾದ ಬಿ. ಗೀರಣ್ಣ, ಮಿರ್ಜಾಪುರ ಪಾಗುಂಟಪ್ಪ, ಎಲ್.ಬಿ ಅಗ್ನಿ ಸೇರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next