ರಾಯಚೂರು: ಕಳೆದೆರಡು ವರ್ಷಗಳ ಹಿಂದೆ ನಡೆದ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗೋಡೆಗಳಿಗೆಲ್ಲ ಜನಪದ ಶೈಲಿಯ ಚಿತ್ರ ಬಿಡಿಸುವ ಮೂಲಕ ನಗರ ಸೌಂದರ್ಯ ಹೆಚ್ಚಿಸಿದ್ದು ಇನ್ನೂ ಹಸಿರಾಗಿದೆ. ಈಗ ಯುವ ಬ್ರಿಗೇಡ್ ಸದಸ್ಯರು ಅಂಥದ್ದೇ ಪ್ರಯೋಗ ಮಾಡುವ ಮೂಲಕ ನಗರ ಕೇಂದ್ರ ಬಸ್ ನಿಲ್ದಾಣದ ಅಂದ ಹೆಚ್ಚಿಸುತ್ತಿದ್ದಾರೆ.
Advertisement
ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಜನ ಬರುತ್ತಿದ್ದರೂ ನಿರ್ವಹಣೆ ಮಾತ್ರ ಶೂನ್ಯವಾಗಿತ್ತು. ಸುತ್ತಲಿನ ಗೋಡೆಗಳಿಗೆಲ್ಲ ಮೂತ್ರ ವಿಸರ್ಜನೆ ಮಾಡಿದ್ದರಿಂದ ಜನ ಅತ್ತ ತಲೆ ಹಾಕುವುದು ಕಷ್ಟ ಎನ್ನುವಂಥ ವಾತಾವರಣವಿತ್ತು. ಇಲ್ಲಿನ ಅವ್ಯವಸ್ಥೆ ಬಗ್ಗೆ ಅನೇಕ ಸಂಘಟನೆಗಳು ಸಂಬಂಧಿ ಸಿದವರ ಗಮನ ಸೆಳೆದರೂ ಸ್ವಚ್ಛತೆಗೆ ಮಾತ್ರ ಒತ್ತು ನೀಡಿರಲಿಲ್ಲ. ಇದನ್ನು ಗಮನಿಸಿದ ಯುವ ಬ್ರಿಗೇಡ್ ಸದಸ್ಯರು ಆ ಗೋಡೆಗಳಿಗೆಲ್ಲ ಸುಂದರ ಕಲಾಕೃತಿಗಳನ್ನು ಬಿಡಿಸಿ ಅದರ ಅಂದ ಹೆಚ್ಚಿಸಿದ್ದಾರೆ.
Related Articles
Advertisement
ಸ್ವಯಂ ಸೇವೆ: ಯುವ ಬ್ರಿಗೆಡ್ ಈ ಕಾರ್ಯಕ್ಕೆ ಅನೇಕರು ಕೈ ಜೋಡಿಸುತ್ತಿದ್ದಾರೆ. ಕೆಲವರು ಸ್ವ ಇಚ್ಛೆಯಿಂದ ನೆರವು ನೀಡುತ್ತಾರೆ. ಮೆಡಿಕಲ್ ನರಸಿಂಹ ಎನ್ನುವವರು ಸ್ವತ್ಛತಾ ಕಾರ್ಯ ಕೈಗೊಳ್ಳುವ ಕಾರ್ಯಕರ್ತರಿಗೆ ಕೈ ಗ್ಲೌಸ್ ನೀಡಿದ್ದಾರೆ. ಇನ್ನು ಬಣ್ಣ ಬಿಡಿಸುವ ಕುರಿತು ತಿಳಿದ ಕೂಡಲೇ ಕಲಾವಿದರಾದ ನರಸಪ್ಪ, ಸೋಮಶೇಖರ ಭಂಡಾರಿ ಎನ್ನುವವರು ತಾವೇ ಮುಂದೆ ಬಂದು ಸುಂದರ ಕಲಾಕೃತಿ ಬಿಡಿಸಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವ ಬ್ರಿಗೇಡ್ ಸೈಟ್‌ನಲ್ಲಿ ಮಾಹಿತಿ ಹಾಕಿದ ಕೂಡಲೇ ನೆರವು ನೀಡಲು ಮುಂದೆ ಬಂದಿದ್ದಾರೆ.
ರೈಲು ನಿಲ್ದಾಣ ಸ್ಪೂರ್ತಿಮಹಾತ್ಮ ಗಾಂಧಿಧೀಜಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಆಯ್ದ ರೈಲು ನಿಲ್ದಾಣಗಳನ್ನು ವಿಶೇಷವಾಗಿ ಅಭಿವೃದ್ಧಿ ಮಾಡಲು ರೈಲ್ವೆ ಇಲಾಖೆ ಮುಂದಾಗಿತ್ತು. ಅದರಲ್ಲಿ ರಾಯಚೂರು ರೈಲು ನಿಲ್ದಾಣ ಕೂಡ ಸೇರಿದ್ದು, ಇಂದು ಆಕರ್ಷಣೀಯ ಕೇಂದ್ರವಾಗಿದೆ. ಇಂಥದ್ದೇ ವಾತಾವರಣ ಬಸ್ ನಿಲ್ದಾಣದಲ್ಲಿ ಯಾಕೆ ನಿರ್ಮಾಣಗೊಳ್ಳಬಾರದು ಎಂಬುದು ಯುವ ಬ್ರಿಗೇಡ್ ಕಾರ್ಯಕರ್ತರ ಮನ ಸೆಳಯಿತು. ಅದರ ಪ್ರತಿಫಲವೇ ಈ ಕಲರಫುಲ್ ವಾಲ್. ಯುವ ಬ್ರಿಗೇಡ್ ವತಿಯಿಂದ ಈ ಹಿಂದೆ ಕೂಡ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇವೆ. ಈಚೆಗೆ ನಗರದಲ್ಲಿ ಎರಡು ಕಲ್ಯಾಣಿಗಳ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದೆವು. ಸ್ವಚ್ಛತಾ ಕಾರ್ಯದ ಮುಂದುವರಿದ ಭಾಗವಾಗಿ ಈ ಚಿತ್ರಕಲೆ ಬಿಡಿಸಲಾಗುತ್ತಿದೆ. ನಮ್ಮ ತಂಡದಲ್ಲಿ 10 ಜನರಿದ್ದು, ಪ್ರತಿ ವಾರ ಒಂದೊಂದು ಕಡೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಕಳೆದ ಐದು ವಾರದಿಂದ ಇಲ್ಲಿಯೇ ಕೆಲಸ ನಡೆದಿದೆ. ಇದಕ್ಕೆ ಸಾಕಷ್ಟು ಜನ ಸ್ವಯಂ ಪ್ರೇರಣೆಯಿಂದ ನೆರವು ನೀಡುತ್ತಿದ್ದಾರೆ. ನಮ್ಮ ನಗರ ಸುಂದರವಾಗಿ ಕಾಣಬೇಕು ಎನ್ನುವುದಷ್ಟೇ ನಮ್ಮ ಅಭಿಲಾಷೆ.
ಲಕ್ಷ್ಮಣ ರೆಡ್ಡಿ,
ಯುವ ಬ್ರಿಗೇಡ್ ಸಂಚಾಲಕ