ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಉತ್ತಮ ಆರೋಗ್ಯ ಒದಗಿಸಬೇಕೆಂಬ ಉದ್ದೇಶದಿಂದ ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಜಿಲ್ಲಾಡಳಿತ, ಜಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಕೆಇಬಿ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಕಾರ್ಡ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕದಿಂದ ಅನುಕೂಲವಾಗಲಿದೆ. ಇದರ ಅಡಿಯಲ್ಲಿ ಪ್ರತಿಯೊಬ್ಬರ ಆರೋಗ್ಯಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ಆರೋಗ್ಯ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಆದಷ್ಟು ಶೀಘ್ರವಾಗಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಆಶಾ ಕಾರ್ಯಕರ್ತೆಯರು ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ವೇತನ ನೀಡಲಾಗುತ್ತಿದ್ದು, ರಾಜ್ಯದಲ್ಲೂ ಅವರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಪಂ ಅಧ್ಯಕ್ಷೆ ಆದಿಮನಿ ವೀರಕ್ಷ್ಮೀ, ಜಿಲ್ಲಾ ಧಿಕಾರಿ ಆರ್.ವೆಂಕಟೇಶ ಕುಮಾರ, ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿ ಕಾರಿ ದುರುಗೇಶ, ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ರಾಯಚೂರು ಆರೋಗ್ಯಾಧಿಕಾರಿ ಡಾ| ನಂದಿತಾ ಹಾಗೂ ವೈದ್ಯಾ ಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.