Advertisement

ಮಂತ್ರಾಲಯ ಮಹಿಮೆಗೆ ಭಕ್ತರು ಮಂತ್ರಮುಗ್ಧ

10:43 AM Aug 17, 2019 | Naveen |

ರಾಯಚೂರು: ಮಂತ್ರಾಲಯದಲ್ಲಿ ವರ್ಷವಿಡಿ ಭಕ್ತರ ಜಾತ್ರೆ ನಡೆಯುತ್ತದೆ. ಆದರೆ, ಆರಾಧನೆ ವೇಳೆ ಮಾತ್ರ ಭಕ್ತರು ರಾಯರ ಸನ್ನಿಧಿಗೆ ಬಂದು ರಾಯರಿಗೆ ತಮ್ಮನ್ನು ತಾವೇ ಸಮರ್ಪಿಸಿಕೊಂಡು ಬಿಡುವ ಮೂಲಕ ಧನ್ಯತಾಭಾವ ಹೊಂದುತ್ತಾರೆ.

Advertisement

ಶ್ರೀಮಠಕ್ಕೆ ಹರಿದು ಬರುವ ಭಕ್ತ ಸಾಗರ ವಿವಿಧ ಭಕ್ತಿ ಸಮರ್ಪಿಸುವ ಮೂಲಕ ರಾಯರ ಕೃಪೆಗೆ ಪಾತ್ರರಾಗುವುದು ವಿಶೇಷ. ಈ ಬಾರಿ ನಡೆಯುತ್ತಿರುವ ರಾಯರ 348ನೇ ಆರಾಧನಾ ಮಹೋತ್ಸವದಲ್ಲೂ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಹರಕೆ ತೀರಿಸಿದ್ದು ಕಂಡು ಬಂತು. ಎಷ್ಟೋ ಭಕ್ತರು ನೂರಾರು ಕಿಮೀ ಪಾದಯಾತ್ರೆ ಮೂಲಕ ರಾಯರ ದರ್ಶನಕ್ಕೆ ಆಗಮಿಸಿದ್ದು ವಿಶೇಷ. ಆಬಾಲವೃದ್ಧರಾದಿಯಾಗಿ ಬರಿಗಾಲಲ್ಲಿ ನಡದೇ ಬಂದ ಭಕ್ತಪಡೆ ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ದರ್ಶನ ಪಡೆಯಿತು.

ಇನ್ನೂ ಅನೇಕ ಭಕ್ತರು ಮಠದ ಪ್ರಾಂಗಣದಲ್ಲಿ ಉರುಳು ಸೇವೆ ನಡೆಸಿ ಹರಕೆ ತೀರಿಸಿದರು. ಹಲವರು ರಾಯರ ಮಂಟಪದ ಸುತ್ತಲೂ 11, 21, 101 ಪ್ರದಕ್ಷಿಣೆ ಹಾಕಿ ಭಕ್ತಿ ಸಮರ್ಪಿಸಿದರೆ, ಕೆಲವರು ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಪಾದಸೇವೆ ನೆರವೇರಿಸಿದರು.

ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ತಮಿಳುನಾಡಿನಿಂದ ಆಗಮಿಸಿದ ಭಜನೆ, ಕೋಲಾಟ ತಂಡಗಳು ಸೇವೆ ಸಲ್ಲಿಸಿದವು. ವಿವಿಧ ಭಜನಾ ಮಂಡಳಿಗಳು ಅವಿರತ ಭಜನೆ ಸೇವೆ ನೀಡಿದರೆ, ಮಹಿಳೆಯರು ಮಠದ ಪ್ರಾಂಗಣದಲ್ಲಿ ಕೋಲಾಟ ಆಡುವ ಮೂಲಕ ಭಕ್ತಿ ಮೆರೆದರು. ಇನ್ನೂ ಅದೆಷ್ಟೋ ಭಕ್ತರು ಆರಾಧನೆಗೆ ವಿವಿಧ ಸೇವೆಗಳನ್ನು ಸ್ವ ಪ್ರೇರಣೆಯಿಂದ ಮಾಡಿದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next