ರಾಯಚೂರು: ದುಗುಡ, ದುಮ್ಮಾನ, ಚಾಂಚಲ್ಯ ಮನದಿಂದ ಬಂದಿದ್ದ ಅಸಂಖ್ಯ ಭಕ್ತರು ರಾಯರ ಆರಾಧನಾ ವೈಭವ ಕಣ್ತುಂಬಿಕೊಂಡು ನಿರಾಳಭಾವದಿಂದ ಹಿಂದಿರುಗಿದ ದೃಶ್ಯ ರವಿವಾರ ಮಂತ್ರಾಲಯದಲ್ಲಿ ಕಂಡು ಬಂತು.
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಮೂರು ದಿನ ವಿಜೃಂಭಣೆಯಿಂದ ಜರುಗಿತು. ಈ ಸಂಭ್ರಮಕ್ಕೆ ಸಾಕ್ಷಿಯಾಗಲು ರಾಜ್ಯ ಮಾತ್ರವಲ್ಲದೇ ದೇಶ ವಿದೇಶದಿಂದಲೂ ಭಕ್ತರ ದಂಡೇ ಹರಿದು ಬಂದಿತ್ತು. ರಾಯರ ಸನ್ನಿಧಿಗೆ ಬಂದವರಿಗೆ ತುಂಬಿ ಹರಿಯುತ್ತಿದ್ದ ತುಂಗಭದ್ರೆ ಕಂಡಾಗ ಮನೋಲ್ಲಾಸ ಮತ್ತಷ್ಟು ಇಮ್ಮಡಿಗೊಂಡಿತ್ತು. ಮಠದಲ್ಲೇ ಮೂರು ದಿನ ಉಳಿದವರು ಅನೇಕಾರಾದರೆ, ಅನುಕೂಲವಾದಾಗ ಬಂದು ದರ್ಶನ ಪಡೆದವರು ಇನ್ನೂ ಅನೇಕರು.
ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು, ಸಾಮಾನ್ಯರು ಹೀಗೆ ಪ್ರತಿಯೊಬ್ಬರು ರಾಯರ ದರ್ಶನ ಪಡೆದು ಪುನೀತರಾದರು. ಮಧ್ಯಾರಾಧನೆಗೆ ಬಂದಿದ್ದ ನಟರಾದ ಜಗ್ಗೇಶ, ಕೋಮಲ್ ನಮಗೆ ಇಲ್ಲಿಗೆ ಬಂದರೆ ಆಗುವ ಖುಷಿ ಅಂತಿಂಥದ್ದಲ್ಲ. ನಿಜಾರ್ಥದಲ್ಲಿ ಇದು ತವರು ಮನೆ. ರಾಘವೇಂದ್ರ ಸ್ವಾಮಿ ತಾಯಿ ಹೃದಯದ ಮಹಾಸಂತರು ಎಂದೇ ಬಣ್ಣಿಸಿದರು. ಇನ್ನು ಹಿರಿಯ ನಟ ಶಿವರಾಂ ಮೂರು ದಿನಗಳ ಕಾಲ ಮಠದಲ್ಲೇ ಉಳಿದು ಎಲ್ಲ ಸೇವೆಗಳನ್ನು ಮಾಡಿ ತಮ್ಮ ಭಕ್ತಿ ಮೆರೆದರು.
ವಿದ್ಯುದ್ದೀಪಾಲಂಕಾರದಿಂದ ಮತ್ತಷ್ಟು ಝಗಮಗಿಸಿದ ಮಠ ಭಕ್ತರ ಆಕರ್ಷಣೀಯ ತಾಣದಂತೆ ಭಾಸವಾಯಿತು. ಸಂಜೆ ಯೋಗೀಂದ್ರ ಸಭಾಮಂಟಪದಲ್ಲಿ ಸಪ್ತರಾತ್ರೋತ್ಸವ ನಿಮಿತ್ತ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನರಂಜಿಸುವಲ್ಲಿ ಯಶಸ್ವಿಯಾದವು. ಶನಿವಾರ ಸಂಜೆ ಪಂಡಿತ್ ವೆಂಕಟೇಸಕುಮಾರ್ ನಡೆಸಿಕೊಟ್ಟ ಭಕ್ತಿ ರಸಸಂಜೆ ಕಾರ್ಯಕ್ರಮದಲ್ಲಿ ಹಲವು ಹಾಡುಗಳು ನೆರೆದವರನ್ನು ಕುಣಿಯುವಂತೆ ಮಾಡಿತು.