ರಾಯಚೂರು: ಮಂತ್ರಾಲಯ ಪಾಂಡಿತ್ಯಕ್ಕೆ ಹೆಸರಾದ ತಾಣ. ಇಲ್ಲಿನ ಪೀಠಾಧಿಪತಿ ಸೇರಿದಂತೆ ಅನೇಕ ಪಂಡಿತರು ಬಹುಭಾಷಾ ಪ್ರಾವೀಣ್ಯರು. ಅಂಥ ಸ್ಥಳದಲ್ಲಿ ಆರಾಧನೆ ವೇಳೆ ಅಕ್ಷರಶಃ ಭಾಷಾ ಸಮ್ಮಿಲನವಾಗುತ್ತದೆ ಎಂದರೆ ನಂಬಲೇಬೇಕು.
ಕರ್ನಾಟಕ-ಆಂಧ್ರ ಗಡಿಭಾಗದಲ್ಲಿರುವ ಮಂತ್ರಾಲಯ ಮಠದಲ್ಲಿ ಕನ್ನಡ-ತೆಲುಗು ಎರಡೂ ಭಾಷೆ ಜನಜನಿತ. ಸಾಮಾನ್ಯ ದಿನಗಳಲ್ಲಿ ಈ ಎರಡು ರಾಜ್ಯಗಳ ಜನ ಸಿಕ್ಕೇ ಸಿಗುತ್ತಾರೆ. ಆದರೆ ಆರಾಧನೆ ವೇಳೆ ಮಾತ್ರ ಹಲವು ರಾಜ್ಯಗಳ ಜನ ಬರುವುದರಿಂದ ಇಲ್ಲಿ ಬಹುಭಾಷಿಕರ ಸಮ್ಮೇಳನವೇ ಏರ್ಪಟ್ಟಂತಿರುತ್ತದೆ.
ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಂದ ರಾಯರ ಆರಾಧನೆಗೆ ಭಕ್ತರು ಬರುವುದು ವಾಡಿಕೆ. ಇನ್ನು ತಮಿಳುನಾಡಿನ ಭಕ್ತರು ನಿತ್ಯ ನಿರಂತರ. ಜತೆಗೆ ಮಹಾರಾಷ್ಟ್ರ ಹಾಗೂ ಕೇರಳದ ಭಕ್ತರು ಸೇರಿಕೊಳ್ಳುತ್ತಾರೆ. ಹೀಗಾಗಿ ನಾನಾ ರಾಜ್ಯಗಳ ಭಕ್ತರು ಇಲ್ಲಿಗೆ ಬಂದಾಗ ತಮ್ಮವರೊಡನೆ ಮಾತೃ ಭಾಷೆಯಲ್ಲೇ ವ‌್ಯವಹರಿಸುವುದರಿಂದ ಇಲ್ಲಿ ಐದಾರು ಭಾಷೆಗಳು ಕಿವಿಗೆ ಬೀಳುವುದು ಸರ್ವೇ ಸಾಮಾನ್ಯ. ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಹಿಂದಿ, ಇಂಗ್ಲಿಷ್, ತುಳು, ತಮಿಳು..ಹೀಗೆ ನಾನಾ ಭಾಷೆಗಳ ಭಕ್ತರು ಮಠದಲ್ಲಿ ಕಂಡು ಬರುತ್ತದೆ.
ತಂಡೋಪತಂಡವಾಗಿ ಬರುವರು: ಸಾಮಾನ್ಯವಾಗಿ ಆರಾಧನೆಗೆ ಒಬ್ಬೊಬ್ಬರು ಬರುವುದಕ್ಕಿಂತ ತಂಡೋಪತಂಡವಾಗಿ, ಕುಟುಂಬ ಸಮೇತರಾಗಿ ಬರುವವರೇ ಹೆಚ್ಚು. ಇದರಿಂದ ಬಂದವರು ತಮ್ಮ ತಮ್ಮಲ್ಲಿ ಮಾತನಾಡುವಾಗ ಮಾತೃಭಾಷೆಯನ್ನೇ ಬಳಸುತ್ತಾರೆ. ಅವರ ಭಾಷೆಯಿಂದ ಆಯಾ ರಾಜ್ಯದ ಭಕ್ತರು ಒಂದೆಡೆ ಕೂಡಲು ಮಾತನಾಡಲು, ಮಾಹಿತಿ ಹಂಚಿಕೊಳ್ಳುವುದು ವಿಶೇಷ.
ಹಲವು ಭಾಷೆಯಲ್ಲಿ ಭಾಷಣ: ಮಠಕ್ಕೆ ವಿವಿಧೆಡೆಯಿಂದ ಭಕ್ತರು ಬರುವುದನ್ನು ಅರಿತಿರುವ ಶ್ರೀಮಠದ ಪೀಠಾಧಿಪತಿ ಆಶೀರ್ವಚನ ನೀಡುವಾಗ, ಭಕ್ತರನ್ನು ವಿಚಾರಿಸುವಾಗ ಅವರದ್ದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಹಿಂದಿ ಪ್ರಾವೀಣ್ಯ ಹೊಂದಿರುವ ಅವರು ಆರಾಧನೆ ವೇಳೆ ಹಲವು ಭಾಷೆಗಳಲ್ಲಿ ಆಶೀರ್ವಚನ ನೀಡುವುದು ಸಹಜ.