ರಾಯಚೂರು: ಎಲ್ಕೆಜಿ, ಯುಕೆಜಿಯನ್ನು ಅಂಗನವಾಡಿ ಕೇಂದ್ರಗಳಲ್ಲೇ ಆರಂಭಿಸಬೇಕು, ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದ ಬಳಿಕ ಜಿಲ್ಲಾಡಳಿತ ಮುಖೇನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸರ್ಕಾರ ಪ್ರಾಥಮಿಕ ಶಾಲೆಗಳಲ್ಲೇ ಎಲ್ಕೆಜಿ, ಯುಕೆಜಿ ಆರಂಭಿಸುತ್ತಿದೆ. ಇದರಿಂದ ಕ್ರಮೇಣ ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ಗೌಣವಾಗಿ ಎಲ್ಲ ಕೇಂದ್ರಗಳನ್ನು ಮುಚ್ಚುವ ಸ್ಥಿತಿ ಎದುರಾಗಲಿದೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ ಯುಕೆಜಿ ಆರಂಭಿಸಿ ಬಲವರ್ಧನೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆ, ತರಕಾರಿ ಹಣ, 2018ರಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿಸಿರುವ ಗೌರವಧನ ಬಿಡುಗಡೆ ಮಾಡಬೇಕು. ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಸಿಡಿಪಿಒ ಕಚೇರಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವ ಕಾರಣ ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ. ಇಲಾಖೆಗೆ ಕೂಡಲೇ ಸಿಬ್ಬಂದಿ ನೇಮಿಸಬೇಕು. ಅನುಕಂಪದ ಆಧಾರದ ಮೇಲೆ ಅರ್ಜಿ ಸಲ್ಲಿಸಿದವರನ್ನು ನೇಮಿಸಬೇಕು. ಪ್ರತಿ ವಾರಕೊಮ್ಮೆ ಕೇಂದ್ರಗಳಿಗೆ ಮೊಟ್ಟೆ ಪೂರೈಸಬೇಕು ಹಾಗೂ ನಿಗದಿತ ಸಮಯಕ್ಕೆ ಗ್ಯಾಸ್ ಸಿಲೆಂಡರ್ ಪೂರೈಸಬೇಕು. ಜಿಲ್ಲೆಯಲ್ಲಿ 26 ನೌಕರರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ನಿವೃತ್ತಿ ಸೌಲಭ್ಯ ಬದಲಿಸಿ ಎಲ್ಐಸಿ ಆಧಾರಿತ ಪಿಂಚಣಿ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಎನ್‌ಪಿಎಸ್ ಮಾನದಂಡ ಪಾಲಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪ್ರಧಾನ ಕಾರ್ಯದರ್ಶಿ ರಂಗಮ್ಮ ಅನ್ವರ, ಪೂಜಾರಿ, ಪಾರ್ವತಿ, ನಗನೂರು ಲಕ್ಷ್ಮೀ, ಮಹೇಶ್ವರಿ, ರಮಾ, ಸುಜಾತಾ, ಮರಿಯಮ್ಮ, ರಾಜೇಶ್ವರಿ, ಜಾನಿಕಮ್ಮ, ವರಲಕ್ಷ್ಮೀ, ಮುಖಂಡರಾದ ಗಿರಿಯಪ್ಪ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ ಸೇರಿ ಅನೇಕ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.