ರಾಯಚೂರು: ಮುಂಗಾರು, ಹಿಂಗಾರು ಕೈಕೊಟ್ಟು ಜಿಲ್ಲೆಯಲ್ಲಿ ಆವರಿಸಿದ ಭೀಕರ ಬರದ ಪರಿಣಾಮ ಅಕ್ಷಯ ತೃತೀಯ ಆಚರಣೆಗೂ ತಟ್ಟಿದೆ. ಈ ಬಾರಿ ಜಿಲ್ಲೆಯಲ್ಲಿ ಚಿನ್ನಾಭರಣ ಖರೀದಿ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.
ಸಾಮಾನ್ಯವಾಗಿ ಕೃಷಿ ಚಟುವಟಿಕೆ ಚೆನ್ನಾಗಿ ನಡೆದರೆ ಆರ್ಥಿಕ ವಹಿವಾಟು ಜೋರಾಗುತ್ತದೆ. ಆದರೆ, ಈ ಬಾರಿ ಮುಂಗಾರು, ಹಿಂಗಾರು ಸಂಪೂರ್ಣ ಕೈಕೊಟ್ಟು ರೈತರಲ್ಲಿ ಬಿಡಿಗಾಸಿಲ್ಲ. ಇದರಿಂದ ಎಲ್ಲ ಕ್ಷೇತ್ರದ ವ್ಯಾಪಾರ, ವಹಿವಾಟು ಕುಗ್ಗಿದೆ. ಅದರ ನೇರ ಪರಿಣಾಮ ವಿಶೇಷ ದಿನವಾದ ಅಕ್ಷಯ ತೃತೀಯ ಮೇಲೂ ಆಗಿದೆ. ಚಿನ್ನ ಖರೀದಿಸುವವರ ಸಂಖ್ಯೆಯಲ್ಲಿ ಕಡಿಮೆ ಆಗಿಲ್ಲ. ಆದರೆ, ಖರೀದಿಸುವ ಪ್ರಮಾಣದಲ್ಲಿ ಸಾಕಷ್ಟು ಕಡಿಮೆ ಆಗಿದೆ ಎನ್ನುವುದು ವರ್ತಕರ ವಿಶ್ಲೇಷಣೆ.
ಮೊದಲೆಲ್ಲ ಒಂದು ತೊಲೆ ಖರೀದಿಸುತ್ತಿದ್ದ ಗ್ರಾಹಕರು, ಈ ದಿನ ಖರೀದಿಸಿದರೆ ಒಳ್ಳೆದಾಗುತ್ತದೆ ಎಂಬ ಕಾರಣಕ್ಕೆ ಒಂದೆರಡು ಗ್ರಾಂ ಖರೀದಿಸುತ್ತಿದ್ದಾರೆ. ಇನ್ನು ಕೆಲವರು ಚಿನ್ನ ಬದಲಿಗೆ ಬೆಳ್ಳಿ ಖರೀದಿಸಿ ಸುಮ್ಮನಾಗುತ್ತಿದ್ದಾರೆ.
ಆದರೂ ಸರಾಫ್ ಬಜಾರ್‌ನಲ್ಲಿ ಬೆಳಗ್ಗೆಯಿಂದಲೇ ಜನಸಂದಣಿ ಜೋರಾಗಿತ್ತು. ಚಿನ್ನದಂಗಡಿಗಳಿಗೆ ತೆರಳಿದ ಗ್ರಾಹಕರು ತಮ್ಮ ಶಕ್ತ್ತ್ರ್ಯಾನುಸಾರ ಚಿನ್ನ ಖರೀದಿಸುತ್ತಿದ್ದದ್ದು ಕಂಡು ಬಂತು. ಮೊದಲೆಲ್ಲ ಆಭರಣಗಳನ್ನು ಖರೀದಿಸುತ್ತಿದ್ದರು. ಇಲ್ಲವೇ ಮುಂಗಡ ಕಾಯ್ದಿರಿಸಿ ಅಕ್ಷಯ ತೃತೀಯ ದಿನದಂದು ಖರೀದಿಸುತ್ತಿದ್ದರು. ಆದರೆ, ಈಗ ಆಭರಣ ಖರೀದಿಸುವವರಿಗಿಂತ ಗಟ್ಟಿ ಬಂಗಾರ ಖರೀದಿಸುವವರೇ ಹೆಚ್ಚಾಗಿ ಕಂಡು ಬಂದರು.
ವಿಶೇಷ ಪೂಜೆ: ಅಕ್ಷಯ ತೃತೀಯ ನಿಮಿತ್ತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಯಿತು. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಗಂಧ ಲೇಪನ ಮಾಡಲಾಯಿತು. ಅದರಂತೆ ನಗರದ ಉಸುಕಿನ ಆಂಜನೇಯ ಸ್ವಾಮಿಗೆ, ತಾಲೂಕು ಕಾಡ್ಲೂರಿನ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರಿಗೂ ಶ್ರೀ ಗಂಧ ಲೇಪನ ಮಾಡಲಾಗಿತ್ತು.