Advertisement

ಕೃಷಿ ಮೇಳದ ಆಕರ್ಷಣೆ ಜಫರದಾರಿ, ಮುರ್ರಾ ಎಮ್ಮೆ

02:49 PM Dec 16, 2019 | Naveen |

„ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ಹೈನುಗಾರಿಕೆ ಈಗ ಲಾಭದಾಯಕ ವಲಯ. ಆದರೆ, ಅದನ್ನು ಮಾಡುವುದು ಕಷ್ಟದ ಕೆಲಸ. ಆದರೆ, ಇಲ್ಲೊಬ್ಬ ರೈತ ಜಫರದಾರಿ ತಳಿಗಳ ಎಮ್ಮೆಗಳನ್ನು ಸಾಕುವ ಮೂಲಕ ಭರ್ಜರಿ ಲಾಭದ ಸವಿ ಉಣ್ಣುತ್ತಿದ್ದಾನೆ. ಈ ಬಾರಿ ರಾಯಚೂರು ಕೃಷಿ ವಿವಿ ಮೇಳದ ಆಕರ್ಷಣೆಗಳಲ್ಲಿ ಜಫರದಾರಿ, ಮುರ್ರಾ ಎಮ್ಮೆಗಳು ಕೂಡ ಒಂದು. ಮಾನ್ವಿ ತಾಲೂಕಿನ ಕೊರವಿ ಗ್ರಾಮದ ಜನಾರ್ದನ ಕಳೆದ 20 ವರ್ಷಗಳಿಂದ ಈ ಹೈನುಗಾರಿಕೆಯಲ್ಲಿ ತೊಡಗಿದ್ದು, ಭಾರೀ ಗಾತ್ರದ ಈ ಎಮ್ಮೆಗಳನ್ನು ಸಾಕಿಕೊಂಡಿದ್ದಾರೆ. ಜಫರದಾರಿ ತಳಿಗಳು ಕನಿಷ್ಠ 20 ಸೂಲುಗಳನ್ನು ನೀಡುತ್ತಿದ್ದು, ರೈತರಿಗೆ ಇದರಿಂದ ನಷ್ಟದ ಮಾತೇ ಇಲ್ಲ ಎನ್ನುತ್ತಾರೆ ಜನಾರ್ದನ. ಆದರೆ, ನಿರ್ವಹಣೆ ಕೂಡ ಅಷ್ಟೇ ಪ್ರಮಾಣದ್ದಾಗಿರುತ್ತದೆ.

Advertisement

ದಿನಕ್ಕೆ 25 ಲೀಟರ್‌ ಹಾಲು: ಈ ಎಮ್ಮೆಗಳು ನಿತ್ಯ ಕನಿಷ್ಠ 25 ಲೀಟರ್‌ ಹಾಲು ನೀಡುತ್ತಿದ್ದು, ರೈತರಿಗೆ ಲಾಭ ಖಚಿತ. ಸುಮಾರು 20 ಎಮ್ಮೆಗಳನ್ನು ಸಾಕಿರುವ ಜನಾರ್ದನ ನಿತ್ಯ ಏನಿಲ್ಲವೆಂದರೂ 120 ಲೀಟರ್‌ಗಿಂತ ಅಧಿ ಕ ಹಾಲು ಮಾರಾಟ ಮಾಡುತ್ತಾರೆ. ಸ್ಥಳೀಯವಾಗಿರುವ ಡೈರಿಗೆ ಹಾಲು ಸರಬರಾಜು ಮಾಡುತ್ತಾರೆ. ವರ್ಷಕ್ಕೆ ಏನಿಲ್ಲವೆಂದರೂ ಒಂದು ಎಮ್ಮೆಯಿಂದ ಒಂದೂವರೆ ಲಕ್ಷ ರೂ. ಆದಾಯ ನಿರೀಕ್ಷೆಯಿದೆ.

ಉತ್ತಮ ಆಹಾರ: ಈ ಎಮ್ಮೆಗಳು ನೋಡಲು ಭಾರೀ ಗಾತ್ರದಲ್ಲಿವೆ. ಸಾಮಾನ್ಯ ಎಮ್ಮೆಗಳಂತಿರದೆ ತುಸು ಭಿನ್ನವಾಗಿ ಕಾಣಿಸುತ್ತವೆ. ಅವುಗಳ ಗಾತ್ರಕ್ಕೆ ತಕ್ಕಂತೆ ಆಹಾರ ಕೂಡ ಹೆಚ್ಚಾಗಿಯೇ ಬೇಕು. ಈ ಎಮ್ಮೆಗಳಿಗಾಗಿ ಜನಾರ್ಧನ ಮೂರು ಎಕರೆ ಪ್ರದೇಶದಲ್ಲಿ ಬರೀ ಹಸಿ ಹುಲ್ಲು ಬೆಳೆಸುತ್ತಿದ್ದಾರೆ. ಅವು ಎಷ್ಟು ತಿಂದಷ್ಟು ಹಾಲು ಉತ್ಪಾದನೆ ಜಾಸ್ತಿ ಎನ್ನುವ ಕಾರಣಕ್ಕೆ ಉತ್ತಮವಾಗಿ ಮೇಯಿಸಲಾಗುತ್ತದೆ. ಒಂದು ಎಮ್ಮೆಗೆ ಏನಿಲ್ಲವೆಂದರೂ ದಿನಕ್ಕೆ 10 ಕೆಜಿ ಆಹಾರ ಬೇಕು. ಒಣಹುಲ್ಲಿನ ಜತೆಗೆ ಹತ್ತಿ ಕಾಳು, ತೊಗರಿ ಚೆನ್ನಿ, ಗೋದಿ  ಹೊಟ್ಟು, ಸಜ್ಜೆ ಕುದಿಸಿ ತಿನ್ನಿಸಲಾಗುತ್ತದೆ. ಹೀಗಾಗಿ ಅವುಗಳ ನಿರ್ವಹಣೆ ಕೂಡ ತುಸು ದುಬಾರಿಯೇ ಎನ್ನುತ್ತಾರೆ ಅವರು.

ಭಾರೀ ಬೇಡಿಕೆ: ಜಫರದಾರಿ ಹಾಗೂ ಮುರ್ರಾ ತಳಿಗಳು ನೋಡಲು ಒಂದೇ ತರಹವಿದ್ದರೂ ಕೋಡುಗಳು ಭಿನ್ನವಾಗಿರುತ್ತವೆ. ಜಫರದಾರಿ ಎಮ್ಮೆಗೆ ಮುರ್ರಾ ಕೋಣದಿಂದ ಕ್ರಾಸ್‌ ಮಾಡಿದ್ದರಿಂದ ಸಾಕಷ್ಟು ಎಮ್ಮೆಗಳು ಜನಿಸಿದ್ದು, ಒಂದು ವರ್ಷದ ಎಮ್ಮೆ ಕರುಗಳಿಗೆ 30-40 ಸಾವಿರ ರೂ. ಬೆಲೆ ಸಿಗುತ್ತದೆ. ಅಲ್ಲದೇ, ಐದಾರು ಸೂಲು ಹಾಕಿದ ಎಮ್ಮೆಗಳಾದರೂ ಏನಿಲ್ಲವೆಂದರೂ 10-12 ಲಕ್ಷ ರೂ. ದರಕ್ಕೆ ಮಾರಾಟವಾಗುತ್ತದೆ. ಆಂಧ್ರ, ತೆಲಂಗಾಣದ ಭಾಗದ ರೈತರು ಹೆಚ್ಚಾಗಿ ಬಂದು ಖರೀದಿಸುತ್ತಾರೆ. ಈ ಎಮ್ಮೆಗಳು ಹೆಚ್ಚು ಸೂಲುಗಳನ್ನು ಹಾಕುವುದರಿಂದ ಬೇಡಿಕೆ ಹೆಚ್ಚಾಗಿರುತ್ತದೆ.

ಈಗಾಗಲೇ ಆಂಧ್ರ, ಸಿಂಧನೂರಿನಲ್ಲಿ ನಡೆದ ಪ್ರದರ್ಶನಗಳಲ್ಲಿ ಈ ಎಮ್ಮೆಗಳು ಪ್ರಶಸ್ತಿಯನ್ನು ಬಾಚಿಕೊಂಡಿವೆ. ಮೇಳಕ್ಕೆ ಬಂದವರೆಲ್ಲ ಈ ಎಮ್ಮೆಗಳನ್ನು ಕಂಡು ನಿಬ್ಬೆರಗಾಗುವುದು ಸಹಜ ಎನ್ನುವಂತಾಗಿದೆ. ಅದರ ಜತೆಗೆ ಜನಾರ್ದನ ಅವರಿಂದ ಮಾಹಿತಿ ಪಡೆದು, ಅವರ ಮೊಬೈಲ್‌ ಸಂಖ್ಯೆಯನ್ನು ಪಡೆಯುತ್ತಿದ್ದಾರೆ. ಈ ಕುರಿತು ಮಾಹಿತಿ ಬೇಕಾದವರು ಜನಾರ್ದನ ಅವರ ಮೊ.ಸಂಖ್ಯೆ 8884706576ಕ್ಕೆ ಕರೆ ಮಾಡಬಹುದು.

Advertisement

ಎಮ್ಮೆಗಳ ಹಾಲು ಮಾರಾಟದಿಂದ ಬರುವ ಆದಾಯವನ್ನು ಅವುಗಳ ನಿರ್ವಹಣೆಗೆ ಖರ್ಚು ಮಾಡುತ್ತಿದ್ದೇನೆ. ಪ್ರತಿ ವರ್ಷ ನಾಲ್ಕಾರು ಕರುಗಳು ಜನಿಸುತ್ತವೆ. ಅವುಗಳನ್ನೇ ಆಂಧ್ರ, ತೆಲಂಗಾಣ ಭಾಗದ ರೈತರು ದುಬಾರಿ ಬೆಲೆಗೆ ಖರೀದಿ ಮಾಡಿಕೊಂಡು ಹೋಗುತ್ತಾರೆ. ಇದರಿಂದ ನನಗೆ ಲಕ್ಷಾಂತರ ರೂ. ಆದಾಯ ಬರುತ್ತಿದೆ.
.ಜನಾರ್ದನ,
ಜಫರದಾರಿ ಎಮ್ಮೆ ಸಾಕಣೆಕಾರ

Advertisement

Udayavani is now on Telegram. Click here to join our channel and stay updated with the latest news.

Next