ರಾಯಚೂರು: ಸಾರ್ವಜನಿಕರಿಗೆ ಕೃಷಿಗೆ ಸಂಬಂಧಿಸಿದ ಮಾಹಿತಿ ನೀಡಲು ಆರಂಭಿಸಿದ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ‘ಕೃಷಿ ಪ್ರದೀಪಿಕೆ’ ತ್ತೈಮಾಸಿಕ ಪತ್ರಿಕೆಯ ಕಳೆದ ಮೂರು ಸಂಚಿಕೆ ಪ್ರಕಟಗೊಂಡಿಲ್ಲ. ಇದು ಓದುಗರು, ರೈತರು ಮಾತ್ರವಲ್ಲ ಮುಂಗಡ ಹಣ ಪಾವತಿಸಿದ ಚಂದಾದಾರರ ಬೇಸರಕ್ಕೆ ಕಾರಣವಾಗಿದೆ.
ಪ್ರತಿ ಮೂರು ತಿಂಗಳಿಗೆ ಒಂದರಂತೆ ವರ್ಷಕ್ಕೆ ನಾಲ್ಕು ಸಂಚಿಕೆಯನ್ನು ಪ್ರಕಟಿಸಲಾಗುತ್ತದೆ. ಅದರಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ, ಸಂಶೋಧನೆ, ತಳಿಗಳ ಪರಿಚಯ ಸೇರಿದಂತೆ ಇನ್ನಿತರ ವಿಚಾರಗಳನ್ನು ಒಳಗೊಂಡಿರುತ್ತದೆ. ಆದರೆ, ಇದನ್ನು ಮುದ್ರಿಸಲು ಪ್ರತಿ ವರ್ಷ ವಿವಿ ಟೆಂಡರ್ ಕರೆಯುತ್ತದೆ. ಈ ಬಾರಿ ಟೆಂಡರ್‌ನಲ್ಲಿ ಯಾವುದೇ ಮುದ್ರಣ ಸಂಸ್ಥೆಗಳು ಪಾಲ್ಗೊಳ್ಳದ ಕಾರಣ ಮೊದಲ ಮೂರು ಸಂಚಿಕೆಗಳು ಪ್ರಕಟವಾಗಿಯೇ ಇಲ್ಲ. ಈಗ ಬೆಂಗಳೂರಿನ ಲಾವಣ್ಯ ಮುದ್ರಣ ಸಂಸ್ಥೆ ಪಾಲ್ಗೊಂಡಿದ್ದು, ಮೊದಲ ಸಂಚಿಕೆಗೆ ಮುದ್ರಣಕ್ಕೆ ಹೋಗಿದೆ ಎನ್ನುತ್ತಾರೆ ವಿಭಾಗದ ಅಧಿಕಾರಿ.
ಪ್ರತಿ ವರ್ಷ ಟೆಂಡರ್:ವರ್ಷಕ್ಕೇ ನಾಲ್ಕೇ ಸಂಚಿಕೆ ಬರುತ್ತಾದರೂ ಪ್ರತಿ ವರ್ಷ ಟೆಂಡರ್ ಮಾಡಬೇಕಿರುವುದು ಸಮಸ್ಯೆ ತಂದೊಡ್ಡಿದೆ. ಈ ಮುಂಚೆ ಕೊಟೇಶನ್ ರೀತಿಯಲ್ಲಿ ಯಾವುದಾದರೂ ಸಂಸ್ಥೆಗೆ ಮುದ್ರಣ ಹೊಣೆ ನೀಡಲಾಗುತ್ತಿತ್ತು. ಆದರೆ, ಆಡಿಟ್‌ಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಟೆಂಡರ್ ಕರೆಯಬೇಕೆಂಬ ನಿಯಮ ಜಾರಿಗೆ ತರಲಾಗಿದೆ. ಇದರಿಂದ ವಿವಿ ನಿಗದಿಪಡಿಸಿದ ಹಣಕ್ಕೆ ಪತ್ರಿಕೆ ಮುದ್ರಿಸಲು ಸಂಸ್ಥೆಗಳು ಹಿಂದೇಟು ಹಾಕುವಂತಾಗಿದೆ. ಕೊನೆಗೆ ಬೆಂಗಳೂರಿನ ಸಂಸ್ಥೆಯೊಂದು ಮುದ್ರಣಕ್ಕೆ ಮುಂದಾಗಿದೆ.
ಎರಡು ಸಂಚಿಕೆ ಏಕಕಾಲಕ್ಕೆ: ಏಪ್ರಿಲ್-ಜೂನ್ ಹಾಗೂ ಜುಲೈ-ಸೆಪ್ಟೆಂಬರ್, ಅಕ್ಟೋಬರ್-ಡಿಸೆಂಬರ್ ಸಂಚಿಕೆ ಓದುಗರ ಕೈ ಸೇರಬೇಕಿತ್ತು. ಆದರೆ, ಈಗ ಇನ್ನೂ ಏಪ್ರಿಲ್-ಜೂನ್ ಸಂಚಿಕೆ ಮುದ್ರಣಕ್ಕೆ ಹೋಗಿದೆ. ಒಂದೆರಡು ದಿನಗಳಲ್ಲಿ ಮುದ್ರಣ ಆಗಬಹುದು. ಜುಲೈ-ಸೆಪ್ಟೆಂಬರ್ ಸಂಚಿಕೆ ಸಿದ್ಧಗೊಂಡಿದ್ದು, 15 ದಿನದೊಳಗೆ ಮುದ್ರಣ ಕಾರ್ಯ ಮುಗಿಸಿ ಎಲ್ಲರಿಗೂ ಕಳುಹಿಸಲಾಗುವುದು ಎನ್ನುತ್ತಾರೆ ಸಿಬ್ಬಂದಿ.
ವಿಷಯ ಸಂಗ್ರಹ ಸವಾಲು: ಕೃಷಿ ಪ್ರದೀಪಿಕೆ ಮುದ್ರಿಸುವುದಕ್ಕೆ ವಿಷಯ ಸಂಗ್ರಹ ಸವಾಲು ಎದುರಾಗಿದೆ. ಓದುಗರಿಗೆ ಹೊಸ ಹೊಸ ವಿಚಾರಗಳನ್ನು ತಿಳಿಯಪಡಿಸುವುದರ ಜತೆಗೆ ಅಧಿಕೃತ ಮಾಹಿತಿಯನ್ನೇ ನೀಡಬೇಕಾದ ಹೊಣೆಗಾರಿಕೆ ಇದೆ. ಈಗಾಗಲೇ ಕೃಷಿಗೆ ಸಂಬಂಧಿ ಸಿದ ಸಾಕಷ್ಟು ಪತ್ರಿಕೆಗಳು ಪ್ರಕಟವಾಗುತ್ತಿರುವುದು ವಿವಿ ಸಿಬ್ಬಂದಿಗೆ ವಿಷಯ ಸಂಗ್ರಹಕ್ಕೆ ತೊಡಕಾಗಿ ಪರಿಣಮಿಸಿದೆ. ನಾವೇ ಅರ್ಹ ಬರಹಗಾರರಿಂದ ಲೇಖನ ತರಿಸಿಕೊಳ್ಳುತ್ತೇವೆ.
ಕನ್ನಡದಲ್ಲಿ ವಿಷಯ ವಸ್ತು ಸಿಗುವುದೇ ಕಷ್ಟ. ಹೀಗಾಗಿ ಇಂಗ್ಲಿಷ್, ಹಿಂದಿ ಸೇರಿದಂತೆ ಬೇರೆ ಭಾಷೆಗಳ ವರದಿಗಳನ್ನು ತರ್ಜುಮೆ ಮಾಡಿ ಪ್ರಕಟಿಸಲಾಗುತ್ತಿದೆ ಎನ್ನುತ್ತಾರೆ ವಿಭಾಗದ ಅಧಿಕಾರಿಗಳು.