Advertisement

ಕರ್ನಾಟಕ ಪಬ್ಲಿಕ್‌ ಶಾಲೆ ಕಟ್ಟಡ ಕಾಮಗಾರಿ ಅಪೂರ್ಣ

11:09 AM Jul 06, 2019 | Team Udayavani |

ಸುರಪುರ: ರಂಗಂಪೇಟೆ ಕರ್ನಾಟಕ ಪಬ್ಲಿಕ್‌ ಶಾಲೆ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಮತ್ತು ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಅಖೀಲ ಭಾರತೀಯ ವಿದಾರ್ಥಿ ಪರಿಷತ್‌ ತಾಲೂಕು ಘಟಕದ ನೇತೃತ್ವದಲ್ಲಿ ಹಲವಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

ಎಬಿವಿಪಿ ಕಲಬುರಗಿ ವಿಭಾಗ ಸಂಚಾಲಕ ನಾಗರಾಜ ಮಕಾಶಿ ಮಾತನಾಡಿ, 2015-16ನೇ ಸಾಲಿನಲ್ಲಿ ಆರ್‌ಐಡಿಎಫ್‌ ಯೋಜನೆ ಅಡಿ ರಂಗಂಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ 50.39 ಲಕ್ಷ ರೂ. ವೆಚ್ಚದ ಎರಡು ಹೆಚ್ಚುವರಿ ಕೊಠಡಿಗಳ ಕಾಮಗಾರಿ ಮಂಜೂರಾಗಿವೆ. ಭೂ ಸೇನಾ ನಿಗಮಕ್ಕೆ ಕಾಮಗಾರಿ ವಹಿಸಲಾಗಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖೆಯಿಂದ ಸಂಪೂರ್ಣ ಹಣ ಬಿಡುಗಡೆಯಾಗಿದೆ. ಆದರೆ ಗುತ್ತಿಗೆ ಪಡೆದುಕೊಂಡಿರುವ ಭೂಸೇನಾ ನಿಗಮದವರು ಕಟ್ಟಡ ಕಾಮಗಾರಿ ಇದುವರೆಗೂ ಪೂರ್ಣಗೊಳೀಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಬುನಾದಿಮಟ್ಟದಿಂದ ಮೇಲೆಳುತ್ತಿಲ್ಲ. ನಿಗಮದ ಇಂಜಿನಿಯರ್‌ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದು ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ಪರಿಣಾಮ ಬೀರಿದೆ. ಅನೇಕ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕೂಡಲು ಸ್ಥಳವಿಲ್ಲದಂತಾಗಿದೆ. ಕೆಲ ವಿದ್ಯಾರ್ಥಿಗಳು ನಿಂತೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಶಾಸಕರ ಗಮನಕ್ಕೂ ತಂದಿದ್ದೇವೆ. ಆದರೆ ಯಾರೊಬ್ಬರು ನಮ್ಮ ಮನವಿಗೆ ಸ್ಪಂದಿಸುತಿಲ್ಲ. ಈ ಬಗ್ಗೆ ಕೇಳಿದರೆ ನಿಗಮದ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದೆಲ್ಲವನ್ನು ಗಮನಸಿದರೆ ಬಹುತೇಕ ಅನುದಾನ ಲೂಟಿ ಮಾಡಿರುವ ಗುಮಾನಿ ಕಂಡು ಬರುತ್ತಿದೆ ಎಂದು ಆರೋಪಿಸಿದರು

2018-19ನೇ ಸಾಲಿನಿಂದ ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ 1ರಿಂದ 12ನೇ ತರಗತಿವರೆಗೆ ಒಂದೇ ಸೂರಿನಡಿ ವಿಲೀನವಾಗಿದೆ. ಸುಮಾರು 1200 ವಿದ್ಯಾರ್ಥಿಗಳಿರುವ ಶಾಲೆಗೆ ಕಾಂಪೌಂಡ್‌ ಗೋಡೆ ಇಲ್ಲ. ಕಾರಣ ಸಾರ್ವಜನಿಕರು ಶಾಲಾ ಮೈದಾನದಲ್ಲಿ ಶೌಚಾ ಮಾಡುವುದು, ಕಸಕಡ್ಡಿ ಹಾಕುವುದರಿಂದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವಾಗ ಮತ್ತು ಆಟ ಆಡುವಾಗ ಕಲುಷಿತ ಸ್ಥಳದಲ್ಲಿ ನಿಲ್ಲುವಂತಾಗಿದೆ ಎಂದು ದೂರಿದರು.

Advertisement

2018-19ನೇ ಸಾಲಿನಲ್ಲಿ ಎಚ್ಕೆಆರ್‌ಡಿಬಿ ಅನುದಾನದಲ್ಲಿ 7 ಲಕ್ಷ ರೂ. ಮೊತ್ತದ ವಿಜ್ಞಾನ ಪ್ರಯೋಗ ಸಾಮಾಗ್ರಿಗಳು ಮತ್ತು 3 ಲಕ್ಷ ರೂ. ವೆಚ್ಚದ ಡೆಸ್ಕ್ಗಳು ಮಂಜೂರಾಗಿವೆ. ಇಲ್ಲಿಯವರೆಗೂ ಸರಬರಾಜು ಆಗಿಲ್ಲ. ಶಾಲೆಯಲ್ಲಿ 1200 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಸುಮಾರು 1 ವರ್ಷದಿಂದ ಕೊಳವೆಬಾವಿ ಬಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ನೀರಿಗಾಗಿ ಪರದಾಡುವಂತಾಗಿದೆ. ಶೀಘ್ರ ಕಟ್ಟಡ ಕಾಮಗಾರಿ ಆರಂಭಿಸಬೇಕು. ಶಾಲೆಗೆ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಾದೇಶಿಕ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಲಾಯಿತು.

ಪರಿಷತ್‌ ನಗರ ಕಾರ್ಯದರ್ಶಿ ರಮೇಶ ಯಾದವ, ಜಿಲ್ಲಾ ಸಂಚಾಲಕ ಕ್ಯಾತಪ್ಪ ಮೇದಾ, ಆಕಾಶ, ರಂಗನಾಥ ಹೆಮನೂರ, ಸುನೀಲ ಅಮ್ಮಾಪುರ, ಅಶೋಕನಾಯಕ, ಜನಯ್ಯ, ದೇವಮ್ಮ, ತ್ರಿವೇಣಿ, ಧರ್ಮರಾಜ ಶೆಳ್ಳಗಿ, ಭೀಮಾಶಂಕರ ಚಂದ್ಲಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next