Advertisement

ಕೊರೊನಾ ಭಯ ಬೇಡ: ಮುಂಜಾಗ್ರತೆ ವಹಿಸಿ

01:55 PM Mar 14, 2020 | Naveen |

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಹರಡದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಈವರೆಗೂ ಯಾವುದೇ ಪ್ರಕರಣ ದೃಢಪಟ್ಟಿಲ್ಲ. ಜನರು ಅನಗತ್ಯ ಆತಂಕಕ್ಕೆ ಒಳಗಾಗದೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಕೊರೊನಾ ವೈರಸ್‌ ಕುರಿತು ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಇದು ಸಾಂಕ್ರಾಮಿಕವಲ್ಲದೇ ಮಾರಣಾಂತಿಕ ಕಾಯಿಲೆಯಾಗಿದೆ. ಹೀಗಾಗಿ ಜನ ದಟ್ಟಣೆ ಸ್ಥಳಗಳಲ್ಲಿ ಮದುವೆ‌, ಜಾತ್ರೆ ಸೇರಿದಂತೆ ಇನ್ನಿತರ ಸಭೆ ಸಮಾರಂಭಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲು ವೈದ್ಯರ ತಂಡ ನಿಯೋಜಿಸಬೇಕು. ಕೊರೊನಾ ಲಕ್ಷಣಗಳು ಕಂಡು ಬಂದವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದರು.

ಫೆ.15ರ ಬಳಿಕ ವಿದೇಶಗಳಿಗೆ ಹೋಗಿ ಬಂದವರು ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅವರ ಕುಟುಂಬಸ್ಥರಿಂದ ಅಂತರ ಕಾಯ್ದುಕೊಳ್ಳಬೇಕು. ಸೋಂಕಿನ ಲಕ್ಷಣಗಳು 2ರಿಂದ 14 ದಿನಗಳೊಳಗೆ ಕಂಡು ಬರುವ ಕಾರಣ ತಾವಾಗಿಯೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ವೈದ್ಯರ ತಂಡ ನಿಯೋಜಿಸಬೇಕು. ಶಾಲೆ ಮಕ್ಕಳ ಬೇಸಿಗೆ ಶಿಬಿರ ರದ್ದುಪಡಿಸಬೇಕು. ಜಿಲ್ಲೆಯಲ್ಲಿ ಕಾಯಿಲೆ ಪತ್ತೆಯಾದಲ್ಲಿ ಶಾಲೆ, ಚಿತ್ರಮಂದಿರದಗಳನ್ನು ಬಂದ್‌ ಮಾಡಲಾಗುವುದು. ಎಲ್ಲ ತಹಶೀಲ್ದಾರ್‌ ಮತ್ತು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್‌ ಸಮಿತಿ ಸಭೆ ಕರೆಯಬೇಕು ಎಂದು ಸೂಚಿಸಿದರು.

Advertisement

ಜಿಲ್ಲೆಯ ಸರ್ವೆಲೆನ್ಸ್‌ ಅಧಿಕಾರಿ ಡಾ| ಅನೀಲಕುಮಾರ ತಾಳಿಕೋಟೆ ಮಾತನಾಡಿ, ಈಗಾಗಲೇ ವಿಶ್ವಸಂಸ್ಥೆ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ವಿಶ್ವದಲ್ಲಿ 1,18,326 ಸೋಂಕಿತರ ಪೈಕಿ 4,292 ಸೋಂಕಿತರು ಮೃತಪಟ್ಟಿದ್ದಾರೆ. ಭಾತರದಲ್ಲಿ 74 ಸೋಂಕಿತರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿದರು.

ವಿದೇಶಗಳಿಂದ ಬಂದ ವ್ಯಕ್ತಿಗಳನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಲಕ್ಷಣಗಳು ಕಂಡು ಬಂದರೆ ಅಂತವರನ್ನು ಆಸ್ಪತ್ರೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ನಿಗಾವಹಿಸಲಾಗತ್ತದೆ. ರಿಮ್ಸ್‌ ಹಾಗೂ ನವೋದಯ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ಮಾಡಲಾಗಿದೆ ಎಂದು ಹೇಳಿದರು.

ಆಸ್ಪತ್ರೆ ಸಿಬ್ಬಂದಿ ಹಾಗೂ ಸೋಂಕಿತರ ಸಂಪರ್ಕದಲ್ಲಿರುವವರು ಮಾಸ್ಕ್ ಧರಿಸಬೇಕು. ಜಿಲ್ಲೆಯ ಗಡಿ ಭಾಗಗಳಲ್ಲಿ ಪರೀಕ್ಷೆ ಮಾಡಲು ಚೆಕ್‌ಪೋಸ್ಟ್‌ ಪ್ರಾರಂಭಿಸಿ ಸಿಬ್ಬಂದಿ ನೇಮಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕರಪತ್ರ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಎಸಿ ಸಂತೋಷ ಕಾಮಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ರಾಮಕೃಷ್ಣ ಎಚ್‌. ಸೇರಿ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next