ರಾಯಚೂರು: ಜಿಲ್ಲೆಯಲ್ಲಿ ಜಲಸಂರಕ್ಷಣೆಗೆ ಸಂಬಂಧಿಸಿ ಮಹತ್ತರ ಯೋಜನೆಗಳು ತೀರಾ ಕಡಿಮೆಯೇ. ಅದರಲ್ಲೂ ಕೆರೆ ಪುನಶ್ಚೇತನಕ್ಕೆ ಸರ್ಕಾರದ ಅನುದಾನವಿದ್ದರೂ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿಲ್ಲ. ಆದರೀಗ ತಾಲೂಕಿನ ಎರಡು ದೊಡ್ಡ ಕೆರೆಗಳಿಗೆ ಕೃಷ್ಣಾ ನದಿ ನೀರು ಹರಿಸುವ ಚಿಂತನೆ ನಡೆಸಿದ್ದು, ಈ ಭಾಗದ ಜನರಲ್ಲಿ ಹೊಸ ಆಶಾಭಾವ ಮೂಡಿಸಿದೆ. ಜಿಲ್ಲೆಯ ದೊಡ್ಡ ಕೆರೆಗಳ ಸಾಲಿನಲ್ಲಿರುವ ಮರ್ಚೆಡ್, ಮನ್ಸಲಾಪುರ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಚಿಂತನೆ ನಡೆಸಲಾಗುತ್ತಿದ್ದು, ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಇದಕ್ಕೆ ಒಲವು ತೋರಿದ್ದಾರೆ. ದೊಡ್ಡ ಪ್ರಮಾಣದ ಕೆರೆಗಳಾದ ಕಾರಣ ನೀರಿನ ಬವಣೆ ನೀಗಿಸಬಹುದು ಎಂಬ ಲೆಕ್ಕಾಚಾರ ಮಾಡಲಾಗಿದೆ.
ಮನ್ಸಲಾಪುರ ಕೆರೆ 60.60 ಹೆಕ್ಟೇರ್ ಹಾಗೂ ಮರ್ಚೆಡ್ ಕೆರೆ 64.83 ಹೆಕ್ಟೇರ್‌ಗೂ ಅ ಧಿಕ ಪ್ರದೇಶ ವ್ಯಾಪ್ತಿ ಹೊಂದಿದ್ದು, ಜೀವಂತ ಕೆರೆಗಳ ಸಾಲಿನಲ್ಲಿವೆ. ಆದರೀಗ ಇಲ್ಲಿ ಸಂಗ್ರಹಗೊಳ್ಳುವ ನೀರು ಮಾತ್ರ ಬಳಕೆಗೆ ಯೋಗ್ಯವಾಗಿಲ್ಲ. ರಾಯಚೂರಿನಿಂದ ಬರುವ ಚರಂಡಿ ನೀರನ್ನೆಲ್ಲ ಈ ಕೆರೆಗಳಿಗೆ ಹರಿಸುವುದರಿಂದ ಕೆರೆಗಳು ಕಲುಷಿತಗೊಂಡಿವೆ. ಈಗ ಈ ನೀರನ್ನು ಜಾನುವಾರು ತೊಳೆಯಲು ಬಳಸಲಾಗುತ್ತಿದೆ, ಯಂತ್ರೋಪಕರಣ ತೊಳೆಯಲು ಬಿಟ್ಟರೆ ಉತ್ತಮ ಕಾರ್ಯಗಳಿಗೆ ಬಳಕೆಯಾಗುತ್ತಿಲ್ಲ.
ಯಾಕೆ ಈ ಯೋಜನೆ: ಜಿಲ್ಲೆ ನೀರಾವರಿ ಯೋಜನೆಗೆ ಒಳಪಟ್ಟರೂ ರಾಯಚೂರು, ಮಾನ್ವಿ ಮತ್ತು ಲಿಂಗಸುಗೂರು ತಾಲೂಕಿನಲ್ಲಿ ಇಂದಿಗೂ ಬಯಲು ಸೀಮೆ ಹೆಚ್ಚಾಗಿದೆ. ಪದೇಪದೆ ಬರಕ್ಕೆ ತುತ್ತಾಗುವುದರಿಂದ ಜನ ಜಾನುವಾರುಗಳಿಗೆ ಪ್ರತಿ ವರ್ಷ ಸಂಕಷ್ಟ ತಪ್ಪಿದ್ದಲ್ಲ. ಅಲ್ಲದೇ, ನೀರಿನ ಸಂಗ್ರಹ ಮೂಲಗಳಿಲ್ಲದ ಕಾರಣ ಅಂತರ್ಜಲ ಮಟ್ಟವೂ ನಿರೀಕ್ಷಿತವಾಗಿಲ್ಲ. ರಾಯಚೂರು ತಾಲೂಕಿನಲ್ಲಿ ಕೃಷ್ಣಾ, ತುಂಗಭದ್ರಾ ನದಿ ಹರಿಯುತ್ತಿದ್ದರೂ ಬೇಸಿಗೆಯಲ್ಲಿ ನೀರಿಗಾಗಿ ಹಪಾಹಪಿ ಇದ್ದೇ ಇರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಕೇಂದ್ರಕ್ಕೆ 7-8 ಕಿಮೀ. ದೂರದಲ್ಲಿರುವ ಈ ಕೆರೆಗಳ ಸದ್ಬಳಕೆಗೆ ಚಿಂತನೆ ನಡೆದಿದೆ.
ನಗರದ ಹೊರವಲಯದ ಭಾಗಕ್ಕೂ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬಹುದು. ಅದರ ಜತೆಗೆ ನಾಲ್ಕಾರು ಗ್ರಾಮಗಳಿಗೆ ಕೃಷಿ ಚಟುವಟಿಕೆಗೂ ಈ ನೀರು ಬಳಸಬಹುದು ಎನ್ನಲಾಗುತ್ತಿದೆ. ಇಲಾಖೆಯಿಂದ ಸರ್ವೇ?: ಈಗಾಗಲೇ ಈ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯಿಂದ ಈ ಕುರಿತು ಸರ್ವೇ ಕಾರ್ಯ ನಡೆಸಲಾಗಿದೆ ಎನ್ನಲಾಗುತ್ತಿದೆ. ಕೃಷ್ಣಾ ನದಿ ನೀರಿನಿಂದ ಈ ಎರಡು ಕೆರೆಗಳನ್ನು ತುಂಬಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬ ವರದಿ ತಯಾರಿಸಿದ್ದಾರೆ. ಕಾಲುವೆ ಮೂಲಕವೋ ಅಥವಾ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಬೇಕೋ ಎಂಬ ಪ್ರಾಥಮಿಕ ವರದಿ ಸಂಗ್ರಹಿಸಲಾಗಿದೆ. ಈ ವರದಿ ಆಧರಿಸಿ ಯೋಜನೆಗೆ ವಿಶೇಷ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಶಾಸಕರು ಪ್ರಸ್ತಾವನೆ ಕೂಡ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇದಕ್ಕೆ ಸರ್ಕಾರದಿಂದ ಇನ್ನೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.
ಚರಂಡಿ ನೀರಿನ ಹರಿವಿಗೆ ತಡೆ: ಈಗ ಈ ಕೆರೆಗಳಿಗೆ ಬರುತ್ತಿರುವುದು ಚರಂಡಿ ನೀರು ಮಾತ್ರ. ರಾಯಚೂರಿನ ರಾಜಕಾಲುವೆಗಳಿಂದ ಚರಂಡಿ ನೀರನ್ನು ನೇರವಾಗಿ ಈ ಕೆರೆಗಳಿಗೆ ಹರಿಸಲಾಗುತ್ತಿದೆ. ಮಳೆ ನೀರು ಶೇಖರಣೆಯಾದರೂ ಕಲುಷಿತಗೊಂಡ ಕಾರಣ ಬಳಕೆಗೆ ಯೋಗ್ಯವಾಗಿಲ್ಲ. ಮನ್ಸಲಾಪುರ ಕೆರೆ ತುಂಬಿದ ಬಳಿಕ ಮರ್ಚೆಡ್ ಕೆರೆಗೂ ಈ ನೀರು ಹರಿಯುತ್ತದೆ. ಅಲ್ಲಿನ ಜನ ಈ ನೀರು ಬಳಕೆಗೆ ಹಿಂಜರಿಯುತ್ತಿದ್ದಾರೆ. ಈಗ ಕೆಲ ಮೀನುಗಾರರು ಅದೇ ನೀರಿನಲ್ಲಿ ಮೀನು ಸಾಕಣೆ ಮಾಡುತ್ತಿದ್ದಾರೆ. ಒಂದು ವೇಳೆ ಶುದ್ಧ ನೀರಿನ ಸಂಗ್ರಹ ಮಾಡಿದ್ದೇ ಆದಲ್ಲಿ ಮೀನುಗಾರರಿಗೂ ಉತ್ತಮ ಅವಕಾಶ ಒದಗಿಸಿದಂತಾಗಲಿದೆ. ಇನ್ನು ಸುತ್ತಲಿನ ವಿವಿಧ ಗ್ರಾಮದ ರೈತರು ಕೃಷಿಗೂ ಈ ನೀರು ಬಳಸಿಕೊಳ್ಳಬಹುದು.
ಕೆರೆ ಹೂಳು ತೆರವು: ಈಚೆಗೆ ಭಾರತೀಯ ಜೈನ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಮರ್ಚೆಡ್ ಕೆರೆಯಲ್ಲಿ ಸುಮಾರು ಒಂದು ತಿಂಗಳು ಕಾಲ ಹೂಳು ತೆರವು ಕಾರ್ಯಾಚರಣೆ ನಡೆಸಿತ್ತು. ಇದರಿಂದ ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗಿದೆ. ಮನ್ಸಲಾಪುರ ಕೆರೆಯಲ್ಲೂ ಸಾಕಷ್ಟು ಹೂಳು ಶೇಖರಣೆಯಾಗಿದ್ದು, ತೆರವು ಮಾಡಿ ನೀರು ಸಂಗ್ರಹಿಸಿದರೆ ಇದೊಂದು ದೊಡ್ಡ ಪ್ರಮಾಣದ ಯೋಜನೆಯಾಗಲಿದೆ ಎನ್ನುತ್ತಾರೆ ಈ ಭಾಗದ ರೈತರು.
ಬೇಸಿಗೆಯಲ್ಲಿ ಕುಡಿವ ನೀರು ಹಾಗೂ ಗ್ರಾಮೀಣ ಭಾಗದ ರೈತರಿಗೆ ಕೃಷಿಗೆ ನೀರೊದಗಿಸಲು ಕೆರೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತಿದೆ. ಮೊದಲನೇ ಹಂತವಾಗಿ ತಾಲೂಕಿನ ಮರ್ಚೆಡ್, ಮನ್ಸಲಾಪುರ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ಸರ್ವೇ ನಡೆಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಸಮ್ಮತಿ ನೀಡಿದಲ್ಲಿ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ನೀರಿನ ಬವಣೆ ತುಸುವಾದರೂ ನೀಗಿಸಬಹುದು.
ಬಸನಗೌಡ ದದ್ದಲ್,
ಗ್ರಾಮೀಣ ಶಾಸಕ.
ಸಿದ್ಧಯ್ಯಸ್ವಾಮಿ ಕುಕುನೂರು