Advertisement
ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳು ತಮ್ಮದೇ ಪ್ರಾಬಲ್ಯ ಸಾಧಿಸುವ ಯತ್ನ ಮಾಡಿವೆ. ಕೆಲವೆಡೆ ಮೈತ್ರಿ ಅಭ್ಯರ್ಥಿ ಪರ ಒಲವು ವ್ಯಕ್ತವಾಗಿದ್ದರೆ; ಕೆಲವೆಡೆ ಬಿಜೆಪಿ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಅದರಲ್ಲೂ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳನ್ನು ಹೆಚ್ಚಾಗಿ ಹೊಂದಿರುವ ರಾಯಚೂರು ನಗರ ಕ್ಷೇತ್ರ ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆಗಳಿತ್ತು. ಚುನಾವಣೆ ಮುನ್ನ ಕೊನೆ ದಿನಗಳಲ್ಲಿ ಸ್ಥಳೀಯ ಮುಖಂಡರಲ್ಲಿ ಉಂಟಾದ ಅಸಮಾಧಾನ, ಭಿನ್ನಾಭಿಪ್ರಾಯಗಳಿಂದ ಮತಗಳು ಕೈ ತಪ್ಪುವ ಆತಂಕ ಎದುರಿಸಿದ್ದಾರೆ.
Related Articles
Advertisement
ವಿದ್ಯಾವಂತರು ಬಿಜೆಪಿಗೆ ಒಲವು: ನಗರ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿರುವ ಶಿಕ್ಷಿತರು ಈ ಬಾರಿ ಬಿಜೆಪಿಯತ್ತ ಒಲವು ತೋರಿದ್ದಾರೆ. ನರೇಂದ್ರ ಮೋದಿ ಅಲೆ ಕೆಲಸ ಮಾಡಿದ್ದು, ಯುವ ಸಮೂಹ ಹೆಚ್ಚಾಗಿ ಕಮಲದ ಗುಂಡಿ ಒತ್ತಿರುವ ಸಾಧ್ಯತೆಗಳಿವೆ. ಅದರ ಜತೆಗೆ ಲಿಂಗಾಯತರ ಮತಗಳು, ಮಾರವಾಡಿ, ರಜಪೂತ್ ಸಮಾಜದ ಮತಗಳು ಹೆಚ್ಚಾಗಿ ಬಿಜೆಪಿ ಪಾಲಾಗಿವೆ ಎನ್ನಲಾಗುತ್ತಿದೆ. ಶಾಸಕ ಡಾ| ಶಿವರಾಜ ಪಾಟೀಲ ತಮ್ಮ ಎಂದಿನ ತಂತ್ರಗಾರಿಕೆ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲ ಅಂಶಗಳು ಬಿಜೆಪಿಗೆ ವರವಾಗಿವೆ.
ಗೊಂದಲ ಸೃಷ್ಟಿ: ನಗರದ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದು, ಮತಗಟ್ಟೆಗಳ ಸಂಖ್ಯೆಗಳನ್ನು ಬದಲಿಸಲಾಗಿದೆ ಎಂದು ಕೆಲವರು ದೂರಿದ್ದರು. ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ವಾರ್ಡ್‌ಗಳಲ್ಲೇ ಈ ಸಮಸ್ಯೆ ಆಗಿದೆ. ಹೆಚ್ಚು ಮತ ಚಲಾವಣೆ ಆಗಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆ ಎಲ್ಲ ಕಡೆ ಆದಲ್ಲಿ ಮತದಾನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೈ ಕೊಟ್ಟ ನಾಯಕರು: ನಗರದಲ್ಲಿ ಅಲ್ಪಸಂಖ್ಯಾತ, ದಲಿತ ಮತಗಳು ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಆತ್ಮವಿಶ್ವಾಸದಲ್ಲಿತ್ತು. ಹೀಗಾಗಿ ಇಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಲಿಲ್ಲ. ಸ್ಥಳೀಯ ಮುಖಂಡರನ್ನೇ ನಂಬಿಕೊಳ್ಳಲಾಗಿತ್ತು. ಕೊನೆ ಗಳಿಗೆಯಲ್ಲಿ ಸ್ಥಳೀಯ ನಾಯಕರ ಮನಸ್ತಾಪದಿಂದ ಅವರು ತಳಮಟ್ಟದಲ್ಲಿ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಆದರೆ, ಕಾಂಗ್ರೆಸ್‌ಗೆ ಹೆಚ್ಚು ಮತ ಸಿಗದಿದ್ದಲ್ಲಿ ಬಿಜೆಪಿಗೆ ಅನುಕೂಲ ಆಗಲಿದೆ.
ಒಟ್ಟಾರೆ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಸಾಧಿಸಲು ಇದ್ದ ಅವಕಾಶವನ್ನು ಮೈತ್ರಿ ಅಭ್ಯರ್ಥಿ ಕಳೆದುಕೊಂಡಂತಾಗಿದೆ. ಆದರೂ ಅವರ ನಿರೀಕ್ಷೆಯಂತೆ ಅಲ್ಪಸಂಖ್ಯಾತ , ದಲಿತ ಮತಗಳು ಕೈ ಹಿಡಿದಿದ್ದೇ ಆದಲ್ಲಿ ಇಲ್ಲಿ ಬಿಜೆಪಿಗೆ ಹಿನ್ನಡೆ ಆಗುವುದು ಖಚಿತ.
ಈ ಬಾರಿ ಕಾಂಗ್ರೆಸ್ 15ರಿಂದ 20 ಸಾವಿರ ಲೀಡ್‌ಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳು ಕಾಂಗ್ರೆಸ್ ಕೈ ಹಿಡಿಯುವ ವಿಶ್ವಾಸವಿದೆ. ರಾಯಚೂರು ಕ್ಷೇತ್ರ ಲೀಡ್ ಕೊಡುವ ವಿಶ್ವಾಸವಿದೆ.•ರಾಮಣ್ಣ ಇರಬಗೇರಾ,
ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಯಚೂರು ನಗರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ. ಅಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಾಗಿದ್ದು, ನಮಗೆ ಲೀಡ್ ಸಿಗುವ ಸಾಧ್ಯತೆ ಕಡಿಮೆ. ಆದರೂ ಸಮಬಲ ಸಾಧಿಸಿರುವ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಸಾಕಷ್ಟು ತಳಮಟ್ಟದಿಂದ ಶ್ರಮಿಸಿದ್ದಾರೆ. ಮೋದಿ ಅಲೆ ಕೆಲಸ ಮಾಡುವ ವಿಶ್ವಾಸವಿದೆ.
•ಶರಣಪ್ಪಗೌಡ ಜಾಡಲದಿನ್ನಿ,
ಬಿಜೆಪಿ ಜಿಲ್ಲಾಧ್ಯಕ್ಷ ನಾವು ಮೈತ್ರಿ ಧರ್ಮಕ್ಕನುಗುಣವಾಗಿ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿದ್ದೇವೆ. ನಗರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು ಹೆಚ್ಚಾಗಿರುವ ಕಾರಣ ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೆವು. ಕಾಂಗ್ರೆಸ್ ನಾಯಕರಲ್ಲಿನ ಭಿನ್ನಮತದಿಂದ ನಾವು ಸ್ವಲ್ಪ ಅಂತರ ಕಾಯ್ದುಕೊಳ್ಳುವಂತಾಯಿತು.
•ವಿರುಪಾಕ್ಷಿ,ಜೆಡಿಎಸ್ ಜಿಲ್ಲಾಧ್ಯಕ್ಷ ಸಿದ್ದಯ್ಯಸ್ವಾಮಿ ಕುಕನೂರು