ಸುರಪುರ: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಜಯಗಳಿಸಿದ್ದು, ಅತೀವ ಸಂತಸ ತಂದಿದೆ. ಈ ಗೆಲುವು ಕಾರ್ಯಕರ್ತರ ಮತ್ತು ಸ್ವಾಭಿಮಾನಿ ಮತದಾರ ಪ್ರಭುಗಳ ಜಯವಾಗಿದೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದ ಮತದಾರರು, ಪಕ್ಷದ ಮುಖಂಡ ಮತ್ತು ಕಾರ್ಯಕರ್ತರ ಪಾತ್ರ ಅಮೂಘವಾಗಿದೆ. ಚುನಾವಣೆಯಲ್ಲಿ ಪ್ರತಿಯೊಬ್ಬರು ಹಗಲು ರಾತ್ರಿ ಕಷ್ಟಪಟ್ಟರು. ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಗೆಲುವು ಸಾಧ್ಯವಾಯಿತು ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಸಿಎಂ ಬಿಎಸ್‌ವೈ ಅವರ ಮೇಲಿನ ಪ್ರೀತಿ, ವಿಶ್ವಾಸದಿಂದ ಜನ ಮತ್ತೂಮ್ಮೆ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಸುರಪುರ ಮತ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ 88,863 ಮತಗಳು ಬಂದಿದ್ದು, ಕ್ಷೇತ್ರದಲ್ಲಿ 25,360 ಹಾಗೂ ಅಂಚೆ ಮತಗಳು ಸೇರಿ 26 ಸಾವಿರದಷ್ಟು ಮತಗಳು ಬಿಜೆಪಿಗೆ ಲೀಡ್ ನೀಡಿರುವುದು ಸಂತೋಷದ ಸಂಗತಿ ಎಂದರು.
ನಗರದಲ್ಲಿ ನನ್ನ ಅಭಿಮಾನಿಗಳು ಸ್ವ-ಇಚ್ಛೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ನೀರಿನ ಸಮಸ್ಯೆ ಹೋಗಲಾಡಿಸಿದ್ದಾರೆ. ಇದು ಅಭಿನಂದನಾರ್ಹ ಮತ್ತು ಶ್ಲಾಘನೀಯ. ಇನ್ನೂ ಕೆಲ ಬಡಾವಣೆಗಳಲ್ಲಿ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಸರಿಪಡಿಸಲು ನಗರಸಭೆಯವರಿಗೆ ಸೂಚಿಸಿದ್ದೇನೆ. ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಗೆ ಗ್ರಾಪಂ ಪಿಡಿಒಗಳಿಗೆ ಸೂಚಿಸಿದ್ದೇನೆ. ಶೀಘ್ರದಲ್ಲಿಯೇ ಸಭೆ ಕರೆಯಲು ಕೋರಿದ್ದೇನೆ. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಅಲ್ಲಿಯೂ ಟ್ಯಾಂಕರ್ ನೀರು ಸರಬರಾಜು ನಡೆದಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ ಎಂದು ವಿವರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಅಮರಣ್ಣ ಹುಡೇದ್, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಯಲ್ಲಪ್ಪ ದೇವತ್ಕಲ್, ಪ್ರಮುಖರಾದ ವೇಣಗೋಪಾಲ ಜೇವರ್ಗಿ, ಗ್ಯಾನಚಂದ ಜೈನ್, ಮೇಲಪ್ಪ ಗುಳಗಿ, ಡಾ| ಬಿ.ಎಂ. ಹಳ್ಳಿಕೋಟೆ ಇದ್ದರು.