Advertisement

ಮಾದರಿ ಕೆರೆ ನಿರ್ಮಿಸಲು ಸೂಚನೆ

01:06 PM Oct 17, 2019 | Team Udayavani |

ರಾಯಚೂರು: ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಬೃಹತ್‌ ಕೆರೆಯೊಂದನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳುತ್ತಿದ್ದು, ಈ ಚಟುವಟಿಕೆಯಡಿ ಜಿಲ್ಲೆಯ ಬೃಹತ್‌ ಕೆರೆ ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ಸಂಪೂರ್ಣ ಹೂಳು ತೆರವುಗೊಳಿಸಿ, ಹೆಚ್ಚುವರಿ ನೀರು ಹರಿದು ಹೋಗಲು ಮಾರ್ಗಗಳನ್ನು ರೂಪಿಸಬೇಕು. ಕೆರೆ ಸುತ್ತಲಿನ ದಂಡೆಗಳನ್ನು ಬಲಪಡಿಸಿ, ಗಿಡ ಮರಗಳನ್ನು ನೆಟ್ಟು ಭೂ ಸವಕಳಿ ತಡೆಯಲು ಅಗತ್ಯ ಕ್ರಮ ಜರುಗಿಸಬೇಕು ಎಂದರು.

ಸರ್ಕಾರ ಈ ಯೋಜನೆಗೆ ನಿರ್ದಿಷ್ಟ ಅನುದಾನ ನೀಡಲಿದ್ದು, ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಬೇಕು. ಈಗಾಗಲೇ ಭಾರತೀಯ ಜೈನ ಸಂಘಟನೆ ಸಹಭಾಗಿತ್ವದಲ್ಲಿ ಕಳೆದ ವರ್ಷ ಜಿಲ್ಲೆಯಲ್ಲಿ 18 ಕೆರೆಗಳ ಹೂಳೆತ್ತುವ ಕಾಮಗಾರಿ ನಡೆಸಲಾಗಿದೆ. ಅದರಲ್ಲಿ ಎರಡು ಕೆರೆಗಳ ಕಾಮಗಾರಿ ಮುಗಿದಿದ್ದು, ಇನ್ನೂ 11 ಕೆರೆಗಳಲ್ಲಿ ಹೂಳು ತೆಗೆಯುವ ಕಾರ್ಯ ಮುಂದುವರಿದಿದೆ ಎಂದು ವಿವರಿಸಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಶರಣಪ್ಪ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಕಳೆದ ವರ್ಷ ಹಲವು ಕೆರೆಗಳಲ್ಲಿ ಹೂಳು ತೆರವು ಮಾಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಎಲ್ಲ ಕೆರೆಗಳಲ್ಲಿ ಸ್ವಲ್ಪ ಸ್ವಲ್ಪ ಹೂಳೆತ್ತುವ ಬದಲು ಒಂದು ಕೆರೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವಂತೆ ಸೂಚಿಸಿದರು.

ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳಲ್ಲಿ ಭಾರತೀಯ ಜೈನ ಸಂಘಟನೆ ಸಹಯೋಗದಲ್ಲಿ ಹೂಳು ತೆಗೆಯಲಾಗುತ್ತಿದೆ. ಜಲ ಸಂವರ್ಧನೆ ಯೋಜನೆಯಡಿ ಕೃಷಿ ಇಲಾಖೆಯಿಂದ ಹೂಳು ತೆಗೆಯುವ ಚಟುವಟಿಕೆಗಳಲ್ಲಿ ಇಂಧನದ ವೆಚ್ಚ ಪಾವತಿಸಲಾಗುತ್ತಿದೆ.

Advertisement

ವಿಳಂಬಕ್ಕೆ ಅವಕಾಶವಾಗದಂತೆ ಬಿಲ್ಲುಗಳ ಪಾವತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆರೆ ಹೂಳೆತ್ತುವ ಮುನ್ನ ಫಲವತ್ತಾದ ಮಣ್ಣನ್ನು ಜಮೀನುಗಳಿಗೆ ಹಾಕಿಸುವಂತೆ ಸುತ್ತಲಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು. ತಾಲೂಕು ಮಟ್ಟದಲ್ಲಿ ಉಪಸಮಿತಿ ರಚಿಸಬೇಕು. ಈಗಾಗಲೇ ಹೂಳೆತ್ತಿದ ಕೆರೆಗಳ ದಡದ ಸುತ್ತಲೂ ಗಿಡಮರಗಳನ್ನು ನೆಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶಕುಮಾರ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ, ಭಾರತೀಯ ಜೈನ ಸಂಘಟನೆ ಕಮಲ್‌ಕುಮಾರ, ಜಿಪಂ ಯೋಜನಾ ಧಿಕಾರಿ ಶರಣಬಸವ ಸೇರಿ ಇತರೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next