ರಾಯಚೂರು: ಶೈಕ್ಷಣಿಕ ಗುಣಮಟ್ಟದೊಂದಿಗೆ ಸದಾ ರಾಜಿ ಮಾಡಿಕೊಂಡು ಬರುತ್ತಿರುವ ರಾಯಚೂರು ಜಿಲ್ಲೆಯಲ್ಲಿ ಗ್ರಂಥಾಲಯದಿಂದ ಹೊಸ ಶೈಕ್ಷಣಿಕ ಶಕೆ ಶುರುವಾಗುವಂತಿದೆ. ಸಂಪೂರ್ಣ ಹೈಟೆಕ್ ಮಾದರಿಯಲ್ಲಿ ಗ್ರಂಥಾಲಯಗಳು ನಿರ್ಮಾಣಗೊಳ್ಳುತ್ತಿರುವುದು ವಿಶೇಷ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿಯಾಗಿದ್ದ ಆಮ್ಲನ್ ಬಿಸ್ವಾಸ್ ಅವರು ಗ್ರಂಥಾಲಯಗಳ ಉತ್ತೇಜನಕ್ಕೆ ಸಾಕಷ್ಟು ಒತ್ತು ನೀಡಿದ್ದರು. ಆ ಸಂಪ್ರದಾಯ ಮುಂದುವರಿದಿದ್ದು, ಅದೇ ಕೆಕೆಆರ್‌ಡಿಬಿಯಿಂದ ಜಿಲ್ಲೆಗೆ ಮೂರು ಹೈಟೆಕ್ ಗ್ರಂಥಾಲಯಗಳು ಮಂಜೂರಾಗಿದ್ದು, ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿವೆ. ಸಿಂಧನೂರು, ಮುದಗಲ್ಲ, ಲಿಂಗಸುಗೂರಿನಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲು ಈಗಾಗಲೇ ಸ್ಥಳ ಗುರುತಿಸಿದ್ದು, ಟೆಂಡರ್ ಕೂಡ ಆಗಿದೆ. ಇನ್ನೇನು ಕಾಮಗಾರಿ ಶುರು ಮಾಡುವುದೊಂದೇ ಬಾಕಿ ಎನ್ನುತ್ತಾರೆ ಗ್ರಂಥಾಲಯ ಅಧಿಕಾರಿ. ಸುಸಜ್ಜಿತ ಹಾಗೂ ಅತ್ಯಾಧುನಿಕ ತಾಂತ್ರಿಕತೆ ಒಳಗೊಂಡ ಗ್ರಂಥಾಲಯಗಳಾಗಿರಲಿವೆ.
ಮೂರು ಅಧ್ಯಯನ ಕೇಂದ್ರ: ಹೈಟೆಕ್ ಗ್ರಂಥಾಲಯಗಳು ಮಾತ್ರವಲ್ಲದೇ ಮೂರು ಕಡೆ ಅಧ್ಯಯನ ಕೇಂದ್ರಗಳನ್ನು (ಸ್ಟಡಿ ಸೆಂಟರ್) ಕೂಡ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕೂ ಕೆಕೆಆರ್‌ಡಿಬಿ ಅನುದಾನ ಲಭಿಸಿದ್ದು, ಪ್ರತಿ ಕೇಂದ್ರ ಬರೋಬ್ಬರಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಈ ಕೇಂದ್ರಗಳು ಸಾಕಷ್ಟು ಅನುಕೂಲ ಕಲ್ಪಿಸಲಿವೆ. ಈಗಾಗಲೇ ಮಸ್ಕಿಯಲ್ಲಿ ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದ್ದು, ಮಾನ್ವಿ, ಸಿಂಧನೂರಿಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.
ಡಿಜಿಟಲ್ ಲೈಬ್ರರಿ: ಇನ್ನು ಜಿಲ್ಲೆಗೆ ಕಳೆದ ಬಜೆಟ್ ನಲ್ಲಿ ಎಲ್ಲ ತಾಲೂಕುಗಳಿಗೆ ಡಿಜಿಟಲ್ ಲೈಬ್ರರಿ ಮಂಜೂರಾಗಿದೆ. ಇ-ರೀಡಿಂಗ್ ವ್ಯವಸ್ಥೆ ಇರಲಿದ್ದು, ಕಂಪ್ಯೂಟರ್ ಮೂಲಕವೇ ಆಧ್ಯಯನಕ್ಕೆ ಅನುವು ಮಾಡಿಕೊಡಲಾಗುವುದು. ಈಗಾಗಲೇ ಮಿಂಟ್ ಬುಕ್ ಏಜೆನ್ಸಿ ಎನ್ನುವ ಸಂಸ್ಥೆಗೆ ಟೆಂಡರ್ ಕೂಡ ಆಗಿದೆ. ಪೂರೈಕೆಗೂ ಆದೇಶ ನೀಡಲಾಗಿದೆ. ಪ್ರತಿ ತಾಲೂಕಿಗೆ 5-6 ಕಂಪ್ಯೂಟರ್ ಬರಲಿವೆ. ಶೇ.80ರಷ್ಟು ಸ್ವಂತ ಕಟ್ಟಡ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರು ಜಿಲ್ಲೆಯಲ್ಲೇ ಅತ್ಯ ಧಿಕ ಕಟ್ಟಡಗಳಿವೆ ಎನ್ನುತ್ತಾರೆ ಗ್ರಂಥಾಲಯಾ ಧಿಕಾರಿ. ಜಿಲ್ಲೆಯಲ್ಲಿ 12 ನಗರ ಗ್ರಂಥಾಲಯಗಳು, 158 ಗ್ರಾಮ ಪಂಚಾಯಿತಿ ಗ್ರಂಥಾಲಯಗಳು, 20 ಅಲೆಮಾರಿ ಸಮುದಾಯ ಗ್ರಂಥಾಲಯಗಳಿವೆ.
ಬಹುತೇಕ ಶೇ.80ರಷ್ಟು ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳಿವೆ. ಆದರೆ, ಕೆಲವೊಂದು ಕಾಮಗಾರಿ ಮುಗಿದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಉಳಿದಂತೆ ಬಹುತೇಕ ಎಲ್ಲ ಕಡೆಯೂ ಉತ್ತಮ ಕಟ್ಟಡಗಳಿವೆ ಎನ್ನುವುದು ಅಧಿಕಾರಿಗಳ ವಿವರಣೆ. ಅದರ ಜತೆಗೆ ಕೋಟೆಯಲ್ಲಿ, ನಿಜಲಿಂಗಪ್ಪ ಕಾಲೋನಿಯ ದೇವಸ್ಥಾನದಲ್ಲಿ ವಾಚನಾಲಯಗಳಿವೆ. ಒಂದು ಸೇವಾಕೇಂದ್ರ, ಜೈಲು ಗ್ರಂಥಾಲಯವಿದೆ.