ರಾಯಚೂರು: ಬೈಕ್ ಸವಾರರು ಅಧಿಕೃತ ಕಂಪನಿಗಳ ಗುಣಮಟ್ಟದ ಹೆಲ್ಮೆಟ್ ಬಳಸಬೇಕು ಎಂಬ ನಿಯಮವಿದೆ. ಆದರೆ, ಜಿಲ್ಲೆಯಲ್ಲಿ ಬುಧವಾರ ಪೊಲೀಸರು ಬೈಕ್ ಸವಾರರಿಗೆ ಸಾವಿರ ರೂ. ದಂಡ ಹಾಕಿ, ಬದಲಿಗೆ ಕಳಪೆ ಗುಣಮಟ್ಟದ ಹೆಲ್ಮೆಟ್ ವಿತರಿಸಿರುವುದು ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಸ ಸಂಚಾರಿ ನಿಯಮಗಳ ಪಾಲನೆ ವಿಚಾರದಲ್ಲಿ ವಾಹನ ಸವಾರರು ಮತ್ತು ಪೊಲೀಸರ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ. ಪೊಲೀಸರು ದಂಡ ಹಾಕಿದ್ದು ಅವರ ಕರ್ತವ್ಯ ಇರಬಹುದು. ಆದರೆ, ಅದರ ಬದಲಿಗೆ ವಿತರಿಸಿದ ಹೆಲ್ಮೆಟ್ ಗಳು ಎಷ್ಟು ಗುಣಮಟ್ಟದ್ದಾಗಿವೆ ಎಂಬುದನ್ನು ಪರಿಶೀಲಿಸಿದ್ದಾರಾ? ಹಾಗಾದರೆ ಅವರು ನಿಯಮ ಉಲ್ಲಂಘಿಸಿದರೆ ಸರಿಯಾ ಎಂಬುದು ಬೈಕ್ ಸವಾರರ ಪ್ರಶ್ನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ನೇತೃತ್ವದಲ್ಲಿ ಬುಧವಾರ ಬೆಳಗ್ಗೆಯಿಂದಲೇ ನಗರದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತಗಳಲ್ಲಿ ಹೆಲ್ಮೆಟ್ ಇಲ್ಲದೇ ಓಡಾಡುತ್ತಿದ್ದ ಬೈಕ್ ಸವಾರರನ್ನು ಹಿಡಿದು ದಂಡ ಹಾಕಲಾಗಿದೆ. 100 ಹೆಲ್ಮೆಟ್ ವಿತರಿಸುವ ಗುರಿ ಹೊಂದಿದ್ದು, ಅದಕ್ಕನುಸಾರವಾಗಿ ಬೈಕ್ ಸವಾರರನ್ನು ಹಿಡಿದು ದಂಡ ಹಾಕಲಾಗಿದೆ. ದಂಡ ಕಟ್ಟಿದ ಗ್ರಾಹಕರಿಗೆ ಹೆಲ್ಮೆಟ್ ಕೊಟ್ಟು ಕಳುಹಿಸಲಾಗಿದೆ. ಆದರೆ, ಅವರು ನೀಡಿದ ಹೆಲ್ಮೆಟ್‌ಗಳು ಕಳಪೆ ಗುಣಮಟ್ಟದ್ದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆಲವೊಂದು ಸ್ಥಳದಲ್ಲೇ ಕಿತ್ತು ಹೋಗಿವೆ. ಪೊಲೀಸರ ಈ ಧೋರಣೆಗೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಂಚಾರಿ ನಿಯಮಗಳ ಪಾಲನೆಗೆ ಪೊಲೀಸರು ಈ ರೀತಿ ಕ್ರಮ ಕೈಗೊಳ್ಳುತ್ತಿರುವುದು ಒಳ್ಳೆಯದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನೂ ಕೆಲವರು ದಂಡ ಹಾಕುವುದಕ್ಕೂ ಇತಿ ಮಿತಿ ಇದೆ. ಏಕಾಏಕಿ ಸಾವಿರ ರೂ. ಕಟ್ಟು ಎಂದರೆ ಎಲ್ಲಿಂದ ತರಬೇಕು. ಅದಕ್ಕೂ ಮೊದಲು ನಗರದ
ರಸ್ತೆಗಳನ್ನು ಚೆನ್ನಾಗಿ ಮಾಡಲಿ. ಕೇವಲ ದಂಡ ವಸೂಲಿಗೆ ಮಾತ್ರ ಮುಂದಾದರೆ ಹೇಗೆ ಎಂಬ ಪ್ರಶ್ನೆ ಕೂಡ ಕೇಳಿ ಬಂದಿದೆ.
ವೇಗವಾಗಿ ಹೋಗೋಕೆ ಸಾಧ್ಯವಾ..? ನಗರದ ರಸ್ತೆಗಳನ್ನು ಪೊಲೀಸರು ಒಮ್ಮೆ ಸುತ್ತಾಡಿಕೊಂಡು ಬರಲಿ. ಎಲ್ಲಿಯಾದರೂ ವೇಗವಾಗಿ ಬೈಕ್ ಓಡಿಸಲು ಸಾಧ್ಯವಾ ಎಂಬುದನ್ನು ಹೇಳಲಿ. ಸರ್ಕಾರ ಹೇಳಿದ್ದನ್ನು ಪಾಲಿಸುವುದರ ಜತೆಗೆ ಜನರ ನೋವನ್ನು ಸರ್ಕಾರಕ್ಕೆ ತಲುಪಿಸಲಿ. ಮಂಗಳವಾರ ನಗರದ ಗಂಜ್ ರಸ್ತೆಗೆ ಪೊಲೀಸರೇ ಮುಂದೆ ನಿಂತು
ಮರಂ ಹಾಕಿ ದುರಸ್ತಿ ಮಾಡಿದ್ದಾರೆ. ಅಂಥ ರಸ್ತೆಗಳಲ್ಲಿ ವೇಗವಾಗಿ ಹೋಗಲು ಸಾಧ್ಯವೇ. ಹಾಗಿದ್ದ ಮೇಲೆ ಹೆಲ್ಮೆಟ್ ಯಾಕೆ ಎಂದು ಪ್ರಶ್ನಿಸುತ್ತಾರೆ ಸವಾರರು.