Advertisement

ಸಾಧಕರ ಹಿಂದಿನ ಶಕ್ತಿ ಗುರು

06:33 PM Nov 11, 2019 | Naveen |

ರಾಯಚೂರು: ಕಷ್ಟ ಕಾಲದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಿದ ಶಿಕ್ಷಕರ ಸೇವೆ ಎಷ್ಟು ವರ್ಣಿಸಿದರೂ ಕಡಿಮೆಯೇ. ಇಂದು ಯಾರು ಏನೇ ಸಾಧಿಸಿದರೂ ಅದರ ಹಿಂದಿನ ಶಕ್ತಿ ಶಿಕ್ಷಕರಾಗಿರುತ್ತಾರೆ ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲ ಹೇಳಿದರು.

Advertisement

ನಗರದ ನೀಲಕಂಠೇಶ್ವರ ಕಾಲೋನಿಯ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1997ರಿಂದ 2014 ರವರೆಗಿನ ಹಳೇ ವಿದ್ಯಾರ್ಥಿಗಳ ವೇದಿಕೆಯಿಂದ ರವಿವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಉನ್ನತ ಮಟ್ಟದ ಸಾಧನೆಗೆ ಶಿಕ್ಷಕರ ಶ್ರಮ ಮಹತ್ವದ್ದಾಗಿರುತ್ತದೆ. ಆ ಕಾಲದಲ್ಲಿ ಸಿಗುತ್ತಿದ್ದ ಕಡಿಮೆ ಸಂಬಳದಲ್ಲಿಯೇ ಮಕ್ಕಳಿಗೆ ಬೋಧಿಸಿದ ಶಿಕ್ಷಕರು‌ ಅವರ ಭವಿಷ್ಯ ರೂಪಿಸುವಲ್ಲಿ ಸಾಕಷ್ಟು ಒತ್ತು ನೀಡಿರುತ್ತಾರೆ. ಯಾವ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಂಡಿರುತ್ತಾರೋ ಆ ವಿದ್ಯಾರ್ಥಿಗಳು ಗುರುಗಳನ್ನು ಸ್ಮರಿಸುವ ಮೂಲಕ ಇಂಥ ಕಾರ್ಯಕ್ರಮ ಮಾಡುತ್ತಾರೆ ಎಂದರು.

ಭೇದಭಾವ ಎಣಿಸದೆ ಎಲ್ಲರನ್ನು ಸಮನಾಗಿ ನೋಡುತ್ತಾರೆಂದರೆ ಅದು ಶಿಕ್ಷಕರು ಮಾತ್ರ. ಅವರಿಗೆ ತಮ್ಮ ಎಲ್ಲ ಶಿಷ್ಯರು ದೊಡ್ಡ ಸ್ಥಾನಕ್ಕೆ ಹೋಗಬೇಕು ಎಂದೇ ಆಸೆ ಪಡುತ್ತಾರೆ. ಕಣ್ಣಿಗೆ ಕಾಣುವ ದೇವರಿದ್ದಲ್ಲಿ ಅದು ಗುರುಗಳಲ್ಲದೇ ಬೇರಾರು ಅಲ್ಲ. ಇಂಥ ಹಿಂದುಳಿದ ಭಾಗದಲ್ಲಿ ಶಾಲೆ ಆರಂಭಿಸಿ ಮಕ್ಕಳ ಬೆಳವಣಿಗೆಗೆ ಕಾರಣವಾದ ಎನ್‌ಜಿಒ ಸಂಸ್ಥೆ ಕಾರ್ಯವೂ ಶ್ಲಾಘನೀಯ ಎಂದರು.

ಸಾನ್ನಿಧ್ಯ ವಹಿಸಿದ್ದ ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದಿನ ಕಾಲದಲ್ಲಿ ಗುರುಗಳು ದಂಡಿಸಿ ಕಲಿಸುತ್ತಿದ್ದರೆ ಮಕ್ಕಳಲ್ಲಿ ಕಲಿಯುವ ಶ್ರದ್ಧೆ ಹೆಚ್ಚುತ್ತಿತ್ತು. ಆದರೆ, ಇಂದು ಮಕ್ಕಳಿಗೆ ಯಾವ ಕೊರತೆ ಇಲ್ಲ. ಮಕ್ಕಳಲ್ಲಿ ಮೈಗಳ್ಳತನ ಹೆಚ್ಚಾಗಿದೆ. ವೈದ್ಯರಿಗೂ ಸವಾಲಾದ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಅದಕ್ಕೆ ನಮ್ಮ ಆಲಸ್ಯದ ಜೀವನವೇ ಕಾರಣ. ನಾವು ನಡೆದು ಬಂದ ದಾರಿ ಮರೆಯಬಾರದು ಎಂದರು.

Advertisement

ನಗರಸಭೆ ಸದಸ್ಯ ಎನ್‌.ಕೆ.ನಾಗರಾಜ, ಮುಖಂಡ ಕಡಗೋಲ್‌ ಆಂಜನೇಯ, ಬಿಇಒ ಚಂದ್ರಶೇಖರ ದೊಡ್ಡಮನಿ, ಸಂಘದ ಅಧ್ಯಕ್ಷ ನಾಗರೆಡ್ಡಿ ಹಂಚಿನಾಳ, ಉಪಾಧ್ಯಕ್ಷೆ ಗೀತಾರಾಣಿ, ಮಲ್ಲಣ್ಣ, ಜಿ.ತಿಮ್ಮಣ್ಣ, ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರ, ಸಂಗಯ್ಯ ಹಿರೇಮಠ, ಗುರುರಾಜ ಆಚಾರ್ಯ ಸೇರಿ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next