Advertisement
ಜಿಲ್ಲೆಯಲ್ಲಿ ಈಗ ಬಿಸಿಲಿನ ಪ್ರಮಾಣ 43 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಮಧ್ಯಾಹ್ನ ಧಗೆಗೆ ಹೊರಗೆ ಬರಲಾರದಂಥ ಸನ್ನಿವೇಶವಿದೆ. ಬೆಳಗ್ಗೆ 10 ಗಂಟೆಗೆಲ್ಲ ಸೂರ್ಯನ ತಾಪ ಹೆಚ್ಚಾಗುತ್ತಿದೆ. ಸಂಜೆ 5 ಗಂಟೆಯಾದರೂ ಉಷ್ಣಾಂಶದಲ್ಲಿ ಇಳಿಕೆ ಕಂಡು ಬರುತ್ತಿಲ್ಲ. ಹೀಗಾಗಿ ಚುನಾವಣಾ ಪ್ರಚಾರಕ್ಕೆ ಜನರನ್ನು ಕರೆ ತರುವುದು ಸವಾಲಿನ ಕೆಲಸವಾಗಿದೆ. ಪರಿಸ್ಥಿತಿ ಅರ್ಥೈಸಿಕೊಂಡಿರುವ ರಾಜಕೀಯ ಮುಖಂಡರು ಪ್ರಚಾರ ಅವ ಧಿಯನ್ನೇ ಬದಲಿಸಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಹಳ್ಳಿಗಳತ್ತ ತೆರಳುತ್ತಿದ್ದು, 11 ಗಂಟೆಗೆಲ್ಲ ಒಂದು ಸುತ್ತಿನ ಪ್ರಚಾರ ಮುಗಿಸುತ್ತಿದ್ದಾರೆ. ಪುನಃ ಸಂಜೆ ನಾಲ್ಕು ಗಂಟೆ ಮೇಲ್ಪಟ್ಟು ಪ್ರಚಾರಕ್ಕೆ ತೆರಳುತ್ತಿದ್ದಾರೆ. ಮಧ್ಯಾಹ್ನದ ಅವ ಧಿಯನ್ನು ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಸಭೆ ನಡೆಸಲು ಸೀಮಿತಗೊಳಿಸಿದ್ದಾರೆ.
ರಾಜ್ಯಾದ್ಯಂತ ಪ್ರಚಾರದ ಅಬ್ಬರ ಶುರುವಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಜಿಲ್ಲೆಗೆ ಮಾತ್ರ ಇನ್ನೂ ಯಾವ ನಾಯಕರೂ ಕಾಲಿಟ್ಟಿಲ್ಲ. ಏ.30ರಂದು ಸಿಎಂ ಸಿದ್ದರಾಮಯ್ಯ ರೋಡ್ ಶೋ ನಡೆಸಲಿದ್ದು, ಮೇ 7ರಂದು ಪ್ರಧಾನಿ ಆಗಮಿಸುವರು ಎನ್ನಲಾಗುತ್ತಿದೆ. ಆದರೆ, ಸಮಯ ಇನ್ನೂ ನಿಕ್ಕಿಯಾಗಿಲ್ಲ. ಈವರೆಗೂ ಕೇವಲ ಮನೆ ಮನೆ ಪ್ರಚಾರ ನಡೆಸುತ್ತಿರುವ ರಾಜಕಾರಣಿಗಳು ಸಮಾವೇಶಗಳನ್ನು ಆಯೋಜಿಸಲು ಮುಂದಾಗಿಲ್ಲ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಹಳ್ಳಿಗಳು, ಪಟ್ಟಣ, ನಗರ ಪ್ರದೇಶದ ವಾರ್ಡ್‌ಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.