Advertisement

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

05:07 PM Sep 06, 2019 | Team Udayavani |

ರಾಯಚೂರು: ದೇಶವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವ ದ್ದಾಗಿದೆ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಮಹತ್ತರ ಹೊಣೆ ಶಿಕ್ಷಕರ ಮೇಲಿದೆ ಎಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶಪ್ಪ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ 132ನೇ ಜನ್ಮದಿನಾಚರಣೆ ನಿಮಿತ್ತ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಕೇವಲ ಪಾಠ ಹೇಳುವುದಲ್ಲ. ಸರಳವಾಗಿ, ಮಕ್ಕಳಿಗೆ ಮನವರಿಕೆ ಆಗುವ ರೀತಿಯಲ್ಲಿ ಬೋಧಿಸಬೇಕು. ಬಾಲ್ಯದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಮಕ್ಕಳ ಜೀವನ ಬದಲಿಸಬಲ್ಲದು ಎಂದರು.

ದೇಶ ಕಂಡ ಅಪ್ರತಿಮ ಚಿಂತಕ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನೇ ನಾವು ಇಂದು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ. ಖುದ್ದು ತಾವು ಶಿಕ್ಷಕರಾಗಿದ್ದ ಅವರು ಮುಂದೊಂದು ದಿನ ದೇಶದ ರಾಷ್ಟ್ರಪತಿಗಳಾಗಿ ಅಮೋಘ ಸಾಧನೆ ಮಾಡಿದರು. ಅವರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ಜಿಪಂ ಉಪ ಕಾರ್ಯದರ್ಶಿ ಮಹ್ಮದ್‌ ಯೂಸೂಫ್‌ ಮಾತನಾಡಿ, ಶಿಕ್ಷಕರು ಈ ಹಿಂದೆ ಇದ್ದ ಮೌಲ್ಯಯುತ ಶಿಕ್ಷಣದ ಮಾದರಿಯಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು. ನಾವು ಮಾಡುವ ಕೆಲಸದಿಂದ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ. ಶಿಕ್ಷಕರಲ್ಲಿರುವ ಪ್ರತಿಭೆಗಳನ್ನು ಜಿಲ್ಲೆಯ ಶಿಕ್ಷಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಶಿಕ್ಷಕರ ಕೊರತೆ ಇದೆ. ಆದರೆ, ಹಿಂದೆ ಇದ್ದ ಪ್ರಮಾಣದಲ್ಲಿ ಇಲ್ಲ ಅವುಗಳನ್ನು ಸರಿಪಡಿಸಿಕೊಂಡು ಇಲಾಖೆಯೊಂದಿಗೆ ಸಮನ್ವಯತೆ ಕಾಪಾಡಿಕೊಂಡು ಹೋಗಬೇಕು ಎಂದರು. ಜಿಲ್ಲೆಯ ಶಿಕ್ಷಕರು ರಾಜ್ಯ ರಾಷ್ಟ್ರ ಮಟ್ಟದಲ್ಲಿಯೂ ಪ್ರಶಸ್ತಿ ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಹಿಂದುಳಿದಿದ್ದು, ಅದನ್ನು ಹೆಚ್ಚಿಸಲು ಶಿಕ್ಷಕರು ಮತ್ತಷ್ಟು ಶ್ರಮಿಸಿ ಎಂದರು. ಡಿಡಿಪಿಐ ಬಿ.ಕೆ.ನಂದನೂರು ಮಾತನಾಡಿದರು. ರಾಯಚೂರು ವಿವಿ ವಿಶೇಷಾಧಿಕಾರಿ ಪ್ರೊ| ಮುಜಾಫರ್‌ ಆಸಾದಿ ವಿಶೇಷ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಜಯಮ್ಮ ನರಸಣ್ಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸಿಂ ನಾಯಕ, ಡಯಟ್ ಪ್ರಾಚಾರ್ಯ ಮಲ್ಲಿಕಾರ್ಜುನ ಸ್ವಾಮಿ, ಬಿಇಒ ಅಶೋಕ ಸಿಂದಗಿ, ವೃಷಭೇಂದ್ರ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೈಯ್ಯದ್‌ ಸಿರಾಜ್‌ ಇತರರಿದ್ದರು. ಬಿಇಒ ದೊಡ್ಡಮನಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next