ರಾಯಚೂರು: ಕಾರ್ಮಿಕರ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯ ನಡೆಯುತ್ತಲೇ ಬಂದಿದ್ದು, ಅದನ್ನು ಸಾಮಾಜಿಕ ಕ್ರಾಂತಿ ಮೂಲಕ ವಿರೋಧಿ ಸುತ್ತಲೇ ಬರಲಾಗುತ್ತಿದೆ. ಇಂದು ಕೂಡ ಅಂಥದ್ದೇ ಕ್ರಾಂತಿಯ ಅನಿವಾರ್ಯತೆ ಇದೆ ಎಂದು ಎಸ್‌ಯುಸಿಐ ಸಂಘಟನೆ ರಾಜ್ಯ ಸಮಿತಿ ಸದಸ್ಯ ಎಚ್.ವಿ.ದಿವಾಕರ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಶನಿವಾರ ಎಐಯುಟಿಯುಸಿ ಸಂಘಟನೆಯಿಂದ ಆಯೋಜಿಸಿದ್ದ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಆಳುವ ಸರ್ಕಾರಗಳು ಕಾರ್ಮಿಕರ ಪರ ನಿಲ್ಲದೇ ಬಂಡವಾಳಶಾಹಿ ಪರ ವಕಾಲತ್ತು ವಹಿಸಿದರೆ ಅಲ್ಲಿನ ಕಾರ್ಮಿಕರ ಬದುಕು ಹಸನಾಗದು. ದೇಶದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ಕಟ್ಟು ಬೀಳುವುದರಿಂದ ಕಾರ್ಮಿಕರ ಬದುಕು ಹಸನಾಗುತ್ತಿಲ್ಲ ಎಂದರು.
ರಷ್ಯಾದಲ್ಲಿ ಲೆನಿನ್ ಅವರಿಂದ ಉಂಟಾದ ಕ್ರಾಂತಿ 10 ವರ್ಷಗಳಲ್ಲಿ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ವೇಶ್ಯಾವಾಟಿಕೆಯನ್ನು ಸಂಪೂರ್ಣ ನಿವಾರಿಸಿತು. ಆದರೆ, ನಮ್ಮ ದೇಶದಲ್ಲಿ ಇಂದಿಗೂ ಶೋಷಣೆ ನಿಂತಿಲ್ಲ. ಮೊದಲು ವ್ಯವಸ್ಥೆ ಬದಲಿಸಿದರೆ ಮಾತ್ರ ನಮಗೆ ಉಳಿಗಾಲವಿದೆ. ಅದಕ್ಕಾಗಿ ಎಲ್ಲರೂ ಸಂಘಟಿತ ಹೋರಾಟ ನಡೆಸಲೇಬೇಕಿದೆ ಎಂದರು.
ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಬಳ್ಳಾರಿ ಮಾತನಾಡಿ, ಕೇಂದ್ರ ಸರ್ಕಾರ ಸಂಪೂರ್ಣ ಮಾಲೀಕರ ಪರ ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರ ಪರ ಇದ್ದ ಕಾನೂನುಗಳನ್ನು ಮಾಲೀಕರ ಪರ ಮಾಡುತ್ತಿದೆ. ಖಾಸಗೀಕರಣದ ಅಜೆಂಡಾ ಪ್ರತಿಪಾದಿಸುತ್ತಿದ್ದು, ಪ್ರತಿ ಕ್ಷೇತ್ರವೂ ಖಾಸಗೀರಣಕ್ಕೆ ತುತ್ತಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಬಂಡವಾಳ ಹೂಡಲು ಬನ್ನಿ ಎಂದು ಕರೆಯುತ್ತಿದೆ. ಇದರಿಂದ ದೇಶದಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ ಎಂದರು. ರಾಜ್ಯ ಉಪಾಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ಮಾತನಾಡಿ, ಆಶಾ, ಅಂಗನವಾಡಿ, ಬಿಸಿಯೂಟ, ಶಿಲ್ಪಾ, ರಾಯ್‌ಕೆಂ, ಹಾಸ್ಟೇಲ್, ಕೆಪಿಟಿಸಿಎಲ್ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಯಾಗಿಲ್ಲ.
ಗೌರವ, ಘನತೆಯಿಂದ ಜೀವನ ನಡೆಸುವಂಥ ವೇತನ ಸರ್ಕಾರ ನೀಡಬೇಕು. ಕನಿಷ್ಠ ಮಾಸಿಕ ವೇತನ 21 ಸಾವಿ ರ ರೂ. ನೀಡಬೇಕು ಎಂದು ಒತ್ತಾಯಿಸಿದರು. ವೀರೇಶ ಎನ್.ಎಸ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ತಿರುಮಲರಾವ್ ಪ್ರಾಸ್ತಾವಿಕ ಮಾತನಾಡಿದರು. ಮಹೇಶ, ಅಣ್ಣಪ್ಪ, ಶಿವರಾಜ ಸೇರಿ ಇತರರಿದ್ದರು. ಅದಕ್ಕೂ ಮುಂಚೆ ಪಬ್ಲಿಕ್ ಗಾರ್ಡನ್‌ನಿಂದ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದವರೆಗೂ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಸಲಾಯಿತು.