ರಾಯಚೂರು: ಬೇಸಿಗೆಯಲ್ಲಿ ಕುಡಿಯುವ ನೀರು ನಿರ್ವಹಣೆಯಲ್ಲಿ ಯಾವುದೇ ಲೋಪದೋಷ ಕಂಡು ಬಾರದೆಂಬ ಕಾರಣಕ್ಕೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬೇಸಿಗೆ ಅವಧಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.
ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆಯನ್ನು ಪಾರದರ್ಶಕವಾಗಿ ನಿರ್ವಹಿಸಲು ಈ ಅಪ್ಲಿಕೇಶನ್ ಸಹಕರಿಸಲಿದೆ. ಕುಡಿಯುವ ನೀರು ಪೂರೈಸುವ ಟ್ಯಾಂಕರ್ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗುವುದು. ಆ ವಾಹನವು ಯಾವ ಯಾವ ಸ್ಥಳಗಳಲ್ಲಿ ಸಂಚರಿಸಿದೆ, ಎಲ್ಲೆಲ್ಲಿ ನೀರು ಪೂರೈಸಿದೆ ಎಂಬುದನ್ನು ಖಚಿತವಾಗಿ ಪತ್ತೆ ಹಚ್ಚಬಹುದಾಗಿದೆ. ಇದರಿಂದ ಹಣ ಪಾವತಿಗೂ ಸಮಸ್ಯೆ ಆಗುವುದಿಲ್ಲ ಎಂದರು.
ಮೊದಲ ಹಂತದಲ್ಲಿ ತಹಶೀಲ್ದಾರರು ಹಾಗೂ ವಿಷಯ ನಿರ್ವಾಹಕರಿಗೆ ಈ ಆ್ಯಪ್ ಬಗ್ಗೆ ತರಬೇತಿ ನೀಡಲಾಗಿದೆ. ಉಳಿದಂತೆ ಇತರೆ ಅಧಿಕಾರಿಗಳಿಗೆ ತರಬೇತಿ ನೀಡುವುದಾಗಿ ತಿಳಿಸಿದರು. ಬರಪೀಡಿತ ಪ್ರದೇಶಗಳಾದ ರಾಯಚೂರು, ಲಿಂಗಸುಗೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಈ ಪ್ರದೇಶಗಳಲ್ಲಿ ಬೇಡಿಕೆಯನುಸಾರ ಟ್ಯಾಂಕರ್‌ಗಳ ಮೂಲಕ, ಕೊಳವೆಬಾವಿಗಳ ಮೂಲಕ ಅಥವಾ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಬೇಕಿದೆ. ಸಮಸ್ಯಾತ್ಮಕ ಹಳ್ಳಿಗಳನ್ನು ಪಟ್ಟಿ ಮಾಡಿ. ಕಳೆದ ವರ್ಷ ನೀರಿನ ಸಮಸ್ಯೆ ಎದುರಿಸಿದ ಗ್ರಾಮಗಳ್ಯಾವುವು. ಅಲ್ಲಿ ಕೊಳವೆಬಾವಿಗಳ ಮೂಲಕ ಸಿಗಬಹುದಾದ ನೀರಿನ ಲಭ್ಯತೆ ಅಥವಾ ಖಾಸಗಿ ಕೊಳವೆಬಾವಿಗಳ ಗುರುತಿಸುವಿಕೆ, ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಸೇರಿದಂತೆ ನೀರನ್ನು ಪಡೆಯಲು ಇರುವ ಮಾರ್ಗಗಳನ್ನು ಪತ್ತೆ ಹಚ್ಚುವಂತೆ ಸೂಚಿಸಿದರು.
ತಾಲೂಕುಗಳಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಬೇಕು. ತಹಶೀಲ್ದಾರ್, ತಾಪಂ ಇಒ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಎಇಇ ಅವರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಕೂಡಲೇ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಇಇ ಗಣಪತಿ ಸಾಕರೆ ಅವರಿಗೆ ನಿರ್ದೇಶನ ನೀಡಿದರು.
ಕಳೆದ ಬಾರಿ ಜಿಲ್ಲೆಯ 5 ಸ್ಥಳಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿತ್ತು, ಈ ಬಾರಿಯೂ ಅಗತ್ಯವಿರುವಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ, ಈಗಾಗಲೇ 30 ವಾರಗಳಿಗೆ ಜಿಲ್ಲೆಯಲ್ಲಿ ಮೇವು ಸಂಗ್ರಹವಿದೆ. 42,314 ಮಿನಿ ಕಿಟ್ಸ್ ಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ರೈತರಿಂದ ಮೇವು ಸಂಗ್ರಹಿಸಲು ಕ್ರಮ ಕೈಗೊಳ್ಳಿ, ಹಾಗೂ ಪ್ರತಿ ಹೋಬಳಿ ಮಟ್ಟದಲ್ಲಿ ಕನಿಷ್ಠ 100 ಟನ್ ಮೇವನ್ನು ಸರ್ಕಾರದ ಕಟ್ಟಡಗಳಲ್ಲಿ ಸಂಗ್ರಹಿಸುವಂತೆ ತಿಳಿಸಿದರು.
ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಎಡಿಸಿ ದುರುಗೇಶ, ಐಎಎಸ್ ಪ್ರೊಬೇಷ್ನರಿ ಅಧಿಕಾರಿ ಯುಕೇಶ, ಎಸಿಗಳಾದ ಸಂತೋಷ ಕಾಮಗೌಡ, ರಾಜಶೇಖರ ಡಂಬಳ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹಮದ್ ಇರ್ಫಾನ್, ತಹಶೀಲ್ದಾರ್ ಡಾ| ಹಂಪಣ್ಣ ಇತರರಿದ್ದರು.