ರಾಯಚೂರು: ಕೋವಿಡ್-19 ವೈರಸ್ ಕುರಿತು ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹಬ್ಬಿಸುವವರ ಮೇಲೆ ವಿಶೇಷ ನಿಗಾವಹಿಸಲು ರಾಯಚೂರು ಕೋವಿಡ್-19 ಸೈನಿಕರ ತಂಡ ರಚಿಸಲಾಗಿದೆ. ಈ ಕಾರ್ಯನಿರ್ವಹಣೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಉತ್ಸಾಹಿ ಯುವಕರ ಸ್ವಯಂ ಸೇವಕ ಪಡೆಯೊಂದು ಜಿಲ್ಲೆಯಲ್ಲಿ ಸನ್ನದ್ಧಗೊಂಡಿದೆ.
ಈ ತಂಡವು ಕೋವಿಡ್-19 ವೈರಾಣು ಹರಡುವಿಕೆ ಕುರಿತು ವಿವಿಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ವದಂತಿಗಳನ್ನು ಪತ್ತೆ ಹಚ್ಚಿ ಅವುಗಳ ನೈಜತೆ ಪರಾಮರ್ಶಿಸಿ ನಿಖರ ಮಾಹಿತಿ ನೀಡಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಸಿ ತಿಳಿಸಿದರು.
ಈ ಕುರಿತು ನಗರದ ವಾರ್ತಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವುದು ಕೋವಿಡ್-19 ಸೈನಿಕರ ಕೆಲಸವಾಗಿದೆ. ಅದಕ್ಕಾಗಿ ಜಿಲ್ಲಾಮಟ್ಟದಲ್ಲಿ 15 ಸ್ವಯಂ ಸೇವಕರು ಕೊರೊನಾ ಸೈನಿಕರಾಗಲು ಆಸಕ್ತರಾಗಿ ಮುಂದೆ ಬಂದಿದ್ದಾರೆ ಎಂದು ತಿಳಿಸಿದರು. ಅಂತೆಯೇ ಪ್ರತಿ ತಾಲೂಕಿನಲ್ಲಿಯೂ 20 ಜನರ ತಂಡವು ನಿಗಾ ವಹಿಸಲಿದೆ. ಆಯ್ಕೆಯಾದ ಸೈನಿಕರು ಕೊರೋನಾ ವದಂತಿಗಳ ವಿರುದ್ಧ ಈ ಅಭಿಯಾನ ಜಾರಿಗೆ ತರಲಾಗಿದೆ.
ಈಗಾಗಲೇ ಕೋವಿಡ್-19 ಹರಡಿರುವ ಕುರಿತು ಎರಡು ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಬಗ್ಗೆ ಪತ್ತೆಯಾಗಿದ್ದು, ಗಾಳಿ ಸುದ್ದಿ ಹಾಗೂ ಸುಳ್ಳು ವದಂತಿಗಳನ್ನು ಹಬ್ಬಿಸಿದರೆ ದೂರು ದಾಖಲಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ನಾಗರಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಸುಳ್ಳು ಸುದ್ದಿ ಹಬ್ಬಿಸುವವರ ಕುರಿತು ಮಾಹಿತಿ ನೀಡಬೇಕು. ಇದೇ ವೇಳೆ ಮಾರ್ಗಸೂಚಿಗಳ ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಜಿಲ್ಲಾ ಯುವ ರೆಡ್ ಕ್ರಾಸ್ ಸಂಚಾಲಕ ವಿದ್ಯಾಸಾಗರ, ರೆಡ್‌ಕ್ರಾಸ್‌ನ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದಾರ, ಐಎಚ್‌ಒನ ಹ್ಯುಮಿಟೇಷನ್ ಆರ್ಗನೈಸೇಷನ್‌ನ ಓಂಕಾರ್ ಪಾಟೀಲ್, ದಿಗ್ವಿಜಯ ಎಚ್. ತಲಸ್ತೆ, ರುಷಿಕೇಶ್, ನಾಗೇಶ್ ವಾಡಿಕರ್, ಭಾರತೀಯ ರೆಡ್ ಕ್ರಾಸ್‌ನ ಟಿ.ರಾಮಯ್ಯ ನಾಯಕ, ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ರೆಡ್ ಕ್ರಾಸ್‌ನ ಸದಸ್ಯ ಶ್ರೀನಿವಾಸ ರಾಯಚೂರಕರ್, ಈರಣ್ಣ ಬೆಂಗಾಲಿ, ನಮ್ಮ ರಾಯಚೂರು ಫೌಂಡೇಷನ್ ಅಧ್ಯಕ್ಷ ಪ್ರಭು ಯದ್ಲಾಪುರ ಇತರರಿದ್ದರು.